ಹೊಸನಗರ: ರಾಣೆಬೆನ್ನೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ತಾಲ್ಲೂಕಿನ ಬಟ್ಟೆಮಲ್ಲಪ್ಪ–ಯಡೇಹಳ್ಳಿ ಮತ್ತು ಹೊಸನಗರ–ಜಯನಗರವರೆಗೆ ಬರೋಬ್ಬರಿ 665 ಮರಗಳ ಮಾರಣಹೋಮ ನಡೆಯಲಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ವಿಸ್ತರಣೆಗಾಗಿ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪದಿಂದ ಇರುವಕ್ಕಿವರೆಗೆ 456, ಚೋರಡಿ ಅರಣ್ಯ ವಲಯ ವ್ಯಾಪ್ತಿಗೆ ಸೇರುವ ಇರುವಕ್ಕಿಯಿಂದ ಯಡೇಹಳ್ಳಿ ತನಕ ಒಟ್ಟು 15 ಕಿ.ಮೀ. ಅಂತರದಲ್ಲಿ 180 ಮತ್ತು ಇದೇ ಹೆದ್ದಾರಿ ಸಾಗುವ ಹೊಸನಗರದಿಂದ ಜಯನಗರದವರೆಗೆ 3.9 ಕಿ.ಮೀ. ಅಂತರದಲ್ಲಿ 29 ಮರಗಳ ಕಡಿತಲೆಗೆ ರೂಪುರೇಷೆ ಸಿದ್ಧಗೊಂಡಿದ್ದು, ಮರಗಳ ಗುರುತು ಕಾರ್ಯ ನಡೆದಿದೆ. ಕೇಂದ್ರದ ಅರಣ್ಯ ಇಲಾಖೆ ಹಸಿರು ನಿಶಾನೆ ತೋರುವುದು ಬಾಕಿ ಉಳಿದಿದೆ. ಪ್ರಸ್ತುತ ಈ ರಸ್ತೆಯು ಏಕಪಥ ರಸ್ತೆಯಾಗಿದ್ದು, ಕಿರಿದಾಗಿರುವ ಕಾರಣ ವಾಹನ ಸಂಚಾರಕ್ಕೆ ಸಮಸ್ಯೆ ಆಗಿರುವುದರಿಂದ ರಸ್ತೆ ವಿಸ್ತರಣೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈಗಿರುವ ರಸ್ತೆಯ ಇಕ್ಕೆಲಗಳಲ್ಲಿ 40 ಅಡಿಗಳವರೆಗೆ ವಿಸ್ತರಣೆ ನಡೆಸಲು ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿರುವುದರಿಂದ ಮರಗಳ ಮಾರಣಹೋಮ ನಡೆಯಲಿರುವುದು ಸ್ಥಳೀಯರ ನಿದ್ದೆ ಕೆಡಿಸಿದೆ.
ನೂರಾರು ವರ್ಷದ ಮರಗಳು: ಗುರುತು ಮಾಡಿರುವ ಮರಗಳ ಪೈಕಿ ಹಳೆಯ ಮರಗಳು ಹೆಚ್ಚಿವೆ. 118 ಹುನಾಲು, 28 ಮಾವು, 26 ನೇರಳೆ, 3 ಸಾಗವಾನಿ, 5 ಬೀಟೆ, 25 ಹೊನ್ನೆ, ಜಂಬೆ, 46 ಮತ್ತಿ, 14 ನಂದಿ ಮರಗಳು ಸೇರಿ ಅರಳಿ, ಹಲಸು, ಆಲ, ದೂಪ, ನೇರಳೆ, ದೂಪ ಮತ್ತಿತರ ಮರಗಳು ಧರೆಗೆ ಉರುಳಲಿವೆ.
ಪರಿಹಾರ ಕ್ರಮ: ಮರಗಳ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಯಮದ ಪ್ರಕಾರ ತೆರವು ಮಾಡುವ ಮರಗಳ 10 ಪಟ್ಟು ಮೌಲ್ಯದ ಹಣ ಮತ್ತು ಹೊಸದಾಗಿ ನೆಡುವ ಮರಗಳ ನಿರ್ವಹಣೆಗೆ ಬೇಕಾದ ವೆಚ್ಚವನ್ನು ಅರಣ್ಯ ಇಲಾಖೆಗೆ ಭರಿಸಬೇಕಿದೆ. ನಂತರ ಹೆದ್ದಾರಿ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಡಬೇಕಾಗಿದೆ.
ಪರಿಸರ ಪ್ರೇಮಿಗಳ ಕೂಗಿಗೆ ಬೆಲೆ ಇಲ್ಲ
ಹೆದ್ದಾರಿ ವಿಸ್ತರಣೆಗಾಗಿ ನೆರಳಿನ ಧಾಮವಾಗಿದ್ದ 665 ಮರಗಳ ಹನನ ನಡೆಯಲಿರುವುದು ಆತಂಕ ತಂದಿದೆ. ಈ ಹಿಂದೆ ಸಾಗರದಲ್ಲಿ ಬೃಹತ್ ಮರಗಳ ಕಡಿತಲೆ ನಡೆದಾಗ ಬಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಪರಿಸರ ಪ್ರೇಮಿಗಳು ಹೆದ್ದಾರಿಯಲ್ಲಿ ಕುಳಿತು ಸರ್ಕಾರದ ಗಮನ ಸೆಳೆದರು. ಶಾಸಕರು, ಅಧಿಕಾರಿಗಳು ಮರಗಳನ್ನು ಉಳಿಸುವ ಭರವಸೆ ನೀಡಿದರು. ಆದರೆ, ಮರಗಳು ಉಳಿಯಲಿಲ್ಲ. ನೋಡನೋಡುತ್ತಲೇ ಮರಗಳು ಧರೆಗುರುಳಿದವು. ಈಗ ತಾಲ್ಲೂಕಿನ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಮರಗಳ ಕಡಿತಲೆಗೆ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಮರಗಳನ್ನು ಉಳಿಸಿಕೊಳ್ಳಲು ಯೋಜನೆ ರೂಪಿಸಬೇಕು. ಬೆಲೆಬಾಳುವ ಮರಗಳ ಮೌಲ್ಯ ಸರ್ಕಾರಕ್ಕೆ ಜಮೆಯಾಗಬೇಕು. ಕೊಡಲೇ ಗಿಡಗಳನ್ನು ನೆಡಲು ಕ್ರಮ ಕೈಗೊಳ್ಳಬೇಕು.
ವಾಟಗೋಡು ಸುರೇಶ್, ಸಾಮಾಜಿಕ ಹೋರಾಟಗಾರ
ಹೆದ್ದಾರಿ ವಿಸ್ತರಣೆ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಮರಗಳ ಗುರುತು ಕಾರ್ಯ ನಡೆದಿದೆ. ವಿದ್ಯುತ್ ಕಂಬಗಳ ತೆರವು ಆಗಬೇಕಾಗಿದೆ. ಅರಣ್ಯ ಇಲಾಖೆಗೆ ಹಣ ಪಾವತಿ ಮಾಡಿದ ಬಳಿಕ ಮರಗಳ ತೆರವು ಕಾರ್ಯ ನಡೆಯಲಿದೆ.
ಪೀರ್ ಪಾಷಾ, ಎಇಇ, ಎನ್ಎಚ್ಎಐ, ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.