ಸೊರಬ: ಇಲ್ಲಿನ ಹೊಸಪೇಟೆ ಬಡಾವಣೆಯ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಕೈಗಾರಿಕಾ ತರಬೇತಿ (ಐಟಿಐ) ಸಂಸ್ಥೆ ಹಲವು ಸಮಸ್ಯೆಗಳಿಂದ ನಲುಗುತ್ತಿದೆ.
2008ರಲ್ಲಿ ಸ್ಥಾಪನೆಗೊಂಡ ಕಾಲೇಜಿಗೆ ಈವರೆಗೂ ಸ್ವಂತ ಕಟ್ಟಡದ ಭಾಗ್ಯ ದೊರೆತಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೊಸಪೇಟೆ ಬಡಾವಣೆಯಲ್ಲಿರುವ ವಿಘ್ನೇಶ್ವರ ಚಿತ್ರಮಂದಿರದ ಹಳೆಯ ಕಟ್ಟಡದಲ್ಲಿ ಐಟಿಐ ಕಾಲೇಜನ್ನು ಮಾಸಿಕ ₹ 45,000ಕ್ಕೆ ಬಾಡಿಗೆ ಪಡೆದು ನಡೆಸಲಾಗುತ್ತಿದೆ. ಆ ಕಟ್ಟಡದಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆ ಇರುವುದರ ಜೊತೆಗೆ ಮಳೆ ಬಂದರೆ ಕಟ್ಟಡ ಸೋರುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿ ಉಂಟು ಮಾಡಿದೆ.
ಸೌಲಭ್ಯ ಒದಗಿಸಲು ಕಟ್ಟಡದ ಮಾಲೀಕರು ಸ್ಪಂದಿಸುತ್ತಿಲ್ಲ. ಪ್ರತಿ ವರ್ಷ ಕಾಲೇಜಿಗೆ ಪೂರೈಕೆಯಾದ ಉಪಕರಣ ಇಡಲು ಜಾಗವಿಲ್ಲ. ಪ್ರಾಯೋಗಿಕ ತರಗತಿ ನಡೆಸಲು ಯೋಗ್ಯವಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.
ಕಾಲೇಜಿನಲ್ಲಿ ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕ್, ಎಂಎಂವಿ, ಐಸಿಟಿಎಸ್‌ಎಂ, ಫಿಟ್ಟರ್ ಸೇರಿ 6 ಟ್ರೇಡ್‌ಗಳಿವೆ. ಈ ಎಲ್ಲ ಟ್ರೇಡ್‌ಗಳಿಗೂ ಬೇಡಿಕೆ ಇದೆ. ಆದರೆ, ಕಾಲೇಜಿನಲ್ಲಿ ಮೂಲ ಸೌಲಭ್ಯದ ಕೊರತೆ ನಡುವೆಯೂ ಪ್ರಥಮ ವರ್ಷದಲ್ಲಿ 83 ಹಾಗೂ ಎರಡನೇ ವರ್ಷದಲ್ಲಿ 88 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ.
ಬಹುತೇಕ ಬಡವರು ಹಾಗೂ ಕೂಲಿ ಕಾರ್ಮಿಕರ ಮಕ್ಕಳೇ ಐಟಿಐ ಸೇರಿದಂತೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯುತ್ತಿದ್ದಾರೆ. ಆದರೆ, ಇಲ್ಲಿ ಕಲಿಕೆಗೆ ಪೂರಕ ವಾತಾವರಣ ಇಲ್ಲದೇ ತರಬೇತಿಗೆ ಹಿನ್ನಡೆಯಾಗಿದೆ.
ಶಿಥಿಲಾವಸ್ಥೆ ತಲುಪಿರುವ ಕಟ್ಟಡದಲ್ಲಿ ದೂಳು, ಬಿರುಕುಬಿಟ್ಟ ಗೋಡೆ, ಕಸದ ರಾಶಿಯಲ್ಲಿ ಕುಳಿತು ಪಾಠ ಕೇಳುವ ದುಃಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ. ಕಿರಿಯ ತರಬೇತಿ ಅಧಿಕಾರಿಗಳ 10 ಹುದ್ದೆ, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರ ತಲಾ ಒಂದು ಹುದ್ದೆ, ಬೆರಳಚ್ಚು, ತರಬೇತಿ ಸಹಾಯಕ ಹಾಗೂ ಗ್ರೂಪ್ ‘ಡಿ’ ಹುದ್ದೆ ಸೇರಿದಂತೆ 15 ಹುದ್ದೆಗಳು ಖಾಲಿ ಇವೆ. ಶಿಕಾರಿಪುರ ಕಾಲೇಜಿನ ಪ್ರಾಂಶುಪಾಲರಿಗೆ ಈ ಕಾಲೇಜಿಗೆ ಹೆಚ್ಚುವರಿ ಹೊಣೆ ನೀಡಲಾಗಿದ್ದು, ಅವರು ವಾರದಲ್ಲಿ ಎರಡು ದಿನ ಬರುತ್ತಾರೆ.
ಒಬ್ಬರು ತರಬೇತಿ ಅಧಿಕಾರಿ ಇದ್ದು, ಅವರನ್ನು ಹಳಿಯಾಳಕ್ಕೆ ನಿಯೋಜನೆ ಮಾಡಲಾಗಿದೆ. ಇರುವ ಒಂದಿಬ್ಬರು ಉಪನ್ಯಾಸಕರು ಕೂಡ ಬಹುತೇಕ ಸಂದರ್ಭಗಳಲ್ಲಿ ಕಾಲೇಜಿಗೆ ಬರುತ್ತಿಲ್ಲ ಎನ್ನುವ ಆರೋಪವಿದೆ. ಕಾಯಂ ಸಿಬ್ಬಂದಿ ಅನುಪಸ್ಥಿತಿಯಲ್ಲಿ ಐವರು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತಿವೆ.
ಬಿಡುಗಡೆಯಾದ ಅನುದಾನ ವಾಪಸ್
2021ರಲ್ಲಿ ಪಟ್ಟಣದ ಸರ್ವೆ ನಂ. 113ರಲ್ಲಿ 5 ಎಕರೆ ಜಮೀನು ಕಾಯ್ದಿರಿಸಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಕಟ್ಟಡ ನಿರ್ಮಾಣಕ್ಕೆ ₹ 2.40 ಕೋಟಿ ಅನುದಾನವೂ ಬಿಡುಗಡೆಯಾಗಿತ್ತು. ಆದರೆ ರೈತರು ಭೂಮಿ ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ ಕಾರಣ ಕಾಲೇಜಿಗೆ ಭೂಮಿ ಮಂಜೂರಾಗಿಲ್ಲ. ಇದರಿಂದ ಅನುದಾನ ವಾಪಸ್ ಹೋಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮತ್ತೆ ಭೂಮಿ ಮಂಜೂರಾತಿ ಮಾಡಿಸಿ ಕಟ್ಟಡ ನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪರೀಕ್ಷೆ ಬರೆಯಲು ಪರ ಊರಿಗೆ...
ಗರಿಷ್ಠ ವಿದ್ಯಾರ್ಥಿಗಳು ಸೊರಬ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದರೂ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಸಾಗರ ಶಿಕಾರಿಪುರ ಶಿರಾಳಕೊಪ್ಪದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದೆ. ತಾಲ್ಲೂಕು ಕೇಂದ್ರವಾಗಿದ್ದರೂ ಪೀಠೋಪಕರಣಗಳು ಲ್ಯಾಬ್ ವರ್ಕ್‌ಶಾಪ್ ಸೇರಿ ಮೂಲ ಸೌಕರ್ಯಗಳು ಇಲ್ಲದ ಕಾರಣ ಮೇಲಧಿಕಾರಿಗಳು ಪರೀಕ್ಷಾ ಕೇಂದ್ರ ತೆರೆಯಲು ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಕಾಲೇಜು ಸ್ವಂತ ಕಟ್ಟಡವನ್ನು ಹೊಂದಿದಾಗ ವಿದ್ಯಾರ್ಥಿಗಳು ಪರಿಪೂರ್ಣ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಸಂಬಂಧಪಟ್ಟ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಲಾಗಿದೆ.–ವಿಜಯಕುಮಾರ್, ಹೆಚ್ಚುವರಿ ಪ್ರಾಂಶುಪಾಲ
ಎಲ್ಲ ಟ್ರೇಡ್‌ಗಳಿಗೂ ಕಾಯಂ ಉಪನ್ಯಾಸಕರ ಕೊರತೆ ಇದೆ. ಅತಿಥಿ ಉಪನ್ಯಾಸಕರು ಈ ಕೊರತೆ ನೀಗಿಸಿದ್ದಾರೆ. ಕಾಲೇಜಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕು.–ಸಚಿನ್, ಐಟಿಐ ಎರಡನೇ ವರ್ಷದ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.