ವಿಜಯಪುರ: ಅಳೆದು, ತೂಗಿ ಕೊನೆಗೂ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಏಪ್ರಿಲ್ 9 ಅಥವಾ 10ರಂದು ಘೋಷಣೆಯಾಗುವ ನಿರೀಕ್ಷೆ ಇದೆ. ಟಿಕೆಟ್ ಆಕಾಂಕ್ಷಿಗಳು, ಮುಖಂಡರು ಸೇರಿದಂತೆ ವಿರೋಧ ಪಕ್ಷದವರ ಚಿತ್ತವೂ ಇದೀಗ ಬಿಜೆಪಿ ಅಭ್ಯರ್ಥಿಗಳ ಪಟ್ಟಯತ್ತ ನೆಟ್ಟಿದೆ.
ಹೇಗಾದರೂ ಮಾಡಿ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಹರಸಾಹಸಕ್ಕೆ ಬಿದ್ದಿರುವ ಬಿಜೆಪಿಯ ಕೇಂದ್ರ ವರಿಷ್ಠರು ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಳೆದ ಆರು ತಿಂಗಳಲ್ಲಿ ಎರಡು ಬಾರಿ ಸಮೀಕ್ಷೆ ನಡೆಸಿದ್ದಾರೆ. ಅಲ್ಲದೇ, ಬಿಜೆಪಿ ಘಟಕ, ಸಂಘ ಪರಿವಾರ ಕೂಡ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸರ್ವೆ ನಡೆಸಿದೆ. ಜೊತೆಗೆ ಯಾವ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿ ಮಾಡಬೇಕು ಎಂದು ಪಕ್ಷದ ಪದಾಧಿಕಾರಿಗಳು, ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದೆ. ಗೌಪ್ಯ ಮತದಾನವನ್ನು ಮಾಡಿಸಿದೆ.
ಕಾಂಗ್ರೆಸ್, ಜೆಡಿಎಸ್ ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಜಾತಿ ಲೆಕ್ಕಾಚಾರ, ಎದುರಾಳಿಯ ಸಾಮಾರ್ಥ್ಯವನ್ನು ಪರಿಗಣಿಸಿ ಎಲ್ಲ ವಿಧದಲ್ಲೂ ಸರ್ವ ಸಮರ್ಥರನ್ನು ಕಣಕ್ಕಿಳಿಸಲಿದೆ ಎಂದು ನಿರೀಕ್ಷೆ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮುದ್ದೇಬಿಹಾಳ ಕ್ಷೇತ್ರಕ್ಕೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಸಿಂದಗಿ ಕ್ಷೇತ್ರಕ್ಕೆ ರಮೇಶ ಭೂಸನೂರ, ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಸೋಮನಗೌಡ ಪಾಟೀಲ ಸಾಸನೂರ, ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಗೋಪಾಲ ಕಾರಜೋಳ ಹೆಸರು ಬಹುತೇಕ ಅಂತಿಮವಾಗಿದೆ ಎಂದು ಬಿಜೆಪಿಯ ಮೂಲಗಳು ಖಚಿತ ಪಡಿಸಿವೆ.
ವಿಜಯಪುರ ನಗರ ಕ್ಷೇತ್ರಕ್ಕೆ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಸವನ ಬಾಗೇವಾಡಿ ಕ್ಷೇತ್ರಕ್ಕೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮತ್ತು ಅಪ್ಪುಗೌಡ ಪಾಟೀಲ ಮನಗೂಳಿ, ಬಬಲೇಶ್ವರ ಕ್ಷೇತ್ರಕ್ಕೆ ವಿಜುಗೌಡ ಪಾಟೀಲ ಮತ್ತು ಉಮೇಶ ಕೋಳಕೂರ ನಡುವೆ ಟಿಕೆಟ್‌ಗಾಗಿ ಪೈಪೋಟಿ ತೀವ್ರವಾಗಿದೆ.
ಇಂಡಿ ವಿಧಾನಸಭಾ ಕ್ಷೇತ್ರಕ್ಕೆ ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ ಮತ್ತು ರವಿಕಾಂತಗೌಡ ಪಾಟೀಲ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಯಾರ ಹೆಸರು ಅಂತಿಮವಾಗಲಿದೆ ಎಂಬುದು ಕಾದು ನೋಡಬೇಕಿದೆ.
ಗಾಣಿಗ ಸಮುದಾಯದ ಇಬ್ಬರಿಗೆ ಮಾತ್ರ ಜಿಲ್ಲೆಯಲ್ಲಿ ಟಿಕೆಟ್ ನೀಡಬೇಕು ಎಂದು ಚರ್ಚೆ ಜೋರಾಗಿದೆ. ಒಂದು ವೇಳೆ ಇಬ್ಬರಿಗೆ ಮಾತ್ರ ನೀಡುವುದು ಖಚಿತವಾದರೆ ಇಂಡಿ ಅಥವಾ ಬಾಗೇವಾಡಿಯಲ್ಲಿ ಒಬ್ಬರಿಗೆ ಟಿಕೆಟ್ ಕೈತಪ್ಪಿ, ಪಂಚಮಸಾಲಿ ಸಮಾಜದ ಪಾಲಾಗುವ ಸಾಧ್ಯತೆಯೂ ದಟ್ಟವಾಗಿದೆ.
ಬಹುತೇಕ ಟಿಕೆಟ್ ಆಕಾಂಕ್ಷಿಗಳು ರಾಜಧಾನಿ ಬೆಂಗಳೂರು, ನವದೆಹಲಿಯಲ್ಲಿ ಬೀಡು ಬಿಟ್ಟು, ವರಿಷ್ಠರ ಮೇಲೆ ಇನ್ನಿಲ್ಲದ ಒತ್ತಡ ಹೇರುವ ತಂತ್ರ ಅನುಸರಿಸಿದ್ದಾರೆ. ಭಾನುವಾರ ಸಂಜೆ ಅಥವಾ ಸೋಮವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.