ಸಾಗರ: ಹೊಸನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯನ್ನು ಸಾಗರದ ಸಮಿತಿಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ನಡೆಯಾಗಿದೆ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಹೇಳಿದ್ದಾರೆ.
‘ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆಗೆ ತಿದ್ದುಪಡಿ ತಂದಾಗಲೇ ಈ ಅಪಾಯದ ಸುಳಿವು ದೊರಕಿತ್ತು. ತಿದ್ದುಪಡಿಯನ್ನು ವಿರೋಧಿಸಿದಾಗ ರಾಜ್ಯದ ಬಿಜೆಪಿ ಮುಖಂಡರು ತಿದ್ದುಪಡಿಯಿಂದ ಎಪಿಎಂಸಿಗೆ ಅಪಾಯವಿಲ್ಲ ಎಂದು ಹೇಳಿದ್ದರು. ಆದರೆ, ಈಗ ಬಿಜೆಪಿ ಸರ್ಕಾರ ನಿಧಾನಕ್ಕೆ ಎಪಿಎಂಸಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ಸೂಚನೆಗಳು ಸ್ಪಷ್ಟವಾಗಿ ಕಾಣುತ್ತಿವೆ’ ಎಂದು ಅವರು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಹೊಸನಗರ ತಾಲ್ಲೂಕು ಈಗಾಗಲೇ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪ್ರದೇಶವಾಗಿದೆ. ಅಲ್ಲಿರುವ ಎಪಿಎಂಸಿಯನ್ನು ಸಾಗರದ ಎಪಿಎಂಸಿಯೊಂದಿಗೆ ವಿಲೀನಗೊಳಿಸಿದರೆ ಆ ಪ್ರದೇಶ ಮತ್ತಷ್ಟು ಹಿನ್ನಡೆ ಕಾಣುವುದರಲ್ಲಿ ಸಂಶಯವಿಲ್ಲ. ಇದು ಹೊಸನಗರ ತಾಲ್ಲೂಕಿಗೆ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸನಗರದ ಎಪಿಎಂಸಿಯನ್ನು ಯಾವುದೇ ಕಾರಣಕ್ಕೂ ಸಾಗರದ ಎಪಿಎಂಸಿಯೊಂದಿಗೆ ವಿಲೀನಗೊಳಿಸಲು ಸರ್ಕಾರ ಮುಂದಾಗಬಾರದು. ರಾಜ್ಯದ ಎಲ್ಲಾ ಎಪಿಎಂಸಿಗಳ ಬಲವರ್ಧನೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.