ADVERTISEMENT

ಶಿವಮೊಗ್ಗದ ಚಿತ್ರಣ ಬದಲು: ಈಶ್ವರಪ್ಪ

ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನೆ: ವೇದಿಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 4:59 IST
Last Updated 19 ಫೆಬ್ರುವರಿ 2023, 4:59 IST
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.   

ಶಿವಮೊಗ್ಗ: ಇಲ್ಲಿನ ಸೋಗಾನೆ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟದ ಕನಸು ನನಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣದ ಉದ್ಘಾಟನೆಗೆ ಬರುತ್ತಿರುವುದು ಸಂಭ್ರಮದ ವಿಷಯವಾಗಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಸೋಗಾನೆಯ ವಿಮಾನ ನಿಲ್ದಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಶನಿವಾರ ಭೇಟಿ ನೀಡಿ, ವೇದಿಕೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಶಿವಮೊಗ್ಗದ ವಿಮಾನ ನಿಲ್ದಾಣದ ಹಿಂದೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಕೊಡುಗೆ ಅಪಾರ. ಈ ಇಬ್ಬರ ಹೆಸರು ವಿಮಾನ ನಿಲ್ದಾಣ ಇರುವವರೆಗೂ ಶಾಶ್ವತವಾಗಿ ಉಳಿಯುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ವಿಮಾನ ನಿಲ್ದಾಣವಲ್ಲದೆ ಇತರ ಕಾಮಗಾರಿಗಳ ಉದ್ಘಾಟನೆ ಹಾಗೂ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸುವರು. ಸ್ಮಾರ್ಟ್ ಸಿಟಿ ಸೇರಿದಂತೆ ಸುಮಾರು 44 ಯೋಜನೆಗಳ ₹ 5,000 ಕೋಟಿ ವೆಚ್ಚದ ಕಾಮಗಾರಿಗಳಿಗೆ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ ಎಂದರು.

ADVERTISEMENT

ವಿಮಾನ ಹಾರಾಟ ಆರಂಭವಾದರೆ ನಗರದ ಚಿತ್ರಣವೇ ಬದಲಾಗುತ್ತದೆ. ಜಗತ್ತಿನ ಉದ್ಯಮಿಗಳು ಶಿವಮೊಗ್ಗಕ್ಕೆ ಬರುತ್ತಾರೆ. ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷ ಜನರು ಸಾಕ್ಷಿಯಾಗಲಿದ್ದಾರೆ ಎಂದರು.

‘ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ, ನಾನು ವಿಮಾನ ನಿಲ್ದಾಣಕ್ಕಾಗಿ ಶ್ರಮಿಸಿದ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ಸೂಚಿಸಿದ್ದು ನಿಜ. ಇದು ಸಚಿವ ಸಂಪುಟದಲ್ಲೂ ಅನುಮೋದನೆ ಆಗಿತ್ತು. ಆದರೆ, ಯಡಿಯೂರಪ್ಪನವರು ತಮ್ಮ ಹೆಸರು ಬೇಡ ಎಂದು ಕುವೆಂಪು ಹೆಸರನ್ನು ಸೂಚಿಸಿದ್ದಾರೆ. ಆದರೆ, ಈ ಹೆಸರು ಕೂಡ ಅಂತಿಮವಲ್ಲ. ಯಡಿಯೂರಪ್ಪನವರ ಹೆಸರು ಮತ್ತೆ ಮುಂಚೂಣಿಗೆ ಬರಬಹುದು, ನೋಡೋಣ’ ಎಂದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್. ರುದ್ರೇಗೌಡ, ಕೆ.ಬಿ. ಅಶೋಕನಾಯ್ಕ, ಎಸ್.ಎಸ್ ಜ್ಯೋತಿ ಪ್ರಕಾಶ್, ಪವಿತ್ರಾ ರಾಮಯ್ಯ, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಸಿ.ಎಸ್. ಷಡಾಕ್ಷರಿ ಹಾಗೂ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.