ADVERTISEMENT

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಆರ್ಭಟ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 4:13 IST
Last Updated 20 ಅಕ್ಟೋಬರ್ 2024, 4:13 IST
<div class="paragraphs"><p>ಶಿವಮೊಗ್ಗ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮಳೆ ಆರ್ಭಟ</p></div>

ಶಿವಮೊಗ್ಗ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮಳೆ ಆರ್ಭಟ

   

ಶಿವಮೊಗ್ಗ: ಶಿವಮೊಗ್ಗ ನಗರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೂ ಮಳೆ ಆರ್ಭಟಿಸಿದೆ. ಬೆಳಿಗ್ಗೆಯೂ ಅರ್ಧ ಗಂಟೆ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಬಿರುಸುಗೊಂಡಿದೆ.

ಕುಂಭದ್ರೋಣ ಮಳೆಗೆ ರಾತ್ರಿಯಿಡೀ ಶಿವಮೊಗ್ಗ ನಗರ ಅಕ್ಷರಶಃ ನಲುಗಿದೆ. ನಗರದ ರಸ್ತೆಗಳು ಹಳ್ಳಗಳಾಗಿ ಬದಲಾಗಿವೆ. ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯೆಲ್ಲ ನಿದ್ರೆಗೆಟ್ಟರು. ಮನೆಯಿಂದ ನೀರು ಹೊರ ಹಾಕುವಲ್ಲಿ ಹೈರಾಣಾದರು.

ADVERTISEMENT

ಮಳೆಯ ಆರ್ಭಟ ಮುಂಜಾನೆವರೆಗೂ ಒಂದೇ ಪ್ರಮಾಣದಲ್ಲಿದ್ದು, ವಿನೋಬ ನಗರ, ಹೊಸಮನೆ, ಕನಕ ನಗರ, ತಮಿಳು ಕಾಲೊನಿ, ಎಲ್ ಬಿಎಸ್ ನಗರ, ಅಶ್ವತ್ಥ ನಗರ, ಕೃಷ್ಣಮಠ ರಸ್ತೆ, ಬಾಪೂಜಿ ನಗರ, ಶರಾವತಿ ನಗರ, ಕಾಶಿಪುರ ಬಡಾವಣೆಗಳು ಜಲಾವೃತವಾಗಿವೆ. ನಗರದ ಮಧ್ಯೆಯೇ ಸಣ್ಣ ಹೊಳೆಗಳು ಉದ್ಭವಿಸಿದಂತೆ ನೀರಿನ ಹರಿವು ಕಂಡುಬಂದಿತು. ಎಲ್ ಬಿಎಸ್ ನಗರ, ಆಲ್ಕೊಳ ಬಡಾವಣೆಯಲ್ಲಿ ವಸತಿ ಪ್ರದೇಶಗಳು ಅಕ್ಷರಶಃ ದ್ವೀಪದಂತಾಗಿವೆ.

ವೃದ್ಧ ದಂಪತಿ ರಕ್ಷಣೆ:

ವಿನೋಬ ನಗರದ ವಿಕಾಸ ಶಾಲೆ ಹಿಂಭಾಗ ಮನೆಗೆ ನೀರು ನುಗ್ಗಿದ್ದು, ಒಳಗೆ ಸಿಲುಕಿಕೊಂಡಿದ್ದ ವೃದ್ಧ ದಂಪತಿಯನ್ನು ನಸುಕಿನಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದರು. ಶರಾವತಿ ನಗರ ಮುಖ್ಯ ರಸ್ತೆಯಲ್ಲಿರುವ ಪಾಸಿಟಿವ್ ಮೈಂಡ್ ಆಸ್ಪತ್ರೆಯ ಬೇಸ್ ಮೆಂಟ್ ಸೆಲ್ಲರ್ ನಲ್ಲಿ ನೀರು ತುಂಬಿದೆ. ಇಡೀ ಆಸ್ಪತ್ರೆ ಕಟ್ಟಡ ಜಲಾವೃತವಾಗಿದೆ.

ಹೊಸಮನೆ - ವಿನೋಬನಗರ ಮಧ್ಯದ ಸಣ್ಣ ಸೇತುವೆ ಮೇಲೆ ಮಳೆ ನೀರು ಹರಿಯುತ್ತಿದೆ. ಸಂಪರ್ಕ ಕಡಿತಗೊಂಡಿದೆ ರಸ್ತೆಯ ಅಕ್ಕಪಕ್ಕದ ಸುಮಾರು 12 ಮನೆಗಳಿಗೆ ನೀರು ನುಗ್ಗಿದೆ.

ಗೋಪಾಲಗೌಡ ಬಡಾವಣೆ ಸಿ ಬ್ಲಾಕ್ ನಲ್ಲಿ ರಾಜಕಾಲುವೆ ಉಕ್ಕಿ ಹರಿದು ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ.

ಟ್ಯಾಂಕ್ ಮೊಹಲ್ಲಾದ ಅಂಗಳಯ್ಯನ ಕೆರೆ ಪ್ರದೇಶ ಜಲಾವೃತವಾಗಿದೆ. ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಬೈಕ್-ಕಾರುಗಳು ನೀರಿನಲ್ಲಿ ಮುಳುಗಿವೆ. ಮನೆಗಳಿಗೆ ನೀರು ನುಗ್ಗಿದೆ. ಮಾರಿಕಾಂಬಾ ದೇವಸ್ಥಾನ ಜಲಾವೃತವಾಗಿದೆ. ಚರಂಡಿ ನೀರು ನುಗ್ಗಿ ದುರ್ವಾಸನೆ ಬೀರುತ್ತಿದೆ.

ಅಣ್ಣಾನಗರ ಬಡಾವಣೆ ಮುಖ್ಯ ರಸ್ತೆಯಲ್ಲಿ ನೀರು ನುಗ್ಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

ನವುಲೆಯ ಕೃಷಿ ಕಾಲೇಜಿನಲ್ಲಿ ಕೃಷಿ-ತೋಟಗಾರಿಕೆ ಮೇಳ ನಡೆಯುತ್ತಿದ್ದು, ಭಾನುವಾರ ಮೇಳದ ಮೂರನೇ ದಿನದ ಸಂಭ್ರಮವನ್ನು ಮಳೆ ಕಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.