ADVERTISEMENT

ಶಿವಮೊಗ್ಗ: ಹೋಟೆಲ್ ತಿಂಡಿ–ತಿನಿಸು ದರ ಶೇ 10ರಷ್ಟು ಹೆಚ್ಚಳ

ಹಾಲು, ದಿನಸಿ ಬೆಲೆ ಹೆಚ್ಚಳ: ಹೋಟೆಲ್ ಮಾಲೀಕರ ಅಳಲು

ವೆಂಕಟೇಶ ಜಿ.ಎಚ್.
Published 2 ಆಗಸ್ಟ್ 2023, 5:07 IST
Last Updated 2 ಆಗಸ್ಟ್ 2023, 5:07 IST
ಶಿವಮೊಗ್ಗದ ಗಾಂಧಿ ನಗರದ ಕ್ಯಾಂಟೀನ್‌ನಲ್ಲಿ ಮಂಗಳವಾರ ಗ್ರಾಹಕರಿಗೆ ಚಹಾ ಹಾಕಿ ಕೊಡುತ್ತಿರುವುದು
ಶಿವಮೊಗ್ಗದ ಗಾಂಧಿ ನಗರದ ಕ್ಯಾಂಟೀನ್‌ನಲ್ಲಿ ಮಂಗಳವಾರ ಗ್ರಾಹಕರಿಗೆ ಚಹಾ ಹಾಕಿ ಕೊಡುತ್ತಿರುವುದು    – ಪ್ರಜಾವಾಣಿ ಚಿತ್ರ: ಶಿವಮೊಗ್ಗ ನಾಗರಾಜ್

ಶಿವಮೊಗ್ಗ: ಹಾಲು– ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಳಗೊಳ್ಳುತ್ತಿದ್ದಂತೆಯೇ ಶಿವಮೊಗ್ಗದ ಕೆಲವು ಹೋಟೆಲ್‌ಗಳಲ್ಲಿ ಕಾಫಿ– ಚಹಾದ ಬೆಲೆ ಏರಿಕೆಯಾಗಿದೆ. ಆದರೆ ಬೆಲೆ ಹೆಚ್ಚಳದ ನಿರ್ಧಾರದಿಂದ ಶಿವಮೊಗ್ಗ ಹೋಟೆಲ್ ಮಾಲೀಕರ ಸಂಘ ಅಂತರ ಕಾಯ್ದುಕೊಂಡಿದೆ.

‘ಬೇರೆ ಕಡೆಗಿಂತ ನಮ್ಮಲ್ಲಿ ಬೆಲೆ ಕಡಿಮೆ ಇತ್ತು. ಆದರೆ, ಹಾಲಿನ ದರ, ದಿನಸಿ ಸಾಮಗ್ರಿ ಜೊತೆಗೆ ಗ್ಯಾಸ್‌ ಸಿಲಿಂಡರ್ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ನಮ್ಮ ಹೋಟೆಲ್‌ನಲ್ಲಿ ಚಹಾ–ಕಾಫಿ ದರ ₹ 2 ಹೆಚ್ಚಳಗೊಳಿಸಿದ್ದೇವೆ’ ಎಂದು ಇಲ್ಲಿನ ಗಾಂಧಿ ಬಜಾರ್‌ನ ಕ್ಯಾಂಟೀನ್‌ವೊಂದರ ವ್ಯವಸ್ಥಾಪಕಿ ಮಂಗಳಾ ‘ಪ್ರಜಾವಾಣಿ’ಗೆ ತಿಳಿಸಿದರು.

ಚಹಾ, ಕಾಫಿ ಈ ಮೊದಲು ₹ 6 ಇತ್ತು. ಅದೀಗ ₹ 8ಕ್ಕೆ ಏರಿಕೆಯಾಗಿದೆ. ಹಾರ್ಲಿಕ್ಸ್, ಬೂಸ್ಟ್, ಬೋರ್ನ್‌ವಿಟಾ, ಹಾಲು ಈ ಮೊದಲು ಪ್ರತಿ ಕಪ್‌ಗೆ ₹ 8 ಇತ್ತು. ಅದೀಗ ₹ 10ಕ್ಕೆ ಹೆಚ್ಚಳಗೊಂಡಿದೆ.

ADVERTISEMENT

ಶೇ 10ರಷ್ಟು ದರ ಹೆಚ್ಚಳ: ‘ಈಗ ಹಾಲಿನ ದರ ಹೆಚ್ಚಳವಾಗಿದೆ ಎಂಬ ಕಾರಣಕ್ಕಾಗಿ ಈಗ ಶಿವಮೊಗ್ಗದ ಹೋಟೆಲ್‌ಗಳಲ್ಲಿ ತಿಂಡಿ–ಊಟದ ದರ ಹೆಚ್ಚಳವಾಗಿಲ್ಲ. ಬದಲಿಗೆ ವಾರದ ಮುಂಚೆಯೇ ಹೆಚ್ಚಳ ಮಾಡಿದ್ದೇವೆ. ನಮಗೆ ತೊಂದರೆ, ಕೈಕಟ್ಟಲು ಆರಂಭವಾಗುತ್ತಿದ್ದಂತೆಯೇ ಬೆಲೆ ಹೆಚ್ಚಿಸಿದ್ದೇವೆ. ಶೇ 10ರಷ್ಟು ಏರಿಕೆ ಮಾಡಿದ್ದೇವೆ’ ಎಂದು ಮಥುರಾ ಪ್ಯಾರಡೈಸ್ ಮಾಲೀಕರೂ ಆದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಹೇಳುತ್ತಾರೆ.

‘ದುಡಿಯಲು ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುತ್ತೇವೆ. ಹೀಗೆ ತಿಂಡಿ– ಊಟದ ಬೆಲೆ ಏರಿಕೆಯಾದರೆ ನಮ್ಮ ದುಡಿಮೆಯ ಹೆಚ್ಚಿನ ಪಾಲು ಇಲ್ಲಿಯೇ ಕಳೆದುಹೋಗುತ್ತದೆ. ಮನೆಗೆ ಏನು ಒಯ್ಯುವುದು’ ಎಂದು ಆಲ್ಕೊಳದ ಕಟ್ಟಡ ಕಾರ್ಮಿಕ ಎಸ್‌.ಎಂ.ಸೌದಾಗರ್‌ ಬೇಸರ ವ್ಯಕ್ತಪಡಿಸುತ್ತಾರೆ.

ಹಾಲಿನ ಬೆಲೆ ಹೆಚ್ಚಳದಿಂದ ಬರೀ ಹೋಟೆಲ್‌ನವರು ಮಾತ್ರವಲ್ಲ ಜನಸಾಮಾನ್ಯರಿಗೂ ತೊಂದರೆಯಾಗಿದೆ. ಹಾಲು, ಸಿಲಿಂಡರ್ ಬೆಲೆ ಇಳಿಸಲು ಸರ್ಕಾರ ಮುಂದಾಗಲಿ ಎಂದು ಒತ್ತಾಯಿಸುತ್ತಾರೆ.

ಬೆಲೆ ಹೆಚ್ಚಳವಿಲ್ಲ: ಹೋಟೆಲ್ ಮಾಲೀಕರ ಸಂಘ
‘ಬೆಂಗಳೂರಿನ ಹೋಟೆಲ್‌ಗಳಲ್ಲಿ ಮಾತ್ರ ಆಗಸ್ಟ್‌ 1ರಿಂದ ಊಟ–ತಿಂಡಿಯ ಬೆಲೆ ಹೆಚ್ಚಳಗೊಂಡಿದೆ. ಆದರೆ ಶಿವಮೊಗ್ಗದಲ್ಲಿ ಬೆಲೆ ಏರಿಕೆ ಮಾಡದಿರಲು ತೀರ್ಮಾನಿಸಿದ್ದೇವೆ’ ಎಂದು ಇಲ್ಲಿನ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ ಹೇಳುತ್ತಾರೆ. ‘ಶಿವಮೊಗ್ಗ ನಗರದ ಹೋಟೆಲ್ ಮಾಲೀಕರ ಸಂಘದ ವ್ಯಾಪ್ತಿಯಲ್ಲಿ 200 ಹೋಟೆಲ್‌ಗಳು ನೋಂದಣಿಯಾಗಿವೆ. ಕೋವಿಡ್ ನಂತರ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. ಈಗ ಆಷಾಢ ಅಧಿಕ ಮಾಸ ನಿರಂತರ ಮಳೆಯಿಂದ ಹೋಟೆಲ್‌ಗಳಿಗೆ ಗ್ರಾಹಕರ ಸಂಖ್ಯೆಯೂ ಇಳಿಮುಖವಾಗಿದೆ. ಇಂತಹ ಸಂದರ್ಭದಲ್ಲಿ ಊಟ–ತಿಂಡಿಯ ಬೆಲೆ ಹೆಚ್ಚಿಸಿದರೆ ಗ್ರಾಹಕರು ತಳ್ಳುವ ಗಾಡಿಗಳನ್ನು ಆಶ್ರಯಿಸಿಬಿಡುತ್ತಾರೆ. ಹೀಗಾಗಿ ನಾವು (ಸಂಘ) ಬೆಲೆ ಏರಿಕೆ ಮಾಡುವುದಿಲ್ಲ’ ಎಂದು ಹೊಳ್ಳ ತಿಳಿಸಿದರು. ‘ತೀರಾ ಸಂಕಷ್ಟದಲ್ಲಿರುವವರು ಈ ಹಿಂದೆ ಬೆಲೆ ಹೆಚ್ಚಳ ಮಾಡದೇ ಕಡಿಮೆ ಬೆಲೆಗೆ ಊಟ–ತಿಂಡಿ ಕೊಡುತ್ತಿರುವವರು ಅವರ ಹಂತದಲ್ಲಿ ಬೆಲೆ ಹೆಚ್ಚಳ ಮಾಡಿಕೊಳ್ಳಬಹುದು. ಅದು ಹೋಟೆಲ್ ಮಾಲೀಕರ ಸಂಘದ ನಿರ್ಧಾರವಲ್ಲ’ ಎಂದು ಹೇಳಿದರು.

ನಷ್ಟದ ಆತಂಕ - ಬೆಲೆ ಏರಿಕೆ ಅನಿವಾರ್ಯ

ವಿ.ನಿರಂಜನ್ತೀರ್ಥಹಳ್ಳಿ: ಎಲ್ಲ ದಿನಸಿ ಸಾಮಗ್ರಿಗಳ ಬೆಲೆ ವಿಪರೀತ ಏರಿಕೆಯಾಗಿದೆ. ತಿಂಡಿ ತಿನಿಸುಗಳ ದರ ಹೆಚ್ಚಿಸದಿದ್ದರೆ ಹೋಟೆಲ್ ಉದ್ಯಮ ನಷ್ಟದ ಸುಳಿಗೆ ಸಿಲುಕಲಿದೆ. ಮುಂದಿನ ವಾರದಿಂದ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಪಟ್ಟಣದ ಹೋಟೆಲ್ ಮಾಲೀಕರು.

‘ಕೇವಲ ಹಾಲು ಮಾತ್ರ ಹೆಚ್ಚಳವಾಗಿದ್ದರೆ ತಿಂಡಿ ತಿನಿಸುಗಳ ಲಾಭದಿಂದ ನಿರ್ವಹಣೆ ಮಾಡಬಹುದಿತ್ತು. ತರಕಾರಿ ದಿನಸಿ ಸಾಮಗ್ರಿ ವಿದ್ಯುತ್ ದರ ಅಧಿಕವಾಗಿದೆ. ಲಾಭಾಂಶ ಇಲ್ಲದೆ ಉದ್ಯಮ ನಡೆಸುವುದು ಕಷ್ಟ. ಟೀ ಕಾಫಿಗೆ ₹ 2 ತಿಂಡಿ ತಿನಿಸುಗಳಿಗೆ ₹ 5 ರೂಪಾಯಿ ಹೆಚ್ಚಿಸಲು ನಿರ್ಧರಿಸಿದ್ದೇನೆ’ ಎಂದು ಅನ್ನಪೂರ್ಣ ಗ್ರಾಂಡ್ ಮಾಲೀಕ ಅಂಬರೀಶ್ ಕೆರೆಗದ್ದೆ ಹೇಳುತ್ತಾರೆ.

‘ಬೇಕರಿ ಪದಾರ್ಥ ಹಾಲು ಇಲ್ಲದೆ ತಯಾರಿ ಸಾಧ್ಯವಿಲ್ಲ. ದೂದ್‌ಪೇಡ ಬ್ರೆಡ್ ರಸ್ಕ್ ಚಂಪಾಕಲಿ ಸಿಹಿ ತಿನಿಸುಗಳ ಬೆಲೆ ಶೇ 10ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಉತ್ಪಾದನಾ ವೆಚ್ಚದಂತೆ ಪ್ರತಿ ಕೆ.ಜಿ. ಚಂಪಾಕಲಿ ಬೆಲೆ ₹ 360ರಿಂದ ₹ 400 ಆಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಕಾಮತ್ ಬೇಕರಿ ಮಾಲೀಕ ಸತೀಶ್ ಕಾಮತ್.

‘ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಆ ಖರ್ಚು ಜನರಿಂದ ವಸೂಲಿ ಮಾಡಲು ಮುಂದಾಗಿದೆ. ಒಂದು ಕಡೆಯಿಂದ ಉಚಿತವಾಗಿ ಕೊಟ್ಟರೆ ಇನ್ನೊಂದು ಕಡೆಯಲ್ಲಿ ತೆರಿಗೆ ಹೆಚ್ಚಿಸುವ ತಂತ್ರ ಅನುಸರಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಯ ಅವಶ್ಯಕತೆ ಇತ್ತೆ’ ಎಂದು ಕೆಲವು ಹೋಟೆಲ್ ಮಾಲೀಕರು ಪ್ರಶ್ನಿಸುತ್ತಾರೆ.

ಸದ್ಯಕ್ಕೆ ಏರಿಕೆಯಾಗದ ಹೋಟೆಲ್ ತಿನಿಸಿನ ದರ

ಸಾಗರ: ನಂದಿನಿ ಹಾಲಿನ ಬೆಲೆ ಲೀಟರ್‌ಗೆ ₹ 3ರಂತೆ ಏರಿಕೆಯಾಗಿದ್ದರೂ ಸದ್ಯಕ್ಕೆ ಇಲ್ಲಿನ ಹೋಟೆಲ್‌ಗಳ ಮಾಲೀಕರು ಕಾಫಿ ಟೀ ಅಥವಾ ಇತರ ತಿಂಡಿ ತಿನಿಸುಗಳ ಬೆಲೆ ಏರಿಕೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸದ್ಯಕ್ಕೆ ಹಿಂದಿನ ದರವೇ ಮುಂದುವರಿದಿದೆ. ಹೆಚ್ಚಿನ ಹೋಟೆಲ್‌ಗಳಲ್ಲಿ ಒಂದು ಫುಲ್ ಕಾಫಿ ಅಥವಾ ಟೀಗೆ ₹ 15 ದರವಿದ್ದು ಅರ್ಧ ಕಾಫಿಗೆ ₹ 10 ದರ ಇದೆ. ಹಾಲಿನ ದರ ಏರಿಕೆ ನಂತರವೂ ಇದೇ ದರ ಮುಂದುವರಿದಿದೆ.

‘ಮೊದಲಿನಿಂದಲೂ ಇಲ್ಲಿ ಹೋಟೆಲ್‌ಗಳಲ್ಲಿನ ತಿಂಡಿ ತಿನಿಸು ಅಥವಾ ಕಾಫಿ ಟೀ ದರವನ್ನು ನಮ್ಮ ಸಂಘ ನಿರ್ಧರಿಸುವುದಿಲ್ಲ. ಆಯಾ ಹೋಟೆಲ್‌ಗಳಲ್ಲಿನ ಆಹಾರಗಳ ಗುಣಮಟ್ಟ ಮತ್ತು ಗಾತ್ರವನ್ನು ಆಧರಿಸಿ ಮಾಲೀಕರೇ ದರ ನಿರ್ಧರಿಸುತ್ತಾರೆ. ಹಾಲಿನ ದರ ಏರಿಕೆ ನಂತರವೂ ದರ ಏರಿಸಬೇಕೆ ಬೇಡವೆ ಎಂಬ ತೀರ್ಮಾನವನ್ನು ಆಯಾ ಹೋಟೆಲ್‌ಗಳ ಮಾಲಿಕರಿಗೆ ಬಿಡಲಾಗಿದೆ’ ಎಂದು ಪ್ರಾಂತ್ಯ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪ್ರಸಾದ್ ತಿಳಿಸಿದ್ದಾರೆ.

‘ಹಾಲಿನ ದರ ಏರಿಕೆಯಿಂದ ಹೋಟೆಲ್‌ಗಳಲ್ಲಿನ ಕಾಫಿ ಟೀ ದರವನ್ನು ಏರಿಸುವುದು ಅನಿವಾರ್ಯವಾಗುತ್ತದೆ. ಆದರೆ ಈ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಈ ಸಂಬಂಧ ನಿರ್ಧರಿಸಲಾಗುವುದು’ ಎಂದು ಮೈಸೂರ್ ಕೆಫೆ ಹೋಟೆಲ್‌ನ ಮಾಲೀಕ ಭಾಸ್ಕರ ಶೆಟ್ಟಿ ಹಾಗೂ ಪವಿತ್ರ ರೆಸಿಡೆನ್ಸಿ ಮಾಲೀಕ ಎಂ.ನಾಗರಾಜ್ ತಿಳಿಸಿದ್ದಾರೆ.

ಸರ್ಕಾರ ರೈತರಿಗೆ ನೇರವಾಗಿ ಅನುಕೂಲ ಮಾಡಿಕೊಡಲಿ ಒಳ್ಳೆಯದು. ಆದರೆ ಹಾಲಿನ ದರ ಹೆಚ್ಚಿಸಿ ಜನಸಾಮಾನ್ಯರಿಗೆ ತೊಂದರೆ ಮಾಡಿದರೆ ಹೇಗೆ?
-ಹರೀಶ್‌ಕುಮಾರ್ ಗ್ರಾಹಕ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.