ADVERTISEMENT

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ | ಚುನಾವಣಾ ಸ್ಪರ್ಧಾಕಾಂಕ್ಷಿಗಳ ಪೈಪೋಟಿ!

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಸೆಳೆಯಲು ಗಿಮಿಕ್‌

ಕುಮಾರ್ ಅಗಸನಹಳ್ಳಿ
Published 28 ಡಿಸೆಂಬರ್ 2022, 4:12 IST
Last Updated 28 ಡಿಸೆಂಬರ್ 2022, 4:12 IST
ಹೊಳೆಹೊನ್ನೂರಿನ ಸಮೀಪದ ಆನವೇರಿಯಲ್ಲಿ ಬಿಜೆಪಿಯ ಟಿಕೆಟ್‌ ಆಕಾಂಕ್ಷಿ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಬ್ಯಾನರ್ ಅಳವಡಿಸಿರುವುದು (ಎಡಚಿತ್ರ). ಅರಹತೊಳಲಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತ ಅಭ್ಯರ್ಥಿ ಮಲ್ಲಪ್ಪ ಬ್ಯಾನರ್ ಹಾಕಿರುವುದು.
ಹೊಳೆಹೊನ್ನೂರಿನ ಸಮೀಪದ ಆನವೇರಿಯಲ್ಲಿ ಬಿಜೆಪಿಯ ಟಿಕೆಟ್‌ ಆಕಾಂಕ್ಷಿ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ಬ್ಯಾನರ್ ಅಳವಡಿಸಿರುವುದು (ಎಡಚಿತ್ರ). ಅರಹತೊಳಲಿನಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತ ಅಭ್ಯರ್ಥಿ ಮಲ್ಲಪ್ಪ ಬ್ಯಾನರ್ ಹಾಕಿರುವುದು.   

ಹೊಳೆಹೊನ್ನೂರು: ವಿಧಾನಸಭೆ ಚುನಾವಣೆ ಘೋಷಣೆಯಾಗದಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಆಕಾಂಕ್ಷಿಗಳು ಈ ಬಾರಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ‘ನಾನೇ ಅಭ್ಯರ್ಥಿ’ ಎಂಬ ಫ್ಲೆಕ್ಸ್‌ಗಳನ್ನು ಹಾಕುವ ಮೂಲಕ ಜನರನ್ನು ತಲುಪಲು, ಜೊತೆಗೆ ತಮ್ಮ ‘ವರ್ಚಸ್ಸಿನ’ ಬಗ್ಗೆ ಪಕ್ಷದ ಹೈಕಮಾಂಡ್‌ ಗಮನ ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಹಾಲಿ ಶಾಸಕ ಕೆ.ಬಿ. ಅಶೋಕ್‌ ನಾಯ್ಕ ಅವರಿಗೆ ಮತ್ತೆ ಬಿಜೆಪಿಯ ಟಿಕೆಟ್‌ ಸಿಗಬಹುದು ಮಾತು ಪಕ್ಷದಲ್ಲಿ ಕೇಳಿಬರುತ್ತಿದೆ. ಆದರೆ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯವೀರಭದ್ರಪ್ಪ ಪೂಜಾರ್ ಹಾಗೂ ಧೀರಜ್ ಹೊನ್ನವಿಲೆ ಸೇರಿ ಇನ್ನೂ ಅನೇಕರು ಕ್ಷೇತ್ರದ ಸ್ಪರ್ಧಾಕಾಂಕ್ಷಿಗಳಾಗಿದ್ದು, ಅದೃಷ್ಟಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎಂಬುದು ಸದ್ಯದ ಕುತೂಹಲವಾಗಿದೆ.

ಜಿಲ್ಲಾ ಬಿಜೆಪಿ ಸೂಚನೆ ಮೇರೆಗೆ ಕೆಲವೊಂದು ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆಗೆದು ಹಾಕಿದ್ದರೂ, ಇನ್ನೂ ಕೆಲವು ಹಾಗೆಯೇ ಇವೆ.

ADVERTISEMENT

ಕಾಂಗ್ರೆಸ್‌ನಲ್ಲಿ ಅಂದಾಜು ಒಂದುಡಜನ್‌ಗೂ ಅಧಿಕ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಡಾ.ಶ್ರೀನಿವಾಸ್ ಕರಿಯಣ್ಣನವರಿಗೆ ಟಿಕೆಟ್ ಖಚಿತ ಎಂಬ ಮಾತು ಅವರ ಬೆಂಬಲಿಗರು ಹೇಳಿಕೊಳ್ಳುತ್ತಿದ್ದರೆ, ಪಲ್ಲವಿ ವಿ. ನಾರಾಯಣಸ್ವಾಮಿ, ಬಲದೇವ ಕೃಷ್ಣ, ಮಲ್ಲಪ್ಪ, ಭೀಮಪ್ಪ, ಮಧುಸೂದನ್, ರವಿಕುಮಾರ್ ಸೇರಿ ಅನೇಕರು ತಮ್ಮ ರಾಜಕೀಯ ಭವಿಷ್ಯಕ್ಕಾಗಿ ತಮ್ಮದೇ ರೀತಿಯಲ್ಲಿ ಪ್ರಚಾರದ ಜೊತೆಗೆ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿಯಿಂದ ಕೆ.ಜಿ. ಕುಮಾರಸ್ವಾಮಿ ಹಾಗೂ ವೀರಭದ್ರಪ್ಪ ಪೂಜಾರ್, ಕಾಂಗ್ರೆಸ್‌ನಿಂದ ಭೀಮಪ್ಪ, ಮಲ್ಲಪ್ಪ ಅವರು ಈಗಾಗಲೇ ಚುನಾವಣಾ ಅಕಾಡಕ್ಕೆ ಇಳಿದಿದ್ದು, ಗ್ರಾಮಾಂತರ ಕ್ಷೇತ್ರದ ಹೊಳಹೊನ್ನೂರು, ಆನವೇರಿ, ಅರಹತೊಳಲು ಕೈಮರ, ಕಲ್ಲಿಹಾಳ್ ಸರ್ಕಲ್, ಅಗರದಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಬ್ಯಾನರ್‌ಗಳನ್ನು ಹಾಕಿಸಿದ್ದಾರೆ. ಅದರಲ್ಲಿ ಹೊಸ
ವರ್ಷ, ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಜನರಿಗೆ ತಿಳಿಸುವ ಜೊತೆಗೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ‘ನಿಮ್ಮ ಆಶಿರ್ವಾದ ನಮ್ಮ ಮೇಲಿರಲಿ’ ಎಂದು ಕೋರುವ ಜೊತೆಗೆ ‘ಕ್ಷೇತ್ರದ ಆಕಾಂಕ್ಷಿ’ ಎಂದೂ ಬರೆಸಿಕೊಂಡಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಯಾರಿಗೆ ಟಿಕೆಟ್ ನೀಡಿ ಸ್ಪರ್ಧೆಗೆ ಅನುಮತಿ ನೀಡಲಿವೆ ಎಂಬುದೇ ಕಾದು ನೋಡಬೇಕಿದೆ.

****

ಕಳೆದ ಐದು ವರ್ಷಗಳಲ್ಲಿ ಕೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ.

-ಕೆ.ಬಿ. ಅಶೋಕ್‌ ನಾಯ್ಕ, ಶಾಸಕ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ

****

ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಪಕ್ಷಕ್ಕೆ ನಿಷ್ಠವಾಗಿ ದುಡಿದಿದ್ದೇನೆ. ಟಿಕೆಟ್ ನೀಡುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು.

-ಡಾ.ಶ್ರೀನಿವಾಸ್ ಕರಿಯಣ್ಣ, ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.