ADVERTISEMENT

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 13 ಮೇ 2021, 13:17 IST
Last Updated 13 ಮೇ 2021, 13:17 IST
ಸಚಿವ ಕೆ.ಎಸ್. ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ: ಜಿಲ್ಲೆಯಲ್ಲಿ 2,540 ಡೋಸ್‌ ಕೋವಿಶೀಲ್ಡ್‌ ಸಂಗ್ರಹವಿದೆ. ಕೋವ್ಯಾಕ್ಸಿನ್‌ ಸಂಪೂರ್ಣ ಖಾಲಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

2,69,600 ಕೋವಿಶಿಲ್ಡ್ ಹಾಗೂ 20,460 ಕೋವ್ಯಾಕ್ಸಿನ್ ಡೋಸ್‌ಗಳು ಬಂದಿವೆ. ಇದುವರೆಗೆ 2,67,060 ಕೋವಿಶೀಲ್ಡ್, 2,460 ಕೋವ್ಯಾಕ್ಸಿನ್ ಡೋಸ್ ನೀಡಲಾಗಿದೆ. 2,41,578 ಜನರು ಮೊದಲ ಡೋಸ್‌ ಪಡೆದಿದ್ದಾರೆ. 54,358 ಜನರಿಗೆ ಎರಡನೇ ಡೋಸ್‌ ಲಭ್ಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 32 ಕೆಎಲ್, ಸರ್ಕಾರಿ ಆಸ್ಪತ್ರೆಯಲ್ಲಿ 19 ಕೆಎಲ್ ಸೇರಿ ಒಟ್ಟು 51 ಕೆಎಲ್ ಆಮ್ಲಜನಕ, 585 ಜಂಬೋ ಸಿಲಿಂಡರ್‌ಗಳು ಲಭ್ಯವಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿರುವ 98 ಕಂಟೈನ್‌ಮೆಂಟ್ ಜೋನ್‌ಗಳಲ್ಲಿ 10 ಸ್ಥಗಿತಗೊಂಡಿವೆ. 88 ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿವೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 552 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 383 ಸೇರಿ 935 ರೆಮ್‌ಡಿಸಿವರ್ ಲಸಿಕೆ ಲಭ್ಯವಿದೆ. ಮಾಸ್ಕ್ ಹಾಕದೆ ಮಾರ್ಗಸೂಚಿ ಉಲ್ಲಂಘಿಸಿದ 9,207 ಪ್ರಕರಣವನ್ನು ದಾಖಲಿಸಿ, ₹ 12,76,850 ದಂಡ ವಿಧಿಸಲಾಗಿದೆ ಎಂದರು.

ADVERTISEMENT

ಕೋವಿಡ್‌ಗೆ ಒಳಗಾದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 776, ಖಾಸಗಿ ಆಸ್ಪತ್ರೆಗಳಲ್ಲಿ 999 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. 216 ಐಸಿಯು ಹಾಸಿಗೆಗಳಿವೆ. 964 ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯವಿದೆ. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಿವರ ನೀಡಿದರು.

ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪ ಆಧಾರರಹಿತ. ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧಾ, ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.