ಆನವಟ್ಟಿ: ಬೃಹತ್ ಯೋಜನೆಗಳನ್ನು ಕೈಗೊಂಡಾಗ ಒಂದೇ ಸರ್ಕಾರದ ಅವಧಿಯಲ್ಲಿ ಮುಗಿಯುವುದು ಕಷ್ಟ. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲೇ ಮೂಡಿ ಏತ ನೀರಾವರಿ ಯೋಜನೆಯ ಡಿಪಿಆರ್ ಆಗಿ, ಮಂಜೂರಾತಿ ದೊರೆತು, ಕಾಮಗಾರಿ ಪೂರ್ಣಗೊಂಡು, ಯೋಜನೆಯ ಪರೀಕ್ಷೆ ಕೂಡ ಮುಗಿಸಿ, ರೈತರ ಸೇವೆಗೆ ಸಿದ್ಧವಾಗಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಮೂಡಿ ಏತ ನೀರಾವರಿ ಯೋಜನೆಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಪತ್ರಿಕಾ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಮೂಡಿ ಏತ ನೀರಾವರಿ ಯೋಜನೆಯ ಅನುಷ್ಠಾನದಲ್ಲಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರ ಶ್ರಮವೂ ಅಪಾರವಾಗಿದೆ. 68 ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದ್ದು, ಇನ್ನೂ ಹೆಚ್ಚುವರಿಯಾಗಿ 12 ಕೆರಗಳನ್ನು ಇದರ ವ್ಯಾಪ್ತಿಗೆ ತರಲು ಯೋಜನೆ ಸಿದ್ಧವಾಗಿತ್ತು. ಈಗಿನ ಸರ್ಕಾರ 12 ಕೆರೆಗಳನ್ನು ಈ ಯೋಜನೆಗೆ ಸೇರಿಸಿ ಈ ಭಾಗದ ರೈತರಿಗೆ ಅನುಕೂಲ ಮಾಡಕೊಡಬೇಕು ಎಂದು ಒತ್ತಾಯಿಸಿದರು.
ಈ ವರ್ಷ ಮಳೆ ತಡವಾಗಿದ್ದು, ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ವರದಾ ನದಿಯ ಒಡಲು ಬತ್ತಿದೆ. ದೇವರ ದಯೆಯಿಂದ ಚನ್ನಾಗಿ ಮಳೆ ಬರಬೇಕು. ವರದಾನದಿ ತುಂಬಿ ಹರಿಯಬೇಕು ಎಂದು ದೇವರನ್ನು ಪ್ರಾರ್ಥನೆ ಮಾಡಿದ ಸಂಸದ ರಾಘವೇಂದ್ರ ಅವರು ವರದಾ ನದಿಯಲ್ಲಿ ನೀರು ಹರಿದರೆ, ಕೂಡಲೇ ಈ ಭಾಗದ ಕೆರೆಗಳನ್ನು ತುಂಬಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.