ADVERTISEMENT

ನನ್ನನ್ನು ನಾನೇ ನಾಯಕ ಎಂದು ಬಿಂಬಿಸಿಕೊಂಡಿಲ್ಲ: ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 21:21 IST
Last Updated 16 ಸೆಪ್ಟೆಂಬರ್ 2024, 21:21 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಶಿವಮೊಗ್ಗ: ‘ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ನನಗೆ ರಾಜ್ಯ ಘಟಕದ ಹೊಣೆ ವಹಿಸಿದ್ದಾರೆ. ನನ್ನನ್ನು ನಾನೇ ನಾಯಕ ಎಂದು ಎಲ್ಲಿಯೂ ಬಿಂಬಿಸಿಕೊಂಡಿಲ್ಲ. ಬದಲಿಗೆ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ವಹಿಸಿರುವ ಕೆಲಸ ಮಾಡುತ್ತಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

‘ವಿಜಯೇಂದ್ರ ಇನ್ನೂ ಜೂನಿಯರ್. ಅವರನ್ನು ರಾಜ್ಯ ಘಟಕದ ಅಧ್ಯಕ್ಷರೆಂದು ಒಪ್ಪಿಕೊಳ್ಳುವುದಿಲ್ಲ. ಅವರಿಂದಲೇ ಬಿಜೆಪಿಗೆ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದೆ’ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಸೋಮವಾರ ಇಲ್ಲಿ ವಿಜಯೇಂದ್ರ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಿ ಸರ್ಕಾರದ ವಿರುದ್ಧ ಕಳೆದ 3 ತಿಂಗಳಿಂದ ಹೋರಾಟ ಮಾಡಿ ಇಡೀ ಆಡಳಿತ ಯಂತ್ರವನ್ನು ಒಂಟಿ ಕಾಲಿನಲ್ಲಿ ನಿಲ್ಲಿಸಿದ್ದೇನೆ. ಅದು ನನಗೆ ತೃಪ್ತಿ ಕೊಟ್ಟಿದೆ’ ಎಂದರು.

ADVERTISEMENT

‘ವಾಲ್ಮೀಕಿ ನಿಗಮದಲ್ಲಿನ ಹಗರಣ ವಿರೋಧಿಸಿ ಬಳ್ಳಾರಿಗೆ ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ನಮ್ಮ ಆದ್ಯತೆ  ಪಕ್ಷದ ಸದಸ್ಯತ್ವ ಅಭಿಯಾನದ ಕಡೆ ಇದೆ’ ಎಂದು ವಿಜಯೇಂದ್ರ  ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಅಕ್ಟೋಬರ್ 1ರಿಂದ 15ರವರೆಗೆ 2ನೇ ಹಂತದಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದೆ. ನಂತರ ಪಾದಯಾತ್ರೆ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

‘ಶಾಸಕ ಮುನಿರತ್ನ ಪ್ರಕರಣ ಯಾವಾಗ ನಡೆದಿದೆ ಎಂಬುದು ಗೊತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಹೋದರ ಸೋತಿದ್ದಾರೆ. ಹೀಗಾಗಿ ಇದು ಷಡ್ಯಂತ್ರ ಇರಬಹುದು’ ಎಂದು ಪ್ರತಿಕ್ರಿಯಿಸಿದರು.

‘ಪೊಲೀಸರ ದುರಹಂಕಾರಕ್ಕೆ ಸರ್ಕಾರದ ಕುಮ್ಮಕ್ಕು’

‘ರಾಜ್ಯದಲ್ಲಿ ಹಿಂದೂ ವಿರೋಧಿ ಮನಃಸ್ಥಿತಿಯ ಸರ್ಕಾರ ಇರುವುದು ದುರಂತ. ಭಾನುವಾರ ಪಾಂಡವಪುರದ ಆರ್‌ಎಸ್‌ಎಸ್ ಕಚೇರಿಗೆ ಪೊಲೀಸರು ಪುಂಡರ ರೀತಿ ದಾಳಿ ಮಾಡಿ ಸಂಘದ ಕಾರ್ಯಕರ್ತರನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಸರ್ಕಾರದ ಕುಮ್ಮಕ್ಕಿನಿಂದಲೇ ಪೊಲೀಸರು ಈ ರೀತಿ ದುರಹಂಕಾರದಿಂದ ನಡೆದುಕೊಂಡಿದ್ದಾರೆ’ ಎಂದು ವಿಜಯೇಂದ್ರ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.