ADVERTISEMENT

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ರೈತರ ಅಳಲು

ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ 343 ಹೆಕ್ಟರ್‌ ಭತ್ತದ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 8:00 IST
Last Updated 25 ಅಕ್ಟೋಬರ್ 2024, 8:00 IST
ಶಿವಮೊಗ್ಗ ತಾಲ್ಲೂಕಿನ ಲಕ್ಕಿನಕೊಪ್ಪದಲ್ಲಿ ಭತ್ತದ ಬೆಳೆ ಹಾನಿ ಆಗಿರುವುದನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿರುವುದು
ಶಿವಮೊಗ್ಗ ತಾಲ್ಲೂಕಿನ ಲಕ್ಕಿನಕೊಪ್ಪದಲ್ಲಿ ಭತ್ತದ ಬೆಳೆ ಹಾನಿ ಆಗಿರುವುದನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿರುವುದು   

ಶಿವಮೊಗ್ಗ: ವಾರದ ಹಿಂದೆ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ 353 ಹೆಕ್ಟರ್‌ನಷ್ಟು ಭತ್ತದ ಬೆಳೆ ಹಾನಿಯಾಗಿದೆ.

ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆ ಮುಗಿದ ಮೇಲೆ ಹಾನಿಗೀಡಾಗಿರುವ ಮುಸುಕಿನ ಜೋಳದ ಪ್ರಮಾಣದ ಬಗ್ಗೆಯೂ ಸ್ಪಷ್ಟ ಚಿತ್ರಣ ದೊರೆಯಲಿದೆ.

ವ್ಯಾಪಕ ಮಳೆ ಜೊತೆಗೆ ಬಿರುಗಾಳಿಗೆ ಭತ್ತದ ಬೆಳೆ ಸಂಪೂರ್ಣ ನೆಲಕ್ಕೊರಗಿದೆ. ಕೆಲವೇ ದಿನಗಳಲ್ಲಿ ಕಟಾವಿಗೆ ಬರುವ ಹಂತದಲ್ಲಿ ಇದ್ದ ಬೆಳೆ ಭೂಮಿ ನೀರು ಪಾಲಾಗಿದೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ADVERTISEMENT

ಜಿಲ್ಲೆಯಲ್ಲಿ ಶಿಕಾರಿಪುರ ತಾಲ್ಲೂಕಿನಲ್ಲಿ 255 ಹೆಕ್ಟರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿದೆ.  

ಅಕ್ಟೋಬರ್‌ 1ರಿಂದ 23ರ ವರೆಗೆ ಜಿಲ್ಲೆಯಲ್ಲಿ ಸರಾಸರಿ 12.38 ಸೆಂ.ಮೀ ವಾಡಿಕೆ ಮಳೆ ಆಗಬೇಕಿತ್ತು. ಆದರೆ 26.62 ಸೆಂ.ಮೀ ಮಳೆ ಸುರಿದಿದೆ. ವಾಡಿಕೆಗಿಂತ ಶೇ 115ರಷ್ಟು ಹೆಚ್ಚು ಮಳೆ ಸುರಿದಿರುವುದು ಹಾನಿಯ ಪ್ರಮಾಣವನ್ನು ಬಿಂಬಿಸುತ್ತದೆ.

ಆರಂಭದಲ್ಲಿ ಉತ್ತಮ ಮಳೆ ಬಂದಾಗ ರೈತರ ಮೊಗದಲ್ಲಿ ಖುಷಿ ಆವರಿಸಿತ್ತು. ಈ ಬಾರಿ ಉತ್ತಮ ಫಸಲು ಬರಲಿದೆ ಎಂದು ನಿರೀಕ್ಷೆ ಇತ್ತು. ಅದರೆ ಅದು ಈಗ ಹುಸಿಯಾಗಿದೆ.

ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ಮಾಡಲಾಗುತ್ತಿದೆ. ಅದು ಶೀಘ್ರ ಮುಗಿಯಲಿದೆ. ಮೆಕ್ಕೆಜೋಳದ ಬೆಳೆಗೆ ಆಗಿರುವ ಹಾನಿಯ ಬಗ್ಗೆಯೂ ಸಹ ಸಮೀಕ್ಷೆ ನಡೆಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಕಿರಣಕುಮಾರ್‌ ತಿಳಿಸಿದರು. 

‘ಲಾಭ ಇರಲಿ ಭತ್ತ ಬೆಳೆಯಲು ಮಾಡಿರುವ ಖರ್ಚು ಗಿಟ್ಟುವುದಿಲ್ಲ. ಮತ್ತೆ ಸಾಲದ ಸುಳಿಗೆ ಸಿಲುಕುವಂತಾಗಿದೆ. ಸರ್ಕಾರ ತಕ್ಷಣವೇ ಪರಿಹಾರ ನೀಡಲು ಮುಂದಾಗಬೇಕು’ ಎಂದು ಲಕ್ಕಿನಕೊಪ್ಪದ ರೈತ ಎನ್‌. ಭೀಮಣ್ಣ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.