ADVERTISEMENT

ಹಳ್ಳ ಹಿಡಿದ ‘ಗ್ಯಾರಂಟಿ’ ಯೋಜನೆಗಳು: ಕೆ.ಅಜ್ಜಪ್ಪ ಆರೋಪ

ಜೆಡಿಎಸ್ ಹಿರಿಯ ಮುಖಂಡ ಕೆ.ಅಜ್ಜಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 13:19 IST
Last Updated 29 ಡಿಸೆಂಬರ್ 2023, 13:19 IST
ಸೊರಬದಲ್ಲಿ ಶುಕ್ರವಾರ ಜೆಡಿಎಸ್ ಮುಖಂಡರ ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರು ಜೆಡಿಎಸ್ ಸೇರಿದರು
ಸೊರಬದಲ್ಲಿ ಶುಕ್ರವಾರ ಜೆಡಿಎಸ್ ಮುಖಂಡರ ಸಭೆಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರು ಜೆಡಿಎಸ್ ಸೇರಿದರು   

ಸೊರಬ: ರಾಜ್ಯ ಸರ್ಕಾರ ಕಳೆದ 6 ತಿಂಗಳಿನಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ನೆಪದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮರೆತು ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಕೆ.ಅಜ್ಜಪ್ಪ ಆರೋಪಿಸಿದರು.

ಪಟ್ಟಣದ ಆಲೆಕಲ್ಲು ಸಭಾಂಗಣದಲ್ಲಿ ಶುಕ್ರವಾರ ನಡೆದ ಆಮ್ ಆದ್ಮಿ ಮುಖಂಡರು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಅಧಿಕಾರದ ಆಸೆಗಾಗಿ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಹಳ್ಳ ಹಿಡಿದಿವೆ ಎಂದು ದೂರಿದರು.

ADVERTISEMENT

ತಾಲ್ಲೂಕಿನ ತಾಳಗುಪ್ಪ ಗ್ರಾಮದ ಬಗರ್‌ಹುಕುಂ ರೈತರನ್ನು ತೆರವುಗೊಳಿಸಿದ ವಿಚಾರ ಮುಂದಿಟ್ಟುಕೊಂಡು ಸಚಿವ ಮಧು ಬಂಗಾರಪ್ಪ ಗೆದ್ದಿದ್ದಾರೆ. ಆದರೆ, ತೆರವುಗೊಳಿಸಿದ ರೈತರ ಭೂಮಿಯಲ್ಲಿ ಅಡಿಕೆ ಗಿಡ ನೆಟ್ಟು ಅವರ ರಕ್ಷಣೆಗೆ ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದರು.

ಎಚ್.ಡಿ.ಕುಮಾರಸ್ವಾಮಿ‌ ಮುಖ್ಯಮಂತ್ರಿಯಾಗಿದ್ದಾಗ ತಾಲ್ಲೂಕಿನ ಮೂಡಿ, ಮೂಗೂರು ಏತ ನೀರಾವರಿ ಯೋಜನೆಗೆ ₹ 400 ಕೋಟಿ ಅನುದಾನ ನೀಡಿದ್ದರು. ಆ ನಂತರ ಯಾವುದೇ ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಇದು ಸಚಿವರಿಗೆ ರೈತರ ಮೇಲಿರುವ ಕಾಳಜಿ ಏನು ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.

ಸಚಿವರು ಖಾಸಗಿ ಕಾರ್ಯಕ್ರಮಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದು, ಅಭಿವೃದ್ಧಿ ಕಾರ್ಯಗಳನ್ನು ಮರೆತಿದ್ದಾರೆ ಎನ್ನುವ ದೂರು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಗುಂಡಿ ಬಿದ್ದಿರುವ ರಸ್ತೆ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಸರ್ಕಾರದ ವೈಫಲ್ಯ ಖಂಡಿಸಿ ಜೆಡಿಎಸ್ ವತಿಯಿಂದ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹುಚ್ಚಪ್ಪ‌ ಚಿಮಣೂರು ಮಾತನಾಡಿ, ‘50 ವರ್ಷಗಳಿಂದ ತಾಲ್ಲೂಕಿನಲ್ಲಿ ಒಂದೇ ಕುಟುಂಬದವರಿಗೆ ಜನರು ಬೆಂಬಲ ನೀಡಿದ್ದರಿಂದ ಕ್ಷೇತ್ರದಲ್ಲಿ ಸಮಸ್ಯೆಗಳು ಇನ್ನೂ ಜ್ವಲಂತವಾಗಿ ಉಳಿದಿವೆ‌. ಬಂಗಾರಪ್ಪ ಅವರು ರೈತರ ಹಿತ ಗಮನದಲ್ಲಿಟ್ಟುಕೊಂಡು ಸಮಗ್ರ ನೀರಾವರಿ ವ್ಯವಸ್ಥೆ ಕಲ್ಪಿಸಬೇಕಿತ್ತು. ರೈತರಿಗೆ ಅರಣ್ಯ ಕಡಿದು ಸಾಗುವಳಿ ಮಾಡಲು ಪ್ರೇರಣೆ ನೀಡಿದರೇ ಹೊರತು ಭೂ ಹಕ್ಕು ಕೊಡಿಸದ ಪರಿಣಾಮವಾಗಿ ಇಂದು ರೈತರು ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ’ ಎಂದು ದೂರಿದರು.

ಅನುಕೂಲಸಿಂಧು ರಾಜಕಾರಣ ಮಾಡುತ್ತಿರುವ ಸಹೋದರರು ವ್ಯೆಯಕ್ತಿಕ ಅಭಿವೃದ್ಧಿಗೆ ಮಾತ್ರ ಗಮನ ನೀಡುತ್ತಿದ್ದಾರೆ. ಅವರ ಒಳಸಂಚಿನ ರಾಜಕಾರಣಕ್ಕೆ ರೈತಾಪಿ ವರ್ಗ ಬಲಿಯಾಗಿ ಇಂದು ಬಗರ್‌ಹುಕುಂ ಜಮೀನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ ಎಂದರು.

ಆಮ್ ಆದ್ಮಿ ಪಾರ್ಟಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಓಂ ಪಿಕಲ್ ಗಣೇಶ್ ಅವರು ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದರು.

ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಗಜಾನನ, ನಗರ ಘಟಕದ ಅಧ್ಯಕ್ಷ ಶ್ರೀಧರ್ ಶೇಟ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಜೀಜ್, ಗಣೇಶ್, ವಿಷ್ಣು ಬಿಳವಾಣಿ, ಪುಂಡಲೀಕಪ್ಪ, ದಯಾನಂದ ಯಕ್ಷಿ, ಬಸವರಾಜ, ಲೋಕೇಶ್ ಬಾಡದಬೈಲು, ಮಾರುತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.