ADVERTISEMENT

ಜೋಗ ಜಲಪಾತ ಪ್ರದೇಶ ಪ್ಲಾಸ್ಟಿಕ್ ಮುಕ್ತ ವಲಯ

ಜೋಗ ನಿರ್ವಹಣಾ ಪ್ರಾಧಿಕಾರದ ಮಹತ್ವದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 10:58 IST
Last Updated 18 ಮಾರ್ಚ್ 2020, 10:58 IST
ಕಾರ್ಗಲ್ ಸಮೀಪ ಇರುವ ಜೋಗ ಜಲಪಾತದ ಲೋಕೋಪಯೋಗಿ ಇಲಾಖೆ ನಿರೀಕ್ಷಣ ಗೃಹದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ಮಂಗಳವಾರ ನಡೆಯಿತು.
ಕಾರ್ಗಲ್ ಸಮೀಪ ಇರುವ ಜೋಗ ಜಲಪಾತದ ಲೋಕೋಪಯೋಗಿ ಇಲಾಖೆ ನಿರೀಕ್ಷಣ ಗೃಹದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ಮಂಗಳವಾರ ನಡೆಯಿತು.   

ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ವಲಯವಾಗಿ ಘೋಷಣೆ ಮಾಡಲು ಜೋಗ ನಿರ್ವಹಣಾ ಪ್ರಾಧಿಕಾರ ಮಹತ್ವದ ನಿರ್ಣಯವನ್ನು ಕೈಗೊಂಡಿದೆ ಎಂದು ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದರು.

ಸಮೀಪದ ಜೋಗದ ಲೋಕೋಪಯೋಗಿ ಇಲಾಖೆಯ ನಿರೀಕ್ಷಣಾ ಗೃಹದಲ್ಲಿ ಮಂಗಳವಾರ ನಡೆದ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅವರು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.

‘ಪ್ರಕೃತಿದತ್ತವಾದ ಜಲಪಾತ ಮತ್ತು ಹಸಿರು ಸೌಂದರ್ಯವನ್ನು ಉಳಿಸುವಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ. ರಾತ್ರಿ ಸಂದರ್ಭದಲ್ಲಿ ಜೋಗಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸೀತಾಕಟ್ಟೆ ಸೇತುವೆಯಿಂದ ಪ್ರಾಧಿಕಾರದ ಪ್ರಮುಖ ದ್ವಾರದವರೆಗೆ ಅತ್ಯಾಧುನಿಕ ಮಾದರಿಯ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ ಲಾಕ್ ಅಳವಡಿಸಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ರಾಣಿ ಜಲಪಾತದ ನೆತ್ತಿಯ ಮೇಲಿನ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಪಾರ್ಕಿಂಗ್ ಲಾಟ್‌ಗೆ ಕಾಯಕಲ್ಪ ನೀಡಿ, ಪ್ರವಾಸಿ ವಾಹನಗಳ ನಿಲುಗಡೆ ವ್ಯವಸ್ಥೆಗೆ ಪೂರಕ ವಾತಾವರಣವನ್ನು ಪ್ರಸಕ್ತ ಮುಂಗಾರಿನ ಆಗಮನದ ಒಳಗೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ADVERTISEMENT

‘ತ್ಯಾಜ್ಯಗಳ ನಿರ್ವಹಣೆ ಮತ್ತು ಸ್ವಚ್ಛತೆಗಾಗಿ ಅಲ್ಲಲ್ಲಿ ಇರಿಸಿರುವ ಕಸದ ಬುಟ್ಟಿಗಳಿಂದ ಮಂಗಗಳು ಆಹಾರ ಪದಾರ್ಥಗಳನ್ನು ಹುಡುಕಿ ಹೊರಹಾಕುವ ಸಂದರ್ಭದಲ್ಲಿ ಕಸ ಕಡ್ಡಿಗಳು ಎಲ್ಲೆಡೆ ಹರಡಿ ಜಲಪಾತ ಪ್ರದೇಶದ ಸ್ವಚ್ಛತೆಗೆ ತುಂಬಾ ತೊಡಕನ್ನು ಉಂಟು ಮಾಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕಸದ ಡಬ್ಬಿಗಳಿಗೆ ಕಬ್ಬಿಣದ ಮುಳ್ಳಿನ ಹೊದಿಕೆಗಳನ್ನು ಅಳವಡಿಸಿ ಮಂಗಗಳನ್ನು ನಿಯಂತ್ರಿಸಲು ಸಾಧ್ಯವೇ ಎಂದು ಪ್ರಾಯೋಗಿಕವಾಗಿ ಯೋಜನೆ ರೂಪಿಸಲಾಗುವುದು.

‘ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮೀಸಲಿಡುವ ಅನುದಾನಗಳಿಗೆ ಪೂರಕವಾಗಿ ಜೋಗದ ಸಮಗ್ರವಾದ ಅಭಿವೃದ್ಧಿಗೆ ₹ 60 ಕೋಟಿಯ ವಿಸ್ತ್ರತ ಯೋಜನೆಯನ್ನು ಜಿಎನ್ ಆರ್ಕಿಟೆಕ್ಟ್ ಸಂಸ್ಥೆಯವರು ಸಿದ್ಧಪಡಿಸುತ್ತಿದ್ದು, ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.

ಉಪವಿಭಾಗಾಧಿಕಾರಿ ನಾಗರಾಜ್ ನಾಯ್ಕ, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ದಿನೇಶ್, ಕೆಪಿಸಿ, ಅರಣ್ಯ, ಪೋಲೀಸ್, ಪಟ್ಟಣ ಪಂಚಾಯಿತಿ, ಮೆಸ್ಕಾಂ, ನಿರ್ಮಿತಿ ಕೇಂದ್ರ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.