ಶಿವಮೊಗ್ಗ: ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಅಧಿಕಾರವನ್ನು ಅಧ್ಯಕ್ಷರ ವಿವೇಚನೆಗೆ ನೀಡಿ ಸೋಮವಾರ ನಡೆದ ವಿಶೇಷ ಸಭೆ ನಿರ್ಣಯ ಕೈಗೊಂಡಿತು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅವಧಿ ಮುಕ್ತಾಯವಾದ ಕಾರಣ ವಿಶೇಷ ಸಭೆ ಆಯೋಜಿಸಲಾಗಿತ್ತು. 26 ಸದಸ್ಯರು ಭಾಗವಹಿಸಿದ್ದರು. ಕೋರಂ ಭರ್ತಿಯಾದ ನಂತರ ಸಭೆ ನಡೆಯಿತು.
ಸದಸ್ಯ ಕೆ.ಇ.ಕಾಂತೇಶ್ ವಿಷಯ ಪ್ರಸ್ತಾಪಿಸಿ, ಎಲ್ಲ 5 ಸ್ಥಾಯಿ ಸಮಿತಿಗಳ ಅವಧಿ ಪೂರ್ಣಗೊಂಡಿದೆ. ಮುಂದಿನ ಆಯ್ಕೆ ಪ್ರಕ್ರಿಯೆ ಅಧಿಕಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಬಿಟ್ಟುಕೊಡಲು ಮನವಿ ಮಾಡಿದರು. ಅವರು ಮಂಡಿಸಿದ ಪ್ರಸ್ತಾವಕ್ಕೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು.
ಮಲೆನಾಡು ಭಾಗದಲ್ಲಿ ಅಧಿಕ ಮಳೆಯಾಗುತ್ತಿದೆ. ಗುಡ್ಡ ಕುಸಿತ, ಮನೆಗಳಿಗೆ ನೀರು, ಬೆಳೆ ಹಾನಿಯಾಗಿದೆ. ಎಲ್ಲ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿನ ನಷ್ಟದ ಅಂದಾಜು ಮತ್ತು ಸ್ವರೂಪವನ್ನು ಈ ತಿಂಗಳ 20ರ ಒಳಗೆ ಸಲ್ಲಿಸುವಂತೆ ಸಚಿವ ಈಶ್ವರಪ್ಪ ಸದಸ್ಯರಿಗೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸಿಇಒ ವೈಶಾಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.