ADVERTISEMENT

ಶಿವಮೊಗ್ಗ: ಮೊದಲ ಬಾರಿಗೆ ಬಂಗಾರಪ್ಪ ಶಿಷ್ಯರ ಮುಖಾಮುಖಿ?

ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಬೇಳೂರು ಗೋಪಾಲಕೃಷ್ಣಗೆ ಕಾಂಗ್ರೆಸ್ ಟಿಕೆಟ್ ಘೋಷಣೆ

ವೆಂಕಟೇಶ್ ಜಿ.ಎಚ್
Published 26 ಮಾರ್ಚ್ 2023, 7:43 IST
Last Updated 26 ಮಾರ್ಚ್ 2023, 7:43 IST
ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ   

ಶಿವಮೊಗ್ಗ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ. ಹಾಲಿ ಶಾಸಕ ಹರತಾಳು ಹಾಲಪ್ಪಗೆ ಬಿಜೆಪಿ ಟಿಕೆಟ್ ಅಂತಿಮಗೊಂಡರೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಶಿಷ್ಯರು ಕಣದಲ್ಲಿ ಮೊದಲ ಬಾರಿಗೆ ಮುಖಾಮುಖಿ ಆದಂತಾಗುತ್ತದೆ. ಮಾಜಿ ಆಪ್ತ ಸ್ನೇಹಿತರು ಪರಸ್ಪರ ತೊಡೆ ತಟ್ಟಲಿರುವುದರಿಂದ ಚುನಾವಣೆ ಕಳೆಗಟ್ಟಲಿದೆ ಎಂದು ಹೇಳಲಾಗುತ್ತಿದೆ.

ಸಾಗರದಲ್ಲಿ ಗೋಪಾಲಕೃಷ್ಣ ಬೇಳೂರು ಸೇರಿದಂತೆ ಆರು ಮಂದಿ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಪುತ್ರಿ ರಾಜನಂದಿನಿ, ಮುಖಂಡರಾದ ಮಲ್ಲಿಕಾರ್ಜುನ ಹಕ್ರೆ, ಕಲಕೋಡು ರತ್ನಾಕರ, ಹುನಗೋಡು ರತ್ನಾಕರ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಈಗ ಮೊದಲ ಪಟ್ಟಿಯಲ್ಲೇ ಬೇಳೂರು ಟಿಕೆಟ್‌ ಗಿಟ್ಟಿಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಬೇಳೂರು ಅವರಿಗೆ ಟಿಕೆಟ್ ಕೊಡದಂತೆ ಕಾಂಗ್ರೆಸ್‌ ಸ್ಥಳೀಯ ಮುಖಂಡರ ಒಂದು ಗುಂಪು ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಲು ಬೆಂಗಳೂರಿಗೆ ತೆರಳಿತ್ತು. ಕಾಗೋಡು ತಿಮ್ಮಪ್ಪ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವಿನ ಹಳೆಯ ಬಾಂಧವ್ಯದ ಕಾರಣ, ಕಾಗೋಡು ಪುತ್ರಿ ರಾಜನಂದಿನಿ ಅವರಿಗೆ ಟಿಕೆಟ್ ಪಕ್ಕಾ ಎಂಬ ಮಾತುಗಳೂ ಕೇಳಿಬರುತ್ತಿದ್ದವು.

ADVERTISEMENT

‘ಎಐಸಿಸಿ ತನ್ನ ಆಂತರಿಕ ಸಮೀಕ್ಷೆಗೆ ಮನ್ನಣೆ ನೀಡಿದೆ. ಹೀಗಾಗಿ ಗೋಪಾಲಕೃಷ್ಣ ಬೇಳೂರು ಅವರ ಹೆಸರು ಅಂತಿಮಗೊಂಡಿದೆ. ಕಾಗೋಡು ಪುತ್ರಿಯ ಬದಲಿಗೆ ಸೋದರ ಅಳಿಯನಿಗೆ ಪಕ್ಷ ಮಣೆ ಹಾಕಿದೆ. ಟಿಕೆಟ್‌ಗಾಗಿ ನಡೆದ ಸ್ಪರ್ಧೆಯಲ್ಲಿ ಬೇಳೂರು ಚುನಾವಣೆಗೆ ಮುನ್ನವೇ ಕಾಗೋಡು ವಿರುದ್ಧ ಗೆಲುವು ಸಾಧಿಸಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಚಟಾಕಿ ಹಾರಿಸಿದರು.

ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು: ‘ಗೋಪಾಲಕೃಷ್ಣ ಬೇಳೂರು ಅವರಿಗೆ ಟಿಕೆಟ್ ಅಂತಿಮಗೊಳಿಸಿದ್ದಕ್ಕೆ ನಮಗೆ ಆಕ್ಷೇಪವಿಲ್ಲ. ಆದರೆ ಉಳಿದ ಆಕಾಂಕ್ಷಿಗಳನ್ನು ಹೈಕಮಾಂಡ್ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಇಷ್ಟೊಂದು ತರಾತುರಿಯಲ್ಲಿ ಹೆಸರು ಪ್ರಕಟಿಸುವ ಮುನ್ನ ಹಿರಿಯರಾದ ಕಾಗೋಡು ತಿಮ್ಮಪ್ಪ ಸೇರಿದಂತೆ ನಮ್ಮೆಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದರೆ ಚುನಾವಣೆಯಲ್ಲಿ ಇನ್ನಷ್ಟು ಅನುಕೂಲ ಆಗುತ್ತಿತ್ತು’ ಎಂದು ಆಕಾಂಕ್ಷಿಗಳಲ್ಲೊಬ್ಬರಾದ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.

‘ಇಂದಷ್ಟೇ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿದೆ. ಟಿಕೆಟ್ ಕೊಡದಿರುವ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ’ ಎಂದು ರಾಜನಂದಿನಿ ಕಾಗೋಡು ಹೇಳಿದರು.

ಒಟ್ಟಾಗಿ ಕರೆದೊಯ್ಯುವೆ: ‘ರಾಜ್ಯ, ರಾಷ್ಟ್ರ ಹಾಗೂ ಜಿಲ್ಲೆಯ ನಾಯಕರ ಆಶೀರ್ವಾದಿಂದ ನನಗೆ ಟಿಕೆಟ್ ಆಗಿದೆ. ಮುಂಚೆಯಿಂದಲೂ ಟಿಕೆಟ್ ಯಾರಿಗೆ ಕೊಟ್ಟರೂ ಕೆಲಸ ಮಾಡುತ್ತೇವೆ ಎಂದು ಹೇಳಿಕೊಂಡು ಬಂದವನು ನಾನು. ನನಗೆ ಟಿಕೆಟ್ ಕೊಡಿ ಎಂದು ಎಲ್ಲಿಯೂ ಹೇಳಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಮುಂದಾಗುವೆ’ ಎಂದು ಬೇಳೂರು ಗೋಪಾಲಕೃಷ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಟಿಕೆಟ್: ಮೂರು ಕಡೆ ಅಂತಿಮ

ವಿಧಾನಸಭೆ ಚುನಾವಣೆಗೆ ಎಐಸಿಸಿ ಶನಿವಾರ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಭದ್ರಾವತಿ ಕ್ಷೇತ್ರಕ್ಕೆ ಹಾಲಿ ಶಾಸಕ ಬಿ.ಕೆ.ಸಂಗಮೇಶ್ವರ, ಸಾಗರಕ್ಕೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಸೊರಬಕ್ಕೆ ಕೆಪಿಸಿಸಿ ಹಿಂದುಳಿದ ವರ್ಗಗಳ ಸಮಿತಿ ಅಧ್ಯಕ್ಷ ಮಧು ಬಂಗಾರಪ್ಪ ಅವರಿಗೆ ಟಿಕೆಟ್ ಅಂತಿಮಗೊಳಿಸಿದೆ.

ಈ ಮಧ್ಯೆ ಶಿವಮೊಗ್ಗ ನಗರ, ಗ್ರಾಮೀಣ, ತೀರ್ಥಹಳ್ಳಿ ಹಾಗೂ ಶಿಕಾರಿಪುರ ಕ್ಷೇತ್ರಗಳ ಟಿಕೆಟ್ ವಿಚಾರದಲ್ಲಿ ಆಕಾಂಕ್ಷಿಗಳ ದುಗುಡ ಹೆಚ್ಚಿಸಿದೆ.

ಮಾವ–ಅಳಿಯ ಮೂರು ಬಾರಿ ಮುಖಾಮುಖಿ!

2003 ಹಾಗೂ 2008ರ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಸೋದರ ಮಾವ ಕಾಗೋಡು ತಿಮ್ಮಪ್ಪ ವಿರುದ್ಧ ಸ್ಪರ್ಧಿಸಿ ಎರಡು ಬಾರಿ ಆಯ್ಕೆಯಾಗಿದ್ದ ಗೋಪಾಲಕೃಷ್ಣ ಬೇಳೂರು, 2013ರಲ್ಲಿ ಜೆಡಿಎಸ್‌ನಿಂದ ನಿಂತು 23,217 ಮತಗಳನ್ನು ಪಡೆದು ಕೆಜೆಪಿ ನಂತರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.

ಕಾಗೋಡು ವಿರುದ್ಧ ಮೂರು ಬಾರಿ ಮುಖಾಮುಖಿ ಆಗಿರುವ ಬೇಳೂರು ಗೋಪಾಲಕೃಷ್ಣ ಎರಡು ಬಾರಿ ಸಿಹಿ, ಒಮ್ಮೆ ಕಹಿ ಅನುಭವಿಸಿದ್ದಾರೆ.

‘ಈ ಬಾರಿ ಮಾವ ಕಾಗೋಡು ತಿಮ್ಮಪ್ಪ ಅವರ ನೆರಳಲ್ಲಿಯೇ ಚುನಾವಣೆಗೆ ಹೋಗುವೆ’ ಎಂದು ಬೇಳೂರು ತಿಳಿಸಿದರು.

ಐದು ದಶಕದ ಸಕ್ರಿಯ ರಾಜಕಾರಣಕ್ಕೆ ಬ್ರೇಕ್...

ಬೇಳೂರು ಗೋಪಾಲಕೃಷ್ಣ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಮೂರೂವರೆ ದಶಕಗಳ ನಂತರ ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬದಲಾಗಿದ್ದಾರೆ. ಇದರೊಂದಿಗೆ ಮಲೆನಾಡಿನಲ್ಲಿ ಕಾಗೋಡು ತಿಮ್ಮಪ್ಪ ಎಂಬ ಸಮಾಜವಾದಿ ನೆಲೆಯ ಮುತ್ಸದ್ಧಿಯ ಸಕ್ರಿಯ ರಾಜಕೀಯ ಯಾನ ಕೊನೆಗೊಂಡಂತಾಗಲಿದೆ.

ಕಾಗೋಡು ತಿಮ್ಮಪ್ಪ ಮೊದಲ ಬಾರಿಗೆ ಸಾಗರ ಕ್ಷೇತ್ರದಿಂದ 1972ರಲ್ಲಿ ಸಂಯುಕ್ತ ಸೋಶಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಲ್.ಟಿ.ತಿಮ್ಮಪ್ಪ ಹೆಗಡೆ ವಿರುದ್ಧ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. 1978ರಲ್ಲಿ ನಡೆದ ಚುನಾವಣೆಯಲ್ಲಿ ಎಲ್‌.ಟಿ. ತಿಮ್ಮಪ್ಪ ಹೆಗಡೆ ಸೇಡು ತೀರಿಸಿಕೊಂಡಿದ್ದರು. 1989ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಾಗೋಡು, ಜನತಾದಳದ ಬಿ.ಆರ್‌.ಜಯಂತ್ ವಿರುದ್ಧ ಗೆಲುವು ಸಾಧಿಸಿದ್ದರು.

ಆಗಿನಿಂದಲೂ 2018ರವರೆಗೆ ನಿರಂತರವಾಗಿ ಏಳು ಬಾರಿ ಕಾಗೋಡು ತಿಮ್ಮಪ್ಪ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಒಟ್ಟು ಒಂಬತ್ತು ಬಾರಿ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರು ಐದು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‌ನಲ್ಲಿ ಅವರ ಗೆಲುವಿನ ಓಟಕ್ಕೆ 2003ರ ಚುನಾವಣೆಯಲ್ಲಿ ಅಳಿಯ ಬೇಳೂರು ಗೋಪಾಲಕೃಷ್ಣ ಬ್ರೇಕ್ ಹಾಕಿದ್ದರು. 2018ರ ಕೊನೆಯ ಚುನಾವಣೆಯಲ್ಲಿ ಹರತಾಳು ಹಾಲಪ್ಪ, ಕಾಗೋಡು ಅವರನ್ನು ಮಣಿಸಿದ್ದಾರೆ.

ಕೋಟ್‌...

ಕಾಗೋಡು ತಿಮ್ಮಪ್ಪ ಸಾಹೇಬರ ಆಶೀರ್ವಾದದಿಂದಲೇ ಟಿಕೆಟ್ ಸಿಕ್ಕಿದೆ. ಅವರ ನೇತೃತ್ವದಲ್ಲಿಯೇ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತರಲಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಹೋಗಲಿದ್ದೇವೆ.

ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ

ಮಧು ಜನರ ನಂಬಿಕೆ ಉಳಿಸಿಕೊಳ್ಳುವರು, ಕ್ಷೇತ್ರವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವರು ಎಂದು ವರಿಷ್ಠರು ಟಿಕೆಟ್ ಕೊಟ್ಟಿದ್ದಾರೆ. ಧನ್ಯವಾದಗಳು.

ಮಧು ಬಂಗಾರಪ್ಪ, ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ

ಐದು ವರ್ಷಗಳ ಕಾಲ ಶಾಸಕನಾಗಿ ಮಾಡಿದ ಕೆಲಸ ಗಮನಿಸಿ ಪಕ್ಷದ ವರಿಷ್ಠರು ಮತ್ತೆ ಭದ್ರಾವತಿಯ ಟಿಕೆಟ್ ನೀಡಿದ್ದಾರೆ. ಚುನಾವಣೆಗೆ ಸಿದ್ಧತೆ ನಡೆಸಿದ್ದು, ನಿಶ್ಚಿತವಾಗಿಯೂ ಮತ್ತೆ ಇಲ್ಲಿ ಗೆಲುವು ಸಾಧಿಸುವೆ.

ಬಿ.ಕೆ.ಸಂಗಮೇಶ್ವರ, ಭದ್ರಾವತಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.