ADVERTISEMENT

ಅಕ್ರಮ ಗೋವು ಸಾಗಣೆ: ಮೂವರಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2023, 22:44 IST
Last Updated 24 ಜನವರಿ 2023, 22:44 IST
   

ತೀರ್ಥಹಳ್ಳಿ: ವಧೆಯ ಉದ್ದೇಶಕ್ಕಾಗಿ ಅಕ್ರಮವಾಗಿ ಗೋವು ಕಳ್ಳ ಸಾಗಣೆ ಮಾಡಿದ್ದ ಮೂವರಿಗೆ ತೀರ್ಥಹಳ್ಳಿಯ ಸಿ.ಜೆ. ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

2019ರ ಅ. 19ರಂದು ಆಗುಂಬೆ ಪಿಎಸ್‌ಐ ದೇವರಾಯ ಠಾಣಾ ವ್ಯಾಪ್ತಿಯ ಕರಿಗದ್ದೆ ಸಮೀಪ ಗೋವು ಸಾಗಿಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಕಲಂ 379, ಕರ್ನಾಟಕ ಗೋವು ಸಂರಕ್ಷಣೆ ಮತ್ತು ಗೋ ಹತ್ಯಾ ನಿಷೇಧ ಕಾಯ್ದೆ 1964ರ ಕಲಂ 4, 5, 11 ಹಾಗೂ ಪ್ರಾಣಿಗಳ ವಿರುದ್ಧ ಕ್ರೌರ್ಯ ನಿಷೇಧ ಮತ್ತು ತಡೆಗಟ್ಟುವಿಕೆ ಕಾಯ್ದೆ 1960ರ ಕಲಂ 11ರ ಅಡಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ದೋಷಾರೋಪ ಸಾಬೀತಾಗಿದ್ದರಿಂದ ಅಪರಾಧಿಗಳಾದ ಶಿವಮೊಗ್ಗದ ಮಹಮ್ಮದ್‌ ನೂರುಲ್ಲಾ, ಸೈಯ್ಯದ್‌ ರಿಯಾಜ್‌, ಮುಕ್ರಮ್‌ಗೆ ಶಿಕ್ಷೆ ವಿಧಿಸಲಾಗಿದೆ. ಪ್ರಕರಣ ವಿಚಾರಣೆ ಹಂತದಲ್ಲಿ 4ನೇ ಆರೋಪಿ ಕೊಪ್ಪ ತಾಲ್ಲೂಕಿನ ದತ್ತ ಮೃತಪಟ್ಟಿದ್ದರು.

ADVERTISEMENT

ಐಪಿಸಿ ಕಲಂ 379ರಡಿ 3 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ತಲಾ ₹ 10,000 ದಂಡ ತಪ್ಪಿದರೆ 6 ತಿಂಗಳ ಕಠಿಣ ಕಾರಾಗೃಹ ವಾಸ; ಪ್ರಾಣಿಗಳ ವಿರುದ್ಧ ಕ್ರೌರ್ಯ ನಿಷೇಧ ಮತ್ತು ತಡೆಗಟ್ಟುವಿಕೆ ಕಾಯ್ದೆ 1960ರಡಿ ₹ 50 ದಂಡ ತಪ್ಪಿದರೆ 3 ದಿನ ಸದಾ ಕಾರಾಗೃಹ ವಾಸ; ಕರ್ನಾಟಕ ಗೋವು ಸಂರಕ್ಷಣೆ ಮತ್ತು ಗೋ ಹತ್ಯಾ ನಿಷೇಧ ಕಾಯ್ದೆ 1964ರಡಿ 6 ತಿಂಗಳ ಕಠಿಣ ಕಾರಾಗೃಹ ವಾಸ ತಲಾ ₹ 1,000 ದಂಡ ತಪ್ಪಿದರೆ 15 ದಿನಗಳ ಸಾದಾ ಕಾರಾಗೃಹ ವಾಸ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಡಿ. ಬಿನು ಪ್ರಕರಣದ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.