ಶಿಕಾರಿಪುರ:ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವ ಶನಿವಾರ ಪಟ್ಟಣದಲ್ಲಿ ಸಾವಿರಾರು ಭಕ್ತ ಸಮೂಹದ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ರಾಜ್ಯದಲ್ಲಿರುವ ಹಲವು ಆಂಜನೇಯ ದೇವಸ್ಥಾನಗಳಲ್ಲಿ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನ ಹೆಚ್ಚು ಪ್ರಖ್ಯಾತಿ ಪಡೆದಿದೆ. ಕದರಮಂಡಗಿ ಕಾಂತೇಶ, ಚಿಕ್ಕೇರೂರು ಸಮೀಪದ ಸಾತೇನಹಳ್ಳಿ ಶಾಂತೇಶ ಹಾಗೂ ಶಿಕಾರಿಪುರದಲ್ಲಿರುವ ಭ್ರಾಂತೇಶ ಎಂಬ ಮೂರುಆಂಜನೇಯ ದೇವರ ದೇವಸ್ಥಾನಗಳಿಗೆ ಅಧಿಕಮಾಸ ಹಾಗೂ ಶ್ರಾವಣ ಮಾಸದ ದಿನಗಳ ಅವಧಿಯಲ್ಲಿ ಒಂದೇ ದಿನ ಭೇಟಿ ನೀಡಿ ದೇವರದರ್ಶನ ಪಡೆದು ಪೂಜೆ ಸಲ್ಲಿಸಿದರೆ ಪುಣ್ಯ ಲಭಿಸುತ್ತದೆ ಹಾಗೂ ತಾವು ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗುತ್ತವೆ ಎಂಬ ನಂಬಿಕೆ ಇದೆ.
ಹೀಗಾಗಿ ವಿವಿಧೆಡೆ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.ಹುಚ್ಚರಾಯಸ್ವಾಮಿ ದೇವರ ಬ್ರಹ್ಮ ರಥೋತ್ಸವಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ದೊರೆಯಿತು. ದೇವಸ್ಥಾನ ಅವರಣದಿಂದ ಹೊರಟ ಬ್ರಹ್ಮ ರಥೋತ್ಸವಕ್ಕೆ ಸಾಗರ ಉಪವಿಭಾಗಧಿಕಾರಿ ಡಾ.ನಾಗರಾಜ್ ನಾಯ್ಕ್, ತಹಶೀಲ್ದಾರ್ ಎಂ.ಪಿ. ಕವಿರಾಜ್ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನಂತರ ಸಂಪ್ರದಾಯದಂತೆ ಹುಚ್ಚರಾಯಸ್ವಾಮಿ ದೇವಸ್ಥಾನ ಅವರಣದಿಂದ ಮಂಗಳವಾದ್ಯ ಸೇರಿ ವಿವಿಧ ವಾದ್ಯಗಳ ಮೆರವಣಿಗೆಯೊಂದಿಗೆ ಸಾವಿರಾರು ಭಕ್ತರು ತೇರು ಬೀದಿಯಲ್ಲಿರುವ ಮಾರಿಕಾಂಬಾ ಗದ್ದುಗೆಯವರೆಗೂ ರಥವನ್ನು ಎಳೆದರು. ಸಾವಿರಾರು ಜನರು ಬ್ರಹ್ಮ ರಥದ ಮುಂಭಾಗ ನಿಂತು ಪೂಜೆ ಸಲ್ಲಿಸಿದರು.
ಬ್ರಹ್ಮ ರಥೋತ್ಸವಕ್ಕೆ ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರಾವಾಡ, ಮೈಸೂರು, ಬೆಂಗಳೂರು ನಗರ ಸೇರಿ ವಿವಿಧ ಜಿಲ್ಲೆಯ ಹಾಗೂ ಸಾಗರ, ಸೊರಬ ತಾಲ್ಲೂಕಿನಿಂದ ಸಾವಿರಾರು ಭಕ್ತರು ಬಂದು ಹುಚ್ಚರಾಯಸ್ವಾಮಿ ದೇವರ ದರ್ಶನ ಪಡೆದರು. ರಥೋತ್ಸವ ಅಂಗವಾಗಿ ಹುಚ್ಚರಾಯಸ್ವಾಮಿ ದೇವರ ಮೂರ್ತಿ ಹಾಗೂ ದೇವಸ್ಥಾನವನ್ನು ವಿವಿಧ ಪುಷ್ಪಗಳಿಂದಸಿಂಗರಿಸಲಾಗಿತ್ತು.
ರಥೋತ್ಸವ ಸಂದರ್ಭದಲ್ಲಿ ಬಿಸಿಲು ಹೆಚ್ಚಿದ್ದರಿಂದ ವಿವಿಧ ಸಂಘಟನೆ ಪದಾಧಿಕಾರಿಗಳು ಭಕ್ತರಿಗೆ ಮಜ್ಜಿಗೆ, ಪಾನಕ ಸೇರಿ ವಿವಿಧ ಪಾನೀಯಗಳನ್ನು ವಿತರಿಸಿದರು. ರಥೋತ್ಸವಕ್ಕೆ ಬಂದ ಭಕ್ತರಿಗೆ ಪುರಸಭೆ ಸದಸ್ಯರು ಅನ್ನಸಂತರ್ಪಣೆಏರ್ಪಡಿಸಿದ್ದರು.
ರಥೋತ್ಸವ ಸಂದರ್ಭದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರು ರಥದ ಚಕ್ರದಿಂದ ದೂರ ಇರುವಂತೆ ಭಕ್ತರನ್ನು ನಿಯಂತ್ರಿಸುತ್ತಿದ್ದರು. ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಸಲ್ಲಿಸಿದರು. ಮುಜರಾಯಿ ಇಲಾಖೆ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವಲ್ಲಿ ಅಪ್ಪು ಫೋಟೊ ಹಿಡಿದ ಅಭಿಮಾನಿಗಳು: ಹುಚ್ಚರಾಯಸ್ವಾಮಿ ದೇವರ ಬ್ರಹ್ಮರಥೋತ್ಸವದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಪುನೀತ್ ಫೋಟೊ ಹಿಡಿದು ‘ಅಪ್ಪು ಅಪ್ಪು’ ಎಂದು ಜೈಕಾರ ಹಾಕುತ್ತಾ ಹೆಜ್ಜೆ ಹಾಕುವ ಮೂಲಕ ತಮ್ಮ ಅಭಿಮಾನ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.