ADVERTISEMENT

ತೀರ್ಥಹಳ್ಳಿ | ವಿದ್ಯಾರ್ಥಿನಿಲಯ ಅವ್ಯವಸ್ಥೆಯ ಆಗರ

ಸಮಸ್ಯೆಗಳಿಗೆ ಪರಿಹಾರ ನೀಡದ ಮೇಲ್ವಿಚಾರಣಾ ಸಮಿತಿ

ನಿರಂಜನ ವಿ.
Published 26 ಜೂನ್ 2024, 6:02 IST
Last Updated 26 ಜೂನ್ 2024, 6:02 IST
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ   

ತೀರ್ಥಹಳ್ಳಿ: ಇಲ್ಲಿನ ಬಾಲಕರ, ಬಾಲಕಿಯರ ವಿದ್ಯಾರ್ಥಿನಿಲಯಗಳು ಅವ್ಯವಸ್ಥೆಗಳ ಆಗರವಾಗಿದ್ದು, ಅವುಗಳ ನಿರ್ವಹಣೆಗಾಗಿ ಅಧಿಕಾರಿಗಳ ಮೇಲ್ವಿಚಾರಣಾ ಉಸ್ತುವಾರಿ ಸಮಿತಿ ಇದ್ದರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ.

ಇಲ್ಲಿನ ಸೊಪ್ಪುಗುಡ್ಡೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಈಚೆಗೆ ಹಲ್ಲಿ ಬಿದ್ದಿದ್ದ ಸಾರನ್ನೇ ಉಣಬಡಿಸಲಾಗಿದೆ. ತಟ್ಟೆ ಹಿಡಿದ ನಾಲ್ಕೈದು ವಿದ್ಯಾರ್ಥಿನಿಯರಿಗೆ ಹಲ್ಲಿಯ ತಲೆ, ಕಾಲು, ಬಾಲದ ತುಂಡುಗಳು ಸಿಕ್ಕಿರುವುದು ಆತಂಕ ಮೂಡಿಸಿದೆ.

ವಿದ್ಯಾರ್ಥಿನಿಲಯದಲ್ಲಿ ಬೇಕಾಬಿಟ್ಟಿಯಾಗಿ ಆಹಾರ ವಿತರಿಸಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವಂತೆ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಅಡುಗೆ ಮಾಡುವ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.

ADVERTISEMENT

ಕೊಣಂದೂರು ಬಿಸಿಎಂ, ಬೆಟ್ಟಮಕ್ಕಿಯ ಸಮಾಜ ಕಲ್ಯಾಣ ಇಲಾಖೆಯ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿನಿಲಯಗಳು ಒಂದೇ ಕಟ್ಟಡದಲ್ಲಿ ನಡೆಯುತ್ತಿವೆ. 10ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಮತ್ತು ಪಿಯುಸಿ, ಪದವಿ ವಿದ್ಯಾರ್ಥಿಗಳನ್ನು ಒಂದೇ ಕಟ್ಟಡದಲ್ಲಿ ಇಟ್ಟಿರುವುದರಿಂದ ಚಿಕ್ಕ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಮಕ್ಕಳ ದೃಷ್ಟಿಯಿಂದ ವಿದ್ಯಾರ್ಥಿನಿಲಯವನ್ನು ಶೀಘ್ರ ಬೇರ್ಪಡಿಸುವ ಅಗತ್ಯವಿದೆ. ಅನೇಕ ಕಟ್ಟಡಗಳು ಮಳೆಯಿಂದ ಸೋರುತ್ತಿದ್ದು, ದುರಸ್ತಿ ಕಾರ್ಯ ನಡೆಯಬೇಕಿದೆ ಎಂದು ಪಾಲಕರಾದ ಮಂಜುನಾಥ ಆಗ್ರಹಿಸಿದರು.

ವಿದ್ಯಾರ್ಥಿಗಳ ಸಂಖ್ಯೆ ಕೊರತೆಯಿಂದ ಒಂದೇ ಕಟ್ಟಡದಲ್ಲಿ ವಿದ್ಯಾರ್ಥಿನಿಲಯ ನಡೆಸುವುದು ಅನಿವಾರ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್‌. ಶೈಲಾ ಹೇಳುತ್ತಾರೆ.

ಅಡುಗೆ ಸಿಬ್ಬಂದಿ ನಿರ್ಲಕ್ಷ್ಯದ ಕಾರಣ ಸಾಂಬಾರ್‌ನಲ್ಲಿ ಹಲ್ಲಿ ಬಿದ್ದಿತ್ತು. ಹಾಸ್ಟೆಲ್‌ ಅವ್ಯವಸ್ಥೆ ಬಗ್ಗೆ ಜಿಲ್ಲಾಡಳಿತ ಗಂಭೀರ ಕ್ರಮ ಕೈಗೊಳ್ಳಬೇಕು.
ಟಿ.ಎಲ್.‌ ಸುಂದರೇಶ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಸಾರಿನಲ್ಲಿ ಹಲ್ಲಿ ಬಿದ್ದಿರಲಿಲ್ಲ. ಕಪ್ಪು ಪದಾರ್ಥ ಬಿದ್ದಿದ್ದ ಬಗ್ಗೆ ದೂರು ಬಂದಿದ್ದು ಮತ್ತೆ ಅಡುಗೆ ತಯಾರಿಸಿ ವಿತರಿಸಲಾಗಿದೆ. 
ಎ.ಆರ್.‌ ಸತೀಶ್, ಸಹಾಯಕ ನಿರ್ದೇಶಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತೀರ್ಥಹಳ್ಳಿ 
ವಾರ್ಡನ್‌ ಸಿಬ್ಬಂದಿ ಮೇಲ್ವಿಚಾರಣಾ ಸಮಿತಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಹಾಸ್ಟೆಲ್‌ಗಳಲ್ಲಿ ಆಹಾರದ ಗುಣಮಟ್ಟ ಪರಿಶೀಲನೆಗೆ ಅನಿರೀಕ್ಷಿತ ಭೇಟಿ ನೀಡಲಾಗುವುದು.
ಎನ್‌. ಶೈಲಾ, ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.