ಕಾರ್ಗಲ್:ಜೋಗ–ಕಾರ್ಗಲ್ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ನವೆಂಬರ್ 4ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಮುಖ್ಯಾಧಿಕಾರಿ ಲಕ್ಷ್ಮೀ ನಾರಾಯಣ ಮಾಹಿತಿ ನೀಡಿದರು.
ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ (ಎ) ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮೀಸಲಾತಿ ಇದೆ.
ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಹರತಾಳು ಅವರ ಪ್ರಭಾವ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಜಂಟಿಯಾಗಿ ಪಟ್ಟಣ ಪಂಚಾಯಿತಿಯ ಅಧಿಕಾರವನ್ನು ಹಿಡಿಯಲು ಅವಿರತವಾಗಿ ಶ್ರಮಿಸಿದ ಫಲವಾಗಿ ಒಟ್ಟು 11 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಬಿಜೆಪಿ ತೆಕ್ಕೆಗೆ ಸೆಳೆದುಕೊಂಡಿತ್ತು. ಒಬ್ಬರು ಬಿಜೆಪಿ ಬಂಡಾಯ ಅಭ್ಯರ್ಥಿ ಪಕ್ಷೇತರರಾಗಿ ಗೆಲುವು ಪಡೆದು, ನಂತರ ಬಿಜೆಪಿಗೆ ಬೆಂಬಲ ಘೋಷಿಸಿ, ಸೇರ್ಪಡೆಯಾಗಿದ್ದರು. ಇದರಿಂದ ಒಟ್ಟು 10 ಸದಸ್ಯ ಬಲವನ್ನು ಬಿಜೆಪಿ ಪಡೆದು ಪಡೆದು ಬೀಗುತ್ತಿದ್ದರೆ, ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಪಡೆದು ಅಸ್ತಿತ್ವ ಉಳಿಸಿಕೊಂಡಿದೆ.
ಈಗಿನ ಮೀಸಲಾತಿಯ ಅನ್ವಯ ಅಧ್ಯಕ್ಷಗಾದಿಗೆ ಬಿಜೆಪಿಯ ಮಹಿಳಾ ಸದಸ್ಯರಾದ ಜಯಲಕ್ಷ್ಮೀ ಜೋಗ ಮತ್ತು ವಾಸಂತಿ ಕಾರ್ಗಲ್ ನಡುವೆ ಪೈಪೋಟಿ ನಡೆಯಲಿದೆ. ಉಪಾದ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ ಉಮೇಶ ಗಿಳಾಲಗುಂಡಿ, ಸುಬ್ರಮಣಿ ಜಾಲಿಗದ್ದೆ, ಪಿ. ಮಂಜುನಾಥ್ ಮತ್ತು ನಾಗರಾಜ್ ವಾಟೇಮಕ್ಕಿ ಇವರ ಮಧ್ಯೆ ಸ್ಪರ್ದೆ ಏರ್ಪಡಲಿದೆ. ಶಾಸಕ ಹಾಲಪ್ಪ ಮತ್ತು ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಸೂಚಿಸುವ ಹೆಸರು ಅಂತಿಮವಾಗಿ ಅವಿರೋಧವಾಗಿ ಆಯ್ಕೆಯಾಗಲಿದೆ ಎಂದು ಪಕ್ಷದ ಮೂಲಗಳು
ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.