ADVERTISEMENT

ತುಮರಿ | ಕಾಡಂಚಿನಲ್ಲಿ ಬೇಟೆಗಾರರು ಸಕ್ರಿಯ: ಮಾಂಸಕ್ಕಾಗಿ ಪ್ರಾಣಿಗಳ ಹತ್ಯೆ

Sarikashree KC
Published 26 ಏಪ್ರಿಲ್ 2024, 6:39 IST
Last Updated 26 ಏಪ್ರಿಲ್ 2024, 6:39 IST
ಬ್ರಾಹ್ಮಣ ಕೆಪ್ಪಿಗೆ ಗ್ರಾಮದಲ್ಲಿ ಮಂಗಳವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು
ಬ್ರಾಹ್ಮಣ ಕೆಪ್ಪಿಗೆ ಗ್ರಾಮದಲ್ಲಿ ಮಂಗಳವಾರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು   

ತುಮರಿ: ಶರಾವತಿ ನದಿ ಕಣಿವೆಯ ಸಂರಕ್ಷಿತ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಈಗಲೂ ಸಕ್ರಿಯವಾಗಿದ್ದಾರೆ ಎಂಬುದು ಪದೇ ಪದೇ ಸ್ವಷ್ಟವಾಗುತ್ತಿದೆ. ಆದರೆ, ಇದರ ಬಗ್ಗೆ ಕಠಿಣ ನಿಲುವು ತೋರಲು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ತಾಲ್ಲೂಕಿನ ಚನ್ನಗೊಂಡ, ಕುದರೂರು, ತುಮರಿ, ಎಸ್.ಎಸ್. ಭೋಗ್, ಬಾನುಕುಳಿ ಗ್ರಾಮಗಳಲ್ಲಿ ಬೇಟೆಗಾರರು ಹವ್ಯಾಸಕ್ಕೋ ಅಥವಾ ಮಾಂಸ ಮಾರಾಟದ ಉದ್ದೇಶದಿಂದಲೋ ಬೇಟೆಯಾಡುತ್ತಲೇ ಇದ್ದಾರೆ. ಬೇಟೆಯಾಡಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದರೂ, ಪ್ರಕರಣಗಳು ಮರು ಕಳಿಸುತ್ತಿವೆ. 

ಮಾಂಸಕ್ಕಾಗಿ ಕಾಡುಕೋಣ, ಜಿಂಕೆ, ಕಡವೆ, ಮೊಲ, ಕಾಡು ಹಂದಿಗಳನ್ನು ಬೇಟೆಯಾಡುತ್ತಿರುತ್ತಾರೆ. ಬೇಟೆಯಾಡಲು ಉರುಳುಗಳನ್ನೂ ಹಾಕುತ್ತಾರೆ. ಜಿಂಕೆಯಂತಹ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡಬಹುದು. ಕಡವೆಯಂತಹ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಇವರು ನಾಡ ಬಂದೂಕುಗಳನ್ನು ಬಳಸುತ್ತಾರೆ ಎನ್ನಲಾಗಿದೆ.

ADVERTISEMENT

ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ವನ್ಯಜೀವಿಗಳ ಸಂಚಾರ ಕಡಿಮೆಯಾಗುತ್ತಿದೆ. ಅರಣ್ಯ ನಾಶ ಹಾಗೂ ನಾಡ ಬಂದೂಕು ಬಳಸಿ ವನ್ಯಪ್ರಾಣಿಗಳ ಬೇಟೆ ನಡೆಸಿರುವುದು ಇದಕ್ಕೆ ಕಾರಣ. ಹೆಚ್ಚಿನ ಸಂದರ್ಭಗಳಲ್ಲಿ ಬೇಟೆ ನಡೆದಿರುವುದು ಗೊತ್ತಾಗುವುದಿಲ್ಲ. ಅಂತಹ ಪ್ರಕರಣಗಳು ಮುಚ್ಚಿ ಹೋಗುತ್ತವೆ ಎಂದು ಗ್ರಾಮದ ಕೃಷ್ಣಮೂರ್ತಿ ಹೇಳುತ್ತಾರೆ. 

ಸಮೀಪದ ಕುದರೂರು ಗ್ರಾಮದಲ್ಲಿ ಈಚೆಗೆ ಕಾಡುಕೋಣವೊಂದು ರಸ್ತೆ ಅಂಚಿನಲ್ಲಿ ಗುಡ್ಡದಿಂದ ಜಾರಿ ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಆದರೆ, ಅರಣ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಒಂದೇ ದಿನದಲ್ಲಿ ಮೃತಪಟ್ಟಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಏಪ್ರಿಲ್ 24 ರಂದು ಬ್ರಾಹ್ಮಣ ಕೆಪ್ಪಿಗೆ ಗ್ರಾಮದಲ್ಲಿ ಕಾಡುಕೋಣ ಕೃಷಿ ತೋಟದ ಪಕ್ಕದಲ್ಲಿ ಮೃತಪಟ್ಟಿದ್ದು, ಕುತ್ತಿಗೆ ಭಾಗದಲ್ಲಿ ಬಲವಾದ ಗಾಯ ಕಂಡು ಬಂದಿರುವುದು ಗ್ರಾಮಸ್ಥರಲ್ಲಿ ಅನುಮಾನಕ್ಕೆ ಕಾರಣವಾಗಿದೆ. 

ದ್ವೀಪದ ಅವಳಿ ಹೋಬಳಿಯ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಬೇಟೆಯಾಡುತ್ತಿರುವುದು ಇದು ಮೊದಲಲ್ಲ. ಕಟ್ಟಿನಕಾರು, ಕೊಳೇಗೋಡು, ಕೋಗಾರು, ಮುರಕ್ಕಿ ಭಾಗದಲ್ಲಿ ಕಡವೆ, ಕಾಡುಕೋಣಗಳನ್ನು ಬೇಟೆಗಾರರು ಹತ್ಯೆ ಮಾಡಿದ್ದರೂ, ಅರಣ್ಯ ಇಲಾಖೆ ಕ್ರಮವಹಿಸಿಲ್ಲ ಎಂಬುದು ವನ್ಯಪ್ರೇಮಿಗಳ ದೂರು. 

ಬರುವೆ, ಚನ್ನಗೊಂಡ ಗ್ರಾಮದ ಹಲವೆಡೆ ರಾತ್ರಿ ವೇಳೆ ಗುಂಡಿನ ಸದ್ದು ಕೇಳುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ, ಬೇಟೆಗಾರರ ಪತ್ತೆ ಹಚ್ಚುವುದು ಅರಣ್ಯ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಬೇಟೆಗಾರರು ಗುಂಡು ಹೊಡೆಯದಿದ್ದರೆ, ಬೇಟೆಯಾಡಿದ ಹಲವು ಪ್ರಕರಣಗಳು ಬೆಳಕಿಗೇ ಬರಲ್ಲ ಎಂದು ವನ್ಯಪ್ರೇಮಿ ನಾಗರಾಜ ಹೇಳುತ್ತಾರೆ.

ಮಾಂಸಕ್ಕಾಗಿ ವನ್ಯಪ್ರಾಣಿಗಳ ಹತ್ಯೆ ಶಂಕೆ ನಾಡ ಬಂದೂಕುಗಳಿಗೆ ಬೇಕಿದೆ ಕಡಿವಾಣ ಈಚೆಗೆ 3 ಕಾಡುಕೋಣ ಸಾವು
ಈ ಭಾಗದಲ್ಲಿ ಬೇಟೆಯಾಡುತ್ತಿರುವ ಮಾಹಿತಿಯನ್ನು ಇಲಾಖೆ ಗಮನಕ್ಕೆ ತಂದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ರಾಘವೇಂದ್ರ ವಲಯ ಅರಣ್ಯಾಧಿಕಾರಿ ಕಾರ್ಗಲ್
ಅರಣ್ಯ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಇದ್ದರೂ ಇಂದಿಗೂ ಕಾಡಂಚಿನಲ್ಲಿ ಬೇಟೆಗಾರರು ಸಕ್ರಿಯವಾಗಿರುವುದು ದುರಂತ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು
ಅಖಿಲೇಶ್ ಚಿಪ್ಪಳಿ ಪರಿಸರವಾದಿ
ಮಾಂಸಕ್ಕೆ ಕಾಳಸಂತೆಯಲ್ಲಿ ಬೇಡಿಕೆ 
ಕಾಡುಕೋಣ ಕಡವೆ ಜಿಂಕೆ ಮೊಲದ ಮಾಂಸಕ್ಕೆ ಕಾಳಸಂತೆಯಲ್ಲಿ ಬೇಡಿಕೆ ಇದೆ. ಬೆಲೆಯೂ ಹೆಚ್ಚಿದೆ. ಮಾಂಸದ ಉದ್ದೇಶದಿಂದಲೇ ಬೇಟೆಗಾರರು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸುತ್ತಾರೆ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ. ಅಲ್ಲದೆ ಹೆಚ್ಚಿನ ಸಂದರ್ಭಗಳಲ್ಲಿ ಬೇಟೆ ನಡೆದಿರುವುದು ಗೊತ್ತಾಗುವುದಿಲ್ಲ. ಅಂತಹ ಪ್ರಕರಣಗಳು ಮುಚ್ಚಿ ಹೋಗುತ್ತವೆ ಎನ್ನುತ್ತಾರೆ ಗ್ರಾಮಸ್ಥರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.