ಹೊಸನಗರ: ತಾಲ್ಲೂಕಿನ ಚಿಕ್ಕಪೇಟೆ ನಗರದಲ್ಲಿ ಏಳು ಜನರ ಮೇಲೆ ಎರಡೆರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದು, ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.
ಶನಿವಾರ ಬೆಳಿಗ್ಗೆ ಚಿಕ್ಕಪೇಟೆ ಸೇತುವೆ ಬಳಿ ಇರುವ ಬಾಷಾ ಎಂಬವರ ಮನೆ ಸಮೀಪ ಹೆಜ್ಜೇನು ದಾಳಿ ಮಾಡಿದೆ. ಬಾಷಾ, ಅವರ ಪತ್ನಿ ಆಸ್ಮಾ, ಮಕ್ಕಳಾದ ಆರೀಫ್ ಮತ್ತು ಅನೀಫ್ ಮೇಲೆ ಹೆಜ್ಜೇನು ದಾಳಿ ಮಾಡಿದೆ. ಕೂಡಲೇ ನಗರ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಮತ್ತೆ ದಾಳಿ: ಸಂಜೆ 5 ಗಂಟೆ ವೇಳೆಗೆ ಅದೇ ಜಾಗದಲ್ಲಿ ಹೆಜ್ಜೇನು ದಾಳಿ ನಡೆಸಿದೆ. ಬೆಳಿಗ್ಗೆ ದಾಳಿಗೆ ಒಳಗಾಗಿದ್ದ ಬಾಷಾ ಅವರ ಪುತ್ರ ಆರೀಫ್ ಹಾಗೂ ಪಕ್ಕದ ಮನೆಯ ಯಾಸಿನ್ ಮೇಲೆ ಮತ್ತೆ ಹೆಜ್ಜೇನು ಎರಗಿವೆ. ಇದೇ ವೇಳೆ ಹಾಸಿಗೆ ರಿಪೇರಿಗೆ ಬಂದ ಶಿವಮೊಗ್ಗದ ಮಂಜುನಾಥ ಬಡಾವಣೆ ನಿವಾಸಿ ಹುಸೇನ್ ಸಾಬ್ (68) ಮತ್ತು ಅವರ ಮಗ ಬಾಬಾ ಸಾಬ್ ಎಂಬವರ ಮೇಲೂ ಹೆಜ್ಜೇನುಗಳಿಂದ ಕಚ್ಚಿಸಿಕೊಂಡಿದ್ದಾರೆ. ವೃದ್ಧ ಹುಸೇನ್ ಸಾಬ್ ಅವರ ಸ್ಥಿತಿ ಗಂಭೀರವಾಗಿದೆ. ಅವರ ದೇಹದಿಂದ ನೂರಾರು ಮುಳ್ಳುಗಳನ್ನು ಹೊರತೆಗೆಯಲಾಗಿದೆ.
ಒಂದೇ ಜಾಗದಲ್ಲಿ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕ ಹಾಗೂ ಭೀತಿಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.