ಶಿವಮೊಗ್ಗ: ‘ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಬೆಲೆ ಕೇವಲ ₹50 ಕೋಟಿಯೇ?’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.
‘ಆಪರೇಷನ್ ಕಮಲದ ವೇಳೆ ಸಂಗಮೇಶ್ ಅವರಿಗೆ ಬಿಜೆಪಿ ₹50 ಕೋಟಿ ನೀಡುವ ಆಮಿಷ ಒಡ್ಡಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಡಿ.ಕೆ.ಶಿವಕುಮಾರ್‌ಗೆ ಶಾಸಕರ ಬೆಲೆ ಗೊತ್ತಿಲ್ಲ. ನಾನು ಸಂಗಮೇಶ್‌ಗೆ ಕೊಟ್ಟಿದ್ದು ₹ 500 ಕೋಟಿ ಆಫರ್’ ಎಂದು ಟಾಂಗ್ ನೀಡಿದರು.
‘ಶಿವಮೊಗ್ಗದಲ್ಲಿ ಕೋಮುಗಲಭೆಗೆ ಈಶ್ವರಪ್ಪ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದ್ದಾರೆ. ಅವರ ಹೇಳಿಕೆ ಆಶ್ಚರ್ಯ ತಂದಿದೆ. ಅವರಿಗೆ ಉತ್ತರ ಕೊಡುವ ಅಗತ್ಯ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಹಿಂದುಳಿದ ವರ್ಗಗಳ ಬಗ್ಗೆ ಕಾಂಗ್ರೆಸ್ ಒಲವು ತೋರಿಸುವುದರಲ್ಲಿ ಅರ್ಥವೇ ಇಲ್ಲ. ಬಿ.ಆರ್.ಅಂಬೇಡ್ಕರ್, ಜಗಜೀವನ ರಾಮ್ ಅವರನ್ನು ಸೋಲಿಸಿದ್ದ ಕಾಂಗ್ರೆಸ್ ಒಬಿಸಿ ವರ್ಗದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರಿಗೆ ಹಿಂದುಳಿದವರ ಬಗ್ಗೆ ಪ್ರೀತಿ ಇದ್ದರೆ ಈಶ್ವರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡಬೇಕಿತ್ತು. ಏಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಮೇಲಿನ ಪ್ರೀತಿಗೆ ಧನ್ಯವಾದ. ಆದರೆ ನನ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎನ್ನುವ ಅವರ ವ್ಯಂಗ್ಯ ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಹಿಂದುಳಿದ ವರ್ಗದವರು ಎಂಬ ಪ್ರಜ್ಞೆ ಅವರಿಗಿರಲಿ’ ಎಂದ ಅವರು, ‘ಸಿದ್ದರಾಮಯ್ಯ ಈ ಜನ್ಮದಲ್ಲಿ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ’ ಎಂದರು.
‘ರಾಜ್ಯದಲ್ಲಿ ಹಲವು ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಕುಲಶಾಸ್ತ್ರ ಅಧ್ಯಯನದ ವರದಿ ಬಂದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು. ಮೇಯರ್ ಶಿವಕುಮಾರ್, ಎಸ್.ಎನ್. ಚನ್ನಬಸಪ್ಪ, ಉಪಮೇಯರ್ ಲಕ್ಷ್ಮೀಶಂಕರ್ ನಾಯ್ಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.