ಭದ್ರಾವತಿ: ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಸರ್ಕಾರದ ವಿವಿಧ ಯೋಜನೆಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೂ ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು ಆರೋಪಿಸಿದರು.
ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಬಲ್ಕೀಶ್ ಭಾನು ಸೇರಿದಂತೆ ಹಲವು ಜನಪ್ರತಿನಿಧಿಗಳು ಈ ಕುರಿತು ಪ್ರಸ್ತಾಪಿಸಿ, ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಫಾರಂ 94 ಸಿಸಿ ಹಾಗೂ ಫಾರಂ 50, 53, 57 ಸೇರಿದಂತೆ ಸರ್ಕಾರದ ವಿವಿಧ ಯೋಜನೆ ಅಡಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಜನರಿಂದ ಹಲವು ದೂರು ಬಂದಿವೆ ಎಂದು ದೂರಿದರು.
‘ಸರ್ಕಾರದ ಮಾರ್ಗಸೂಚಿಯಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬಾರದು. 15 ದಿನಗಳಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿರುವವರ ಪ್ರಕರಣ ಇತ್ಯರ್ಥವಾಗಬೇಕು. ಇಲ್ಲವಾದಲ್ಲಿ ತಹಶೀಲ್ದಾರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ. ಸಂಗಮೇಶ್ವರ ಎಚ್ಚರಿಸಿದರು.
‘ಕಂದಾಯ ಇಲಾಖೆ ಅಧಿಕಾರಿಗಳು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಯಾವುದೇ ನೋಟಿಸ್ ನೀಡದೆ ಏಕಾಏಕಿ ಸರ್ವೆ ಕೈಗೊಂಡಿದ್ದಾರೆ. ಇದರಿಂದ ಗ್ರಾಮಗಳಲ್ಲಿ ಘರ್ಷಣೆ ಉಂಟಾಗಿದೆ’ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ ದೂರಿದರು.
ನಗರಸಭೆ ಸದಸ್ಯ ಬಿ.ಕೆ. ಮೋಹನ್, ‘ಒಂದು ಕಡೆ ಕಂದಾಯ ಇಲಾಖೆ ಭೂಮಿ ನಮಗೆ ಸೇರಿದೆ ಎಂದರೆ ಮತ್ತೊಂದು ಕಡೆ ಅರಣ್ಯ ಇಲಾಖೆ ನಮಗೆ ಸೇರಿದೆ ಎನ್ನುತ್ತಿದೆ. ಈ ಎರಡು ಇಲಾಖೆಯಿಂದ ಜನರಿಗೆ ತೊಂದರೆಯಾಗುತ್ತಿದೆ’ ಎಂದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಕೆ.ಡಿ.ಪಿ. ಸದಸ್ಯರಾದ ಬಾಬು ರಾಜೇಂದ್ರ, ಬಿ.ಕೆ. ರಮೇಶ್, ಜಯಲಕ್ಷ್ಮಿ, ಮಂಜುನಾಥ್, ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಅವಿನ್, ತಹಶೀಲ್ದಾರ್ ಕೆ.ಆರ್. ನಾಗರಾಜ್, ತಾಲ್ಲೂಕು ಪಂಚಾಯಿತಿ ಇಒ ಎಂ. ಗಂಗಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.