ADVERTISEMENT

ಬಕೆಟ್‌ ಹಿಡಿಯುವ ಸಂಸ್ಕೃತಿ‌ ನನಗೆ ಗೊತ್ತಿಲ್ಲ: ರಘುಪತಿ ಭಟ್‌

​ಪ್ರಜಾವಾಣಿ ವಾರ್ತೆ
Published 21 ಮೇ 2024, 15:58 IST
Last Updated 21 ಮೇ 2024, 15:58 IST
ರಘುಪತಿ ಭಟ್‌, ಮಾಜಿ ಶಾಸಕ
ರಘುಪತಿ ಭಟ್‌, ಮಾಜಿ ಶಾಸಕ   

ಶಿವಮೊಗ್ಗ: ‘ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ನನಗೆ ಟಿಕೆಟ್‌ ಕೊಡುತ್ತೇವೆ ಎಂದು ಕೈಕೊಟ್ಟಿದ್ದಾರೆ. ನನಗೆ ಬಕೆಟ್ ಹಿಡಿಯುವ ಸಂಸ್ಕೃತಿ‌ ಗೊತ್ತಿಲ್ಲ’ ಎಂದು ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ರಘುಪತಿ ಭಟ್‌ ಹೇಳಿದರು. 

‘ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್‌ ಡಾ.ಧನಂಜಯ ಸರ್ಜಿ ಅವರಿಗೆ ನೀಡಿದ್ದಾರೆ. ಅವರು ಇತ್ತೀಚೆಗೆ ಪಕ್ಷಕ್ಕೆ ಸೇರಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತರನ್ನು ಕಡೆಗಣಿಸಿದ್ದಾರೆ. ಟಿಕೆಟ್‌ ಸಿಕ್ಕಿರುವ ಸರ್ಜಿ ಅವರು ಇಲ್ಲಿಯವರೆಗೂ ನನ್ನೊಂದಿಗೆ ಮಾತನಾಡಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ಪಕ್ಷದಲ್ಲಿ ವ್ಯವಸ್ಥೆ ಬದಲಾವಣೆ ಆಗಬೇಕಿದೆ. ಮೊದಲು ಟಿಕೆಟ್‌ ಕೊಡಲು ಬೂತ್‌ಮಟ್ಟದಿಂದ ಅಭಿಪ್ರಾಯ ಪಡೆಯುತ್ತಿದ್ದರು. ಆದರೆ ಇದೀಗ ಅದನ್ನು ಮಾಡುತ್ತಿಲ್ಲ. ಅಭಿಪ್ರಾಯ ಕೇಳದೆ ಟಿಕೆಟ್‌ ಹಂಚಿಕೆ ಮಾಡುತ್ತಿದ್ದಾರೆ. ಪರಿವಾರದ ಪ್ರಮುಖರ ಸಲಹೆಯನ್ನು ಸಹ ಪರಿಗಣಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ADVERTISEMENT

‘ಪಕ್ಷದಲ್ಲಿ ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿದ್ದೇನೆ. ಉಡುಪಿ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ನನ್ನ ಸಾಧನೆ ಆಧಾರದ ಮೇಲೆ ಮತದಾರರು ಈ ಬಾರಿ ನನಗೆ ಆಶೀರ್ವಾದ ಮಾಡಲಿದ್ದಾರೆ. ಕ್ಷೇತ್ರದಲ್ಲಿ ನನ್ನ ಪರವಾದ ವಾತಾವರಣ ಎಲ್ಲೆಡೆ ಬೀಸುತ್ತಿದೆ’ ಎಂದರು.

‘ನಾನು ಶಾಸಕ ಆಗಿದ್ದಾಗ ಸಾಧಕ ಶಿಕ್ಷಕ ಪ್ರಶಸ್ತಿ ಮತ್ತು ಉತ್ತಮ ಶಾಲೆಗಳಿಗೆ ಪ್ರಶಸ್ತಿ ನೀಡಿದ್ದೇನೆ. ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ್ದೇನೆ. ಇದಲ್ಲದೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಪದವೀಧರರ ಬೆನ್ನಿಗೆ ಸದಾ ನಾನು ನಿಲ್ಲುತ್ತೇನೆ. ನಿರ್ಲಕ್ಷ್ಯ ಮಾಡುವುದಿಲ್ಲ’ ಎಂದು ಹೇಳಿದರು. 

‘ಹಳೇ ಪಂಚಣಿ ಜಾರಿಗೊಳಿಸಲು ಹೋರಾಟ ಮಾಡುತ್ತೇನೆ. 7ನೇ ವೇತನ ಆಯೋಗ ಜಾರಿಗೆ ಪ್ರಯತ್ನಿಸುತ್ತೇನೆ. ಶಿಕ್ಷಕರ ನೇಮಕಾತಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ. ಅನುದಾನಿತ ಶಾಲೆಗಳಲ್ಲಿ ಸಾಕಷ್ಟು ಸಮಸ್ಯೆ ಇದ್ದು ಅವುಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಹೀಗಾಗಿಯೇ ನನಗೆ ಈ ಬಾರಿ ಮತದಾರರು ಆರ್ಶೀವಾದ ಮಾಡಬೇಕು’ ಎಂದು ಹೇಳಿದರು. 

ಲೋಕಸಭೆ ಚುನಾವಣೆಯಲ್ಲಿ ಈಶ್ವರಪ್ಪ ಪುತ್ರನಿಗೆ ಹಾವೇರಿ ಟಿಕೆಟ್ ನೀಡದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಘುಪತಿ ಭಟ್‌ ಅವರು, ‘ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಎಲ್ಲ ಕಾರ್ಯಕರ್ತರಿಗೆ ಮಾದರಿ ಆಗಿದ್ದಾರೆ’ ಎಂದು ಹೊಗಳಿಸಿದರು.

ಎಂ.ಶಂಕರ್, ದೇವದಾಸ ನಾಯಕ್, ವಾಗೀಶ್, ಪ್ರಕಾಶ್, ಸತ್ಯನಾರಾಯಣ, ಪ್ರದೀಪ್ ಚಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.