ಭದ್ರಾವತಿ: ನಗರದ ಹೃದಯ ಭಾಗದಲ್ಲಿರುವ ನಿರ್ಮಾಣ ಹಂತದಲ್ಲಿರುವ ನೂತನ ಸೇತುವೆ ಉದ್ಘಾಟನೆ ಆಗದಿದ್ದರೂ ತರಾತುರಿಯಲ್ಲಿ ಸಂಚಾರಕ್ಕೆ ಮುಕ್ತಗೊಂಡಿದೆ.
ಐದಾರು ವರ್ಷಗಳಿಂದ ರಸ್ತೆ ಅಭಿವೃದ್ಧಿ ನಿಗಮದಿಂದ ₹ 21.34 ಕೋಟಿ ವೆಚ್ಚದಲ್ಲಿ 240.5 ಮೀಟರ್ ಉದ್ದದ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಈವರೆಗೂ ಕಾಮಗಾರಿ ಪೂರ್ಣಗೊಳ್ಳದಿದ್ದರೂ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ವರ್ಷ ಅಧಿಕ ಮಳೆ ಸುರಿದ ಪರಿಣಾಮ ಹೊಸ ಸೇತುವೆ ಸಂಪೂರ್ಣ ಮುಳುಗಿತ್ತು. ಆಗ ಈ ಹಳೆಯ ಸೇತುವೆ ಮೇಲೆ ಸಂಚಾರಕ್ಕೆ ಅನುವು ಮಾಡಲಾಗಿತ್ತು.
ಸೇತುವೆಯಿಂದ ನಗರಕ್ಕೆ ಸಂಪರ್ಕ ಕಲ್ಪಿಸುವಲ್ಲಿ ಮಾಧವಾಚಾರ್ ವೃತ್ತ ಇದೆ. ಸೇತುವೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುವ ಮುನ್ನ ಈ ಮಾಧವಾಚಾರ್ ವೃತ್ತದ ಬಳಿ ಯಾವುದೇ ಸೂಚನಾ ಫಲಕ, ಸಿಗ್ನಲ್ ಲೈಟ್ ಅಳವಡಿಸಿಲ್ಲ. ತರಾತುರಿಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿರುವ ಕಾರಣ ಇಲ್ಲಿ ಸಂಚಾರ ನಿಯಮ ಪಾಲನೆಯಾಗದೇ ಅಪಘಾತಗಳು ಸಂಭವಿಸುತ್ತಿವೆ.
ಹಳೆ ಸೇತುವೆ ಹಾಗೂ ಅಪೂರ್ಣಗೊಂಡಿರುವ ಹೊಸ ಸೇತುವೆ ನಡುವೆ ರಸ್ತೆ ವಿಭಜಕ ಅಳವಡಿಸಿಲ್ಲ. ಇದರಿಂದಾಗಿ ಎರಡೂ ಸೇತುವೆಗಳಲ್ಲಿ ವಾಹನಗಳು ಸಂಚರಿಸುತ್ತಿವೆ. ಸೇತುವೆಗಳಲ್ಲಿ ಏಕಮುಖ ಸಂಚಾರದ ವ್ಯವಸ್ಥೆಯೂ ಇಲ್ಲ. ಇದರಿಂದ ಅಪಘಾತಗಳಿಗೆ ಆಹ್ವಾನ ನೀಡಲಾಗುತ್ತಿದೆ ಎಂದು ವಾಹನ ಚಾಲಕ ಮುರುಗೇಶ್ ದೂರಿದರು.
ಮಾಧವಾಚಾರ್ ವೃತ್ತದ ಬಳಿ ನಗರದಿಂದ ತರಿಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಸಿ.ಎನ್. ರಸ್ತೆ, ಬಿ.ಎಚ್. ರಸ್ತೆ ಮತ್ತು ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ರಸ್ತೆಗಳು ಕೂಡುತ್ತವೆ. ಹೀಗಾಗಿ ಇಲ್ಲಿ ವಾಹನಗಳ ಓಡಾಟ ಹೆಚ್ಚು.
‘ಎಲ್ಲ ಕಡೆಯಿಂದಲೂ ಒಮ್ಮೆಲೆ ವಾಹನಗಳು ಬಂದು ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಸಿಗ್ನಲ್ ಲೈಟ್ ಅಳವಡಿಸಬೇಕು’ ಎಂದು ಟ್ಯಾಕ್ಸಿ ಚಾಲಕ ಸುಮನ್ ಒತ್ತಾಯಿಸಿದರು.
‘ಸೇತುವೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡುವ ಮುನ್ನ ಪೊಲೀಸರು ಸೂಚನಾ ಫಲಕ ಅಳವಡಿಕೆ ಸೇರಿದಂತೆ ಯಾವುದೇ ಸಂಚಾರ ನಿಯಮಗಳನ್ನು ಪಾಲಿಸಿಲ್ಲ. ಏಕಾಏಕಿ ವಾಹನಗಳಿಗೆ ಅವಕಾಶ ನೀಡಿದ್ದಾರೆ. ಇದರ ಜತೆಗೆ ರಸ್ತೆ ದುರಸ್ತಿ ಬಗ್ಗೆಯೂ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
‘ಈ ಹಿಂದೆ ರಂಗಪ್ಪ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಸಲಾಗಿತ್ತು. ಕ್ರಮೇಣ ನಿರ್ವಹಣೆಯ ಸಮಸ್ಯೆಯಿಂದಾಗಿ ಅದು ದುರಸ್ತಿಗೆ ಬಂದಿದೆ. ನಗರದಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ಅವಶ್ಯಕತೆ ಹೆಚ್ಚಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಅನುದಾನ ಬಿಡುಗಡೆಗೊಳಿಸಿದರೆ ಸೂಚನಾ ಫಲಕ, ಸಿಗ್ನಲ್ ಅಳವಡಿಸಲಾಗುವುದು’ ಎಂದು ಸಂಚಾರ ಠಾಣೆ ಪಿಎಸ್ಐ ಶಾಂತಲಾ ‘ಪ್ರಜಾವಾಣಿ’ಗೆ ತಿಳಿಸಿದರು.
ಸೂಚನಾ ಫಲಕ ಅಳವಡಿಕೆ ಸಂಬಂಧ ಅನುದಾನಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು.ಪ್ರಕಾಶ್ ಎಂ. ಚನ್ನಪ್ಪನವರ, ನಗರಸಭೆ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.