ADVERTISEMENT

ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆಯಿಲ್ಲ: ವಿಜಯೇಂದ್ರ

ಆನವೇರಿಯಲ್ಲಿ ಬೈಕ್ ರ್‍ಯಾಲಿ ಹಾಗೂ ಬಹಿರಂಗ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 15:40 IST
Last Updated 27 ಏಪ್ರಿಲ್ 2024, 15:40 IST
ಹೊಳೆಹೊನ್ನೂರಿನ ಸಮೀಪದ ಆನವೇರಿಯಲ್ಲಿ ಬಿ.ವೈ ವಿಜಯೇಂದ್ರ ಪ್ರಚಾರ ಸಭೆ ಉದ್ಘಾಟಿಸಿದರು
ಹೊಳೆಹೊನ್ನೂರಿನ ಸಮೀಪದ ಆನವೇರಿಯಲ್ಲಿ ಬಿ.ವೈ ವಿಜಯೇಂದ್ರ ಪ್ರಚಾರ ಸಭೆ ಉದ್ಘಾಟಿಸಿದರು   

ಹೊಳೆಹೊನ್ನೂರು: ‘ರಾಜ್ಯದಲ್ಲಿ ಹಗಲಲ್ಲೇ ಹೆಣ್ಣುಮಕ್ಕಳು ನಿರಾಂತಕವಾಗಿ ಓಡಾಡುವುದು ಕಷ್ಟವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದರು.

ಅವರು ಸಮೀಪದ ಆನವೇರಿಯಲ್ಲಿ ಪಟ್ಟಣ ಮಂಡಲ ಯುವ ಮೋರ್ಚಾ ಹಾಗೂ ಬಿಜೆಪಿ ಮಂಡಲ ವತಿಯಿಂದ ಅರಬಿಳಚಿ ಕ್ಯಾಂಪ್‌ನಿಂದ ಆನವೇರಿಯವರೆಗೂ ಶುಕ್ರವಾರ ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿ ಹಾಗೂ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ಈಚೆಗೆ 10 ಹಿಂದೂಗಳ ಕೊಲೆಗಳು ನಡೆದಿವೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್‌ಗೆ ಗ್ಯಾರಂಟಿಗಳು ಕಣ್ಣು ಕಟ್ಟಿವೆ. ಕಾಂಗ್ರೆಸ್‌ನ ಉಚಿತ ಭಾಗ್ಯಗಳಿಂದಾಗಿ ಕಳೆದ 10 ತಿಂಗಳಲ್ಲಿ ರಾಜ್ಯದ 1.25 ಕೋಟಿ ಕುಟುಂಬಗಳ ಬಡತನ ನಿವಾರಣೆಯಾಗಿದೆ ಎಂದಾದರೆ, 60 ವರ್ಷಗಳಿಂದ ಇದನ್ನು ಯಾಕೆ ಮಾಡಲಿಲ್ಲ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಬರಗಾಲವನ್ನು ತಂದಿಟ್ಟಿದೆ. ಈ ಸಂದರ್ಭದಲ್ಲಿ ರೈತರ ಹಿತ ಕಾಪಾಡಬೇಕಾದ ಸರ್ಕಾರವು, ಗ್ಯಾರಂಟಿಗಳ ಬೆನ್ನುಬಿದ್ದು ರಾಜ್ಯಕ್ಕೆ ಆರ್ಥಿಕ ಸಂಕಷ್ಟ  ತಂದಿಡುತ್ತಿದೆ. ಜಾಹೀರಾತುಗಳಿಗೆ ಸಾವಿರಾರು ಕೋಟಿ ರೂಪಾಯಿ ನೀಡುತ್ತಿರುವ ಕಾಂಗ್ರೆಸ್‌ಗೆ ಜನಹಿತ ಬೇಡವಾಗಿದೆ. ಹಿಂದುಳಿದ ವರ್ಗಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತರ ಓಲೈಕೆಗೆ ಕಸರತ್ತು ನಡೆಸುತ್ತಿದೆ. ರಾಜ್ಯದ ಅಭಿವೃದ್ಧಿ ಅಕ್ಷರಶಃ ಮರೀಚಿಕೆಯಾಗಿದೆ. ರಾಜ್ಯ ಸರ್ಕಾರದ ದುರಾಡಳಿತಕ್ಕೆ ಸಿಲುಕಿ ಜನತೆ ನಲುಗುತ್ತಿದ್ದಾರೆ’ ಎಂದು ವಿಜಯೇಂದ್ರ ಆರೋಪಿಸಿದರು. 

ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರಿನಲ್ಲಿ ನಮ್ಮ ಅಭ್ಯರ್ಥಿಗಳು ಬಹುಮತದೊಂದಿಗೆ ಜಯ ಗಳಿಸುವುದರಲ್ಲಿ ಎರಡು ಮಾತಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ. ಶಿವಮೊಗ್ಗದಲ್ಲಿ ಬಿ.ವೈ ರಾಘವೇಂದ್ರ 3 ಲಕ್ಷ ಅಧಿಕ ಮತಗಳಿಂದ ಗೆಲುವು ದಾಖಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟುಗೂಡಿಸಿ ಪಡೆದ 1.50 ಲಕ್ಷ ಮತಗಳನ್ನು ಕ್ರೋಢೀಕರಿಸಿದರೆ, ರಾಘವೇಂದ್ರ ಕೇಂದ್ರ ಸರ್ಕಾರದಲ್ಲಿ ಸಚಿವರಾಗುವುದನ್ನು, ರಾಜ್ಯದಲ್ಲಿ ವಿಜಯೇಂದ್ರ ಮುಖ್ಯಮಂತ್ರಿಯಾಗುವುದು ತಡೆಯಲು ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ’ ಎಂದು ಮಾಜಿ ಶಾಸಕ ಅಶೋಕ್ ನಾಯ್ಕ ಹೇಳಿದರು. 

ಶಾಸಕಿ ಶಾರದಾ ಪೂರ್ಯಾನಾಯ್ಕ, ಮಾಜಿ ಶಾಸಕ ಕುಮಾರಸ್ವಾಮಿ, ಪರಿಷತ್ ಸದಸ್ಯರಾದ ರುದ್ರೇಗೌಡ, ಭಾರತೀ ಶೆಟ್ಟಿ, ಯುವ ಘಟಕದ ಅಧ್ಯಕ್ಷ ಕಿರಣ್‌ಗೌಡ, ವೈದ್ಯ ಧನಂಜಯ್ ಸರ್ಜಿ, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ವೀರಭದ್ರಪ್ಪ ಪೂಜಾರ್, ಸತೀಶ್ ಕೆ. ಶೆಟ್ಟಿ, ಕಾಂತರಾಜ್, ಎಸ್.ಶ್ರೀನಿವಾಸ್, ಡಿ.ಮಂಜುನಾಥ್, ಸುಬ್ರಮಣ್ಣಿ, ರಾಜೇಶ್ ಪಾಟೀಲ್, ಬಾಳೋಜಿ ಬಸವರಾಜ್, ರಾಧಾಕೃಷ್ಣ, ಶಂಕರಮೂರ್ತಿ, ಮಹಾದೇವಪ್ಪ, ಕಿರಣ್ ಕುಮಾರ್ ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.