ADVERTISEMENT

ರೈತರಿಗೆ ನೋಟಿಸ್‌ ನೀಡದಂತೆ ಅರಣ್ಯ ಇಲಾಖೆಗೆ ಸೂಚನೆ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 16:04 IST
Last Updated 19 ಅಕ್ಟೋಬರ್ 2024, 16:04 IST
ಮಧು ಬಂಗಾರಪ್ಪ
ಮಧು ಬಂಗಾರಪ್ಪ   

ಶಿವಮೊಗ್ಗ: ಮೂರು ಎಕರೆ ಒಳಗಿನ ಭೂಮಿ ಸಾಗುವಳಿ ಮಾಡುವ ರೈತರಿಗೆ ನೋಟಿಸ್‌ ನೀಡಿ ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. 

3 ಎಕರೆ ಮೇಲ್ಪಟ್ಟು ಒತ್ತುವರಿ ಮಾಡಿಕೊಂಡಿರುವ ರೈತರ ಮೇಲೆ ಅರಣ್ಯ ಇಲಾಖೆ ಕ್ರಮಕ್ಕೆ ಮುಂದಾಗಲಿದೆ. ಸಣ್ಣ ರೈತರ ಭೂಮಿ ತೆರವುಗೊಳಿಸುವಂತೆ ನೋಟಿಸ್‌ ನೀಡುವುದಿಲ್ಲ. ಕೆಲವೊಂದು ಕಡೆ ಆಗಿರುವ ತಪ್ಪನ್ನು ತಿದ್ದಿಕೊಳ್ಳುವಂತೆ ಈಗಾಗಲೇ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಶನಿವಾರ ತಿಳಿಸಿದರು.

ಶರಾವತಿ ಸಂತ್ರಸ್ತರು ಸೇರಿದಂತೆ ಎಲ್ಲ ರೈತರ ಹಿತವನ್ನು ರಾಜ್ಯ ಸರ್ಕಾರ ಕಾಯಲಿದೆ. ಹಲವು ವರ್ಷಗಳಿಂದ ಭೂಮಿ ಸಾಗುವಳಿ ಮಾಡಿಕೊಂಡು ಬಂದಿರುವ ಅನ್ನದಾತರ ಪರ ಇದ್ದೇವೆ. ಸಣ್ಣಸಣ್ಣ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದರು.

ADVERTISEMENT

‘ಭೂಮಿ ಸಮಸ್ಯೆಯನ್ನು ಸಂಪೂರ್ಣ ನಿವಾರಣೆ ಮಾಡಲು ಮತ್ತು ಸಾಗುವಳಿದಾರರ ಹಿತ ಕಾಪಾಡಲು ರಾಜ್ಯ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ. ಸರ್ಮಥವಾಗಿ ವಾದ ಮಾಡಲು ವಕೀಲರನ್ನು ನಿಯೋಜಿಸುವಂತೆ ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ನ್ಯಾಯಾಲಯದ ಮೂಲಕ ರೈತರಿಗೆ ಶುಭಸುದ್ದಿ ನೀಡುತ್ತೇವೆ. ಅನ್ನದಾತರು ಆತಂಕಕ್ಕೆ ಒಳಗಾಗಬಾರದು’ ಎಂದು ಹೇಳಿದರು. 

‘ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿರುವ ರೈತನ್ನು ತೆರವುಗೊಳಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅನ್ನದಾತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಬಿಜೆಪಿ ಸರ್ಕಾರ ರೈತರಿಗೆ ಭಾರಿ ಅನ್ಯಾಯ ಮಾಡಿದೆ. ಇದನ್ನು ಹೋರಾಟಗಾರರು ಅರಿಯಬೇಕು’ ಎಂದರು. 

‘ಲೋಕಾಯುಕ್ತ ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರೈತರಿಗೆ ಅರಣ್ಯ ಇಲಾಖೆಯವರು ನೋಟಿಸ್‌ ನೀಡುತ್ತಿದ್ದಾರೆ. ಭೂಮಿ ಸಮಸ್ಯೆ ನಿವಾರಣೆಗಾಗಿ ಸಾಗರದಲ್ಲಿ ಅಕ್ಟೋಬರ್‌ 21ರಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದಲ್ಲಿ ಕೆಲವೊಂದು ರಾಜಕೀಯ ಸಂಘ ಸಂಸ್ಥೆಗಳು ಪ್ರಭಾವ ಬೀರಿವೆ. ರಾಜ್ಯ ಸರ್ಕಾರ ಏನೂ ಮಾಡುತ್ತಿಲ್ಲ ಎಂದು ರೈತ ಹೋರಾಟಗಾರ ತೀ.ನಾ. ಶ್ರೀನಿವಾಸ್‌ ಹೇಳುತ್ತಿರುವುದು ಸರಿಯಲ್ಲ. ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು’ ಎಂದು ಮಧು ಬಂಗಾರಪ್ಪ ಹೇಳಿದರು. 

ಜಿಲ್ಲಾ ಮತ್ತು ರಾಜ್ಯಮಟ್ಟದ ಅರಣ್ಯ ಸಮಿತಿ ನೇಮಕ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ಜನಪ್ರತಿನಿಧಿಗಳು, ರೈತರು ಮತ್ತು ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ಶೀಘ್ರದಲ್ಲಿ ರಚಿಸುವ ಸಾಧ್ಯತೆಯಿದೆ ಎಂದು ಹೇಳಿದರು. 

ವಿಧಾನ ಪರಿಷತ್‌ ಸದಸ್ಯೆ ಬಲ್ಕಿಷ್‌ ಬಾನು, ಮಾಜಿ ಶಾಸಕ ಆಯನೂರು ಮಂಜುನಾಥ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ. ಮಂಜುನಾಥಗೌಡ, ಉಪಾಧ್ಯಕ್ಷ ಮರಿಯಪ್ಪ, ಜಿ.ಡಿ. ಮಂಜುನಾಥ, ಕಲಗೋಡು ರತ್ನಾಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.