ADVERTISEMENT

ಗೋವಿಂದಾಪುರ: ಮೂಲ ಸೌಲಭ್ಯವೇ ಮರೀಚಿಕೆ

8 ವರ್ಷಗಳಾದರೂ ಮುಗಿಯದ ವಸತಿ ಯೋಜನೆ, ಮೂಲ ಸೌಕರ್ಯ ಮರೀಚಿಕೆ

ವೆಂಕಟೇಶ ಜಿ.ಎಚ್.
Published 19 ಜುಲೈ 2024, 6:04 IST
Last Updated 19 ಜುಲೈ 2024, 6:04 IST
ಗೋವಿಂದಾಪುರ ಟೌನ್‌ಶಿಪ್‌ನಲ್ಲಿ ಪೂರ್ಣಗೊಂಡು ಫಲಾನುಭವಿಗಳಿಗೆ ಹಂಚಿಕೆ ಆಗಿರುವ ಮನೆಗಳು
ಗೋವಿಂದಾಪುರ ಟೌನ್‌ಶಿಪ್‌ನಲ್ಲಿ ಪೂರ್ಣಗೊಂಡು ಫಲಾನುಭವಿಗಳಿಗೆ ಹಂಚಿಕೆ ಆಗಿರುವ ಮನೆಗಳು   

ಶಿವಮೊಗ್ಗ: ‘ನಮಗೆ ಸೂರು ಕೊಟ್ಟಿದ್ದೀರಿ. ಅಲ್ಲಿ ಮೂಲ ಸೌಕರ್ಯ ಕಲ್ಪಿಸಿ, ಘನತೆಯ ಬದುಕಿಗೆ ಅವಕಾಶ ಮಾಡಿಕೊಡಿ..’ ಇದು ತಾಲ್ಲೂಕಿನ ಗೋವಿಂದಾಪುರ ಗ್ರಾಮದ ವಸತಿ ಯೋಜನೆಯಡಿ ಮನೆಗಳಲ್ಲಿ ವಾಸವಿರುವ ಫಲಾನುಭವಿಗಳ ಅಳಲು.

ಮಹಾನಗರ ಪಾಲಿಕೆಯಿಂದ ಗೋವಿಂದಾಪುರದಲ್ಲಿ ಎರಡು ಮಹಡಿಯ (ಜಿ+2) ವಿನ್ಯಾಸದಲ್ಲಿ 3,000 ಮನೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ವಾಸಕ್ಕೆ ಸಿದ್ಧವಾಗಿರುವ ಮನೆಗಳಿಗೆ ಲಾಟರಿ ಮೂಲಕ 600 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಆ ಪೈಕಿ ಕೆಲವರು ಬಂದು ಮನೆಗಳಲ್ಲಿ ವಾಸ ಆರಂಭಿಸಿದ್ದಾರೆ.

ಮೂಲ ಸೌಕರ್ಯಗಳ ಕೊರತೆಯ ಕಾರಣಕ್ಕೆ ಉಳಿದವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬಹಳಷ್ಟು ಕಟ್ಟಡಗಳು ಖಾಲಿ ಬಿದ್ದಿವೆ. ಇನ್ನೂ ಕೆಲವು ಬ್ಲಾಕ್‌ಗಳಲ್ಲಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸವೂ ಬಾಕಿ ಇದೆ.

ADVERTISEMENT

ಕುಡಿಯಲು ನೀರು ಕೊಡಿ:

‘ಈಗ ವಾಸ ಇರುವ ಫಲಾನುಭವಿಗಳಿಗೆ ಕೊಳವೆ ಬಾವಿ (ಬೋರ್‌ವೆಲ್) ನೀರು ಕೊಡಲಾಗುತ್ತಿದೆ. ಅವು ಕುಡಿಯಲು ಯೋಗ್ಯವಾಗಿಲ್ಲ. ನೀರು ಶುದ್ಧೀಕರಣ ಯಂತ್ರ (ಅಕ್ವಗಾರ್ಡ್‌) ಹಾಕಿಕೊಳ್ಳಬೇಕು. ಅದು ಎಲ್ಲರಿಗೂ ಆಗುವುದಿಲ್ಲ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಿ’ ಎಂದು ಗೋವಿಂದಾಪುರ ಆಶ್ರಯ ಯೋಜನೆ ನಿವಾಸಿಗಳ ಸಂಘದ ಅಧ್ಯಕ್ಷ ಶಂಕರ್‌ ಒತ್ತಾಯಿಸುತ್ತಾರೆ.

‘ಇಲ್ಲಿಗೆ 24x7 ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲು ಈ ಹಿಂದೆ ಕೆ.ಎಸ್.ಈಶ್ವರಪ್ಪ ಸಚಿವರಾಗಿದ್ದಾಗ ಹಣ ಮೀಸಲಿಟ್ಟಿದ್ದರು. ಆದರೆ ಇನ್ನೂ ಕೆಲಸ ಮುಗಿದಿಲ್ಲ. ಅದು ಆಮೆಗತಿಯಲ್ಲಿ ಸಾಗಿದೆ’ ಎಂದು ಶಂಕರ್ ಬೇಸರ ವ್ಯಕ್ತಪಡಿಸುತ್ತಾರೆ.

ಬಸ್ ವ್ಯವಸ್ಥೆ ಆರಂಭಿಸಿ:

‘ಗೋವಿಂದಾಪುರದ ವಸತಿ ಯೋಜನೆ ಸ್ಥಳದಿಂದ ಶಿವಮೊಗ್ಗ ನಗರಕ್ಕೆ ನಿರಂತರವಾಗಿ ಸಿಟಿ ಬಸ್ ಸೇವೆ ಇಲ್ಲ. ಮಕ್ಕಳಿಗೆ ಶಾಲೆಗೆ ಹೋಗಲೂ, ಆಸ್ಪತ್ರೆಗಳಿಗೆ ತೆರಳಲು ತೊಂದರೆ ಆಗಲಿದೆ. ಹೀಗಾಗಿ ಆಯ್ಕೆಯಾದ ಫಲಾನುಭವಿಗಳು ಮನೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಾರಿಗೆ ಸಂಸ್ಥೆ ಇಲ್ಲವೇ ಖಾಸಗಿಯವರು ನಿರಂತರವಾಗಿ ಇಲ್ಲಿಂದ ಸಿಟಿ ಬಸ್‌ ವ್ಯವಸ್ಥೆ ಆರಂಭಿಸಲಿ’ ಎಂದು ನಿವಾಸಿಗಳು ಒತ್ತಾಯಿಸುತ್ತಾರೆ.

ಅತ್ಯುತ್ತಮ ವಿನ್ಯಾಸ, ಅನುಷ್ಠಾನ ಹಿನ್ನಡೆ?:

‘ಇಲ್ಲಿನ ಮನೆಗಳ ವಿನ್ಯಾಸ ಅತ್ಯುತ್ತಮವಾಗಿದೆ. ಯೋಜನೆ ಪೂರ್ಣಗೊಂಡರೆ 4,600ಕ್ಕೂ ಹೆಚ್ಚು ಬಡ ಕುಟುಂಬಗಳ ಸ್ವಂತ ಸೂರಿನ ಕನಸಿಗೆ ಜೀವ ಸಿಗಲಿದೆ. ಫಲಾನುಭವಿ ₹7.70 ಲಕ್ಷ ಭರಿಸಬೇಕಿದೆ. ಟೌನ್‌ಶಿಪ್‌, ವಿಶಾಲ ಟಾರ್ ರಸ್ತೆಗಳು, ಮನೆಗಳಿಗೆ ಗಾಳಿ–ಬೆಳಕಿನ ವ್ಯವಸ್ಥೆ ಎಲ್ಲವೂ ಚೆನ್ನಾಗಿದೆ. ಆದರೆ ಅನುಷ್ಠಾನದಲ್ಲಿ ಎಡವಲಾಗಿದೆ’ ಎಂಬ ಆರೋಪ ಕೇಳಿಬಂದಿವೆ.

ಗೋವಿಂದಾಪುರದಲ್ಲಿ ಹಾಲಿ ಕೈಗೆತ್ತಿಕೊಂಡಿರುವ ಮನೆಗಳ ಜೊತೆಗೆ ಹೆಚ್ಚುವರಿಯಾಗಿ 800 ಹಾಗೂ ಗೋಪಿಶೆಟ್ಟಿಕೊಪ್ಪದಲ್ಲಿ 800 ಮನೆಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ. ಎಲ್ಲದಕ್ಕೂ ಜಾಗ ಗುರುತಿಸಲಾಗಿದೆ. ಕಾಮಗಾರಿ ಎಂಟು ವರ್ಷಗಳಿಂದಲೂ ನಡೆಯುತ್ತಲೇ ಇದೆ. ಸರ್ಕಾರ ಬದಲಾಗುತ್ತಿದ್ದಂತೆಯೇ ಕೆಲಸದ ವೇಗದಲ್ಲೂ ಏರಿಳಿತ ಕಾಣುತ್ತದೆ. ಸರ್ಕಾರ ಇತ್ತ ಗಮನ ಹರಿಸಲಿ ಎಂದು ಶಂಕರ್ ಆಗ್ರಹಿಸುತ್ತಾರೆ.

ಗೋವಿಂದಾಪುರ ಟೌನ್‌ಶಿಪ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಗಳು

ಶೀಘ್ರ ಎಸ್‌ಟಿಪಿ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. 24x7 ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಅದಕ್ಕೆ ವೇಗ ನೀಡಲಾಗುವುದು. ಅನರ್ಹರಿಗೆ ಮನೆಗಳನ್ನು ಕೊಟ್ಟಿದ್ದರೆ ಪಟ್ಟಿ ಪುನರ್‌ ಪರಿಶೀಲಿಸಲಾಗುವುದು

-ಕವಿತಾ ಯೋಗಪ್ಪನವರ ಪಾಲಿಕೆ ಆಯುಕ್ತೆ

ಇಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಹಾಗೂ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಗಮನಕ್ಕೆ ತಂದಿದ್ದೇವೆ. ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮದ ಭರವಸೆ ನೀಡಿದ್ದಾರೆ

-ಶಂಕರ್ ಗೋವಿಂದಾಪುರ ವಸತಿ ಯೋಜನೆ ನಿವಾಸಿಗಳ ಸಂಘದ ಅಧ್ಯಕ್ಷ

ತೋರಿಸಿದ್ದು ಒಂದು ಕಟ್ಟಿದ್ದು ಮತ್ತೊಂದು..!

ಗೋವಿಂದಾಪುರ ವಸತಿ ಯೋಜನೆ ಅನುಷ್ಠಾನಕ್ಕೆ ಮುನ್ನ ಗುತ್ತಿಗೆದಾರ ಕಂಪೆನಿ 24 ಮನೆಗಳ ಮಾದರಿ ಕಟ್ಟಡ (ಡೆಮೋ ಹೌಸ್) ನಿರ್ಮಿಸಿದೆ. ಆ ಮನೆಗೂ ಈಗ ಕಟ್ಟಿರುವ ಮನೆಗಳಿಗೂ ಗುಣಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸ ಇದೆ ಎಂಬ ಆರೋಪ ನಿವಾಸಿಗಳಿಂದ ಕೇಳಿಬಂದಿದೆ. ‘ಮಾದರಿ ಮನೆಯಲ್ಲಿ ಕಟ್ಟಡದ ಚಾವಣಿ ಮೇಲೆ ತಲಾ 2000 ಲೀಟರ್ ಸಾಮರ್ಥ್ಯದ 3 ಟ್ಯಾಂಕ್‌ಗಳನ್ನು ಇಡಲಾಗಿದೆ. ಆದರೆ ಉಳಿದ ಕಟ್ಟಡಗಳ ಚಾವಣಿಯಲ್ಲಿ ಬರೀ 1000 ಲೀಟರ್ ಸಾಮರ್ಥ್ಯದ ಟ್ಯಾಂಕ್‌ ಇಡಲಾಗಿದೆ. ಗುಣಮಟ್ಟದಲ್ಲೂ ವ್ಯತ್ಯಾಸವಿದೆ. ಎಲ್ಲ 24 ಮನೆಗಳಿಗೂ ಫಲಾನುಭವಿಗಳು ಬಂದರೆ ಆ ನೀರು ಯಾವುದಕ್ಕೂ ಸಾಲುವುದಿಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ. ‘ಮಾದರಿ ಮನೆ’ಯಲ್ಲಿ ಚೌಕಟ್ಟು ಇಟ್ಟು ಕಿಟಕಿ ಹಾಗೂ ಬಾಗಿಲು ಕೂರಿಸಲಾಗಿದೆ. ಆದರೆ ಉಳಿದ ಮನೆಗಳಿಗೆ ನೇರ ಸಿಮೆಂಟ್ ಕಾಂಕ್ರೀಟ್‌ಗೆ ಮೊಳೆ ಹೊಡೆದು ಎರಡು ಸ್ಕ್ರೂ ಹಾಕಿ ಕಿಟಕಿ–ಬಾಗಿಲು ಕೂರಿಸಲಾಗಿದೆ. ಅವು ಈಗ ಕಿತ್ತು ಬರುತ್ತಿವೆ. ಜೋರಾಗಿ ತಳ್ಳಿದರೂ ಬೀಳುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಹೆಚ್ಚುವರಿ ಖರ್ಚು ಅನಿವಾರ್ಯ: ಮಾದರಿ ಮನೆಗೂ ಈಗ ಇರುವ ಮನೆಗೂ ಗುಣಮಟ್ಟದಲ್ಲಿ ವ್ಯತ್ಯಾಸ ಇರುವುದರಿಂದ ಸುರಕ್ಷಿತವಾಗಿ ಬದುಕಬೇಕಾದರೆ ಫಲಾನುಭವಿ ಇನ್ನೂ 3ರಿಂದ 4 ಲಕ್ಷ ಖರ್ಚು ಮಾಡಿ ಕಟ್ಟಡ ಸುಭದ್ರಗೊಳಿಸಿಕೊಳ್ಳಬೇಕಿದೆ ಎಂಬುದು ನಿವಾಸಿಗಳ ಅಳಲು. ಈಗ ನಿರ್ಮಾಣ ಹಂತದಲ್ಲಿರುವ ಮನೆಗಳ ಗುಣಮಟ್ಟ ಕಾಪಾಡಲು ಪಾಲಿಕೆ ಕ್ರಮ ಕೈಗೊಳ್ಳಲಿ ಎಂದು ನಿವಾಸಿಗಳು ಒತ್ತಾಯಿಸುತ್ತಾರೆ.

ಅನರ್ಹರಿಗೂ ಮನೆ ಹಂಚಿಕೆ ?

ಮನೆಗಳನ್ನು ಬಡವರಿಗಾಗಿ ನಿರ್ಮಿಸಿದ್ದರೂ ಪತಿ ಪತ್ನಿ ಇಬ್ಬರೂ ಬ್ಯಾಂಕ್ ಉದ್ಯೋಗದಲ್ಲಿ ಇರುವವರು ದುಬಾರಿ ಕಾರು ಹೊಂದಿರುವವರು ನಗರದಲ್ಲಿ ಸ್ವಂತ ಮನೆ ಇದ್ದು ಇದನ್ನು ಬಾಡಿಗೆ ಕೊಡಲು ಮುಂದಾಗಿರುವವರಿಗೆ ಕೆಲವು ಅನರ್ಹರಿಗೆ ಮನೆ ಹಂಚಿಕೆ ಮಾಡಲಾಗಿದೆ ಎಂಬ ಆರೋಪಗಳಲ್ಲಿ ಒಂದಷ್ಟು ಹುರುಳಿದೆ ಎಂದು ನಿವಾಸಿಗಳ ಸಂಘದ ಅಧ್ಯಕ್ಷ ಶಂಕರ್ ಒಪ್ಪಿಕೊಳ್ಳುತ್ತಾರೆ. ಆದರೆ ಒಂದೇ ಪಕ್ಷದ ಕಾರ್ಯಕರ್ತರಿಗೆ ಜನಪ್ರತಿನಿಧಿಯೊಬ್ಬರ ಹಿಂಬಾಲಕರಿಗೆ ಮಾತ್ರ ಮನೆಗಳ ಹಂಚಿಕೆ ಮಾಡಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪವನ್ನು ಅವರು ನಿರಾಕರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.