ಸಾಗರ: ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆಯು ಅ. 2ರಿಂದ 6 ರವರೆಗೆ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮವನ್ನು ಆಯೋಜಿಸಿದೆ.
ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿವಿಧ ಗೋಷ್ಠಿಗಳು ನಡೆಯಲಿದೆ. ಸಂಜೆ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅ. 2 ರ ಆರಂಭಿಕ ಗೋಷ್ಠಿಯನ್ನು ಪರಿಸರ ಲೇಖಕ ನಾಗೇಶ ಹೆಗಡೆ ನಡೆಸಿ ಕೊಡಲಿದ್ದಾರೆ.
ಮಧುರಚೆನ್ನ ಮತ್ತು ಪು.ತಿ.ನಾ.ಅವರ ಆಯ್ದ ಕವಿತೆಗಳ ಕುರಿತ ಪ್ರಸ್ತಾವನೆ, ಚರ್ಚೆಯ ಗೋಷ್ಠಿಯನ್ನು ಮಲ್ಲಪ್ಪ ಬಂಡಿ, ಜ.ನಾ.ತೇಜಶ್ರೀ, ಭವಭೂತಿ ನಾಟಕಗಳನ್ನು ಕುರಿತ ಗೋಷ್ಠಿಯನ್ನು ಮೃಣಾಲ್ ಕೌಲ್, ಸುಂದರ್ ಸಾರುಕ್ಕೈ ಪ್ರಸ್ತುತಪಡಿಸಲಿದ್ದಾರೆ.
‘ಪಠ್ಯಗಳ ಓದಿನ ಕುರಿತ ಜಿಜ್ಞಾಸೆ’ ಗೋಷ್ಠಿಯನ್ನು ಕಮಲಾಕರ ಭಟ್ ಕಡವೆ, ರಾಜೇಂದ್ರ ಚೆನ್ನಿ, ಸಮಕಾಲೀನ ಮರಾಠಿ ನಾಟಕ ರಂಗಭೂಮಿ ಕುರಿತ ಗೋಷ್ಠಿಯನ್ನು ಅಭಿರಾಮ ಭಡ್ಕಮಕರ್ , ಮಕರಂದ ಸಾಠೆ, ಕನ್ನಡದಲ್ಲಿ ಶೇಕ್ ಸ್ಪಿಯರ್ ಕುರಿತ ಉಪನ್ಯಾಸ ಗೋಷ್ಠಿಯನ್ನು ಕವಿ ಎಚ್.ಎಸ್.ಶಿವಪ್ರಕಾಶ್ ನಡೆಸಲಿದ್ದಾರೆ.
ಅಲ್ಲಮನ ವಚನಗಳ ಕೃತಿ ವಿಶ್ಲೇಷಣೆ ಗೋಷ್ಠಿಯನ್ನು ಮನು ದೇವದೇವನ್, ಅಭಿಜಾತ ನಾಟ್ಯದಲ್ಲಿ ಕಥಾಭಿನಯ ಕುರಿತ ಗೋಷ್ಠಿಯನ್ನು ನೃತ್ಯ ಕಲಾವಿದರಾದ ನಿರುಪಮಾ, ರಾಜೇಂದ್ರ ನಡೆಸಿಕೊಡಲಿದ್ದು , ಸುನೀಲ್ ಶಾನಭಾಗ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಅ. 2ರಂದು ಸಂಜೆ 7 ಕ್ಕೆ ನೀನಾಸಂ ತಿರುಗಾಟ ನಾಟಕ ‘ಮಾಲತೀ ಮಾಧವ’ (ರಚನೆ: ಭವಭೂತಿ, ಕನ್ನಡ ರೂಪ, ನಿರ್ದೇಶನ: ಅಕ್ಷರ ಕೆ.ವಿ.), 3 ರಂದು ‘ಅಂಕದ ಪರದೆ’ (ರಚನೆ: ಅಭಿರಾಮ್ ಭಡ್ಕಮ್ಕರ್, ಕನ್ನಡಕ್ಕೆ : ಜಯಂತ ಕಾಯ್ಕಿಣಿ, ನಿರ್ದೇಶನ : ವಿದ್ಯಾನಿಧಿ ವನಾರಸೆ) ನಾಟಕ ಪ್ರದರ್ಶನಗೊಳ್ಳಲಿದೆ.
4 ರಂದು ನೀನಾಸಂ ಬಳಗದಿಂದ ‘ಹಬ್ಬದ ಹನ್ನೆರಡನೇಯ ರಾತ್ರಿ’ (ಮೂಲ : ವಿಲಿಯಂ ಶೇಕ್ ಸ್ಪಿಯರ್, ಕನ್ನಡಕ್ಕೆ : ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ, ನಿರ್ದೇಶನ: ನಟರಾಜ ಹೊನ್ನವಳ್ಳಿ), 5 ರಂದು ಮೈಸೂರಿನ ಸಂಕಲ್ಪ ತಂಡದಿಂದ ‘ಜತೆಗಿರುವನು ಚಂದಿರ’ ( ನಿರ್ದೇಶನ : ಹುಲುಗಪ್ಪ ಕಟ್ಟೀಮನಿ) ನಾಟಕದ ಪ್ರದರ್ಶನವಿದೆ.
6 ರಂದು ಬೆಂಗಳೂರಿನ ಅಭಿನವ ಡ್ಯಾನ್ಸ್ ಕಂಪೆನಿಯಿಂದ ರಸವೈವಿಧ್ಯದ ಅಭಿಜಾತ ನಾಟ್ಯ ಪ್ರಸ್ತುತಿ ‘ರಸರಂಗ’ ( ನಿರ್ದೇಶನ: ನಿರೂಪಮಾ ಮತ್ತು ರಾಜೇಂದ್ರ) ಆಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.