ADVERTISEMENT

ಶಿರಾಳಕೊಪ್ಪ | ಬಿಡುವು ನೀಡಿದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

ನವೀನ್‌ ಕುಮಾರ್‌ ಎ.ಎಂ
Published 30 ಜುಲೈ 2024, 5:43 IST
Last Updated 30 ಜುಲೈ 2024, 5:43 IST
ಶಿರಾಳಕೊಪ್ಪ ಸಮೀಪದ ಜಾವಗಟ್ಟಿಯ ಹೊಲದಲ್ಲಿ ರೈತರೊಬ್ಬರು ಸಾಂಪ್ರದಾಯಿಕ ನಾಟಿಗೆ ಹೊಲ ಸಿದ್ಧಪಡಿಸಿರುವುದು
ಶಿರಾಳಕೊಪ್ಪ ಸಮೀಪದ ಜಾವಗಟ್ಟಿಯ ಹೊಲದಲ್ಲಿ ರೈತರೊಬ್ಬರು ಸಾಂಪ್ರದಾಯಿಕ ನಾಟಿಗೆ ಹೊಲ ಸಿದ್ಧಪಡಿಸಿರುವುದು   

ಶಿರಾಳಕೊಪ್ಪ: ಎರಡು ವಾರಗಳಿಂದ ಸತತವಾಗಿ ಸುರಿಸುತ್ತಿದ್ದ ಮಳೆ ಸ್ವಲ್ಪ ಬಿಡುವು ಕೊಟ್ಟ  ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಭತ್ತದ ಸಸಿ ನೆಡುವುದು, ಅಡಿಕೆ ಅಡಿಕೆ ಆರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಲಗಳಲ್ಲಿ ರೈತ ಮಹಿಳೆಯರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. 

ಅಲ್ಲಲ್ಲಿ ಜೋಳದ ಬೆಳೆಗಳು ಜೌಗಿನಿಂದ ಕೆಂಪಾಗುತ್ತಿದ್ದು, ಇಳುವರಿ ಕುಂಠಿತವಾಗುವ ಭೀತಿ ಎದುರಾಗಿದೆ.

ADVERTISEMENT

ಕಳೆದ ವರ್ಷ ಭೀಕರ ಬರಗಾಲದಿಂದ ರೈತರು ತೋಟ ಉಳಿಸಿಕೊಳ್ಳಲು ಕಷ್ಟಪಟ್ಟಿದ್ದರು. ಈ ಬಾರಿ ತಾಳಗುಂದದ ಪ್ರಣವೇಶ್ವರ ಕೆರೆ, ಬಳ್ಳಿಗಾವಿಯ ಜಿಡ್ಡಿಕೆರೆ, ಬಸವಂದಿಹಳ್ಳಿ ಕೆರೆ, ಹಿರೆಜಂಬೂರು, ಮಳೂರು, ತಡಗಣಿ, ಕೌಲಿ, ತೊಗರ್ಸಿ, ಕೊಳಗಿ, ಯಳಗೆರಿ, ನರಸಾಪುರ, ಶಂಕ್ರಿಕೊಪ್ಪ, ಕಣಸೋಗಿ ಸೇರಿದಂತೆ ತಾಳಗುಂದ ಹಾಗೂ ಉಡುಗಣಿ ಹೋಬಳಿಯ ಎಲ್ಲಾ ಕೆರೆಗಳು ಭರ್ತಿಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

‘ಬರಗಾಲದಿಂದ ಬದುಕು ಕಳೆದುಕೊಂಡಿದ್ದ ರೈತರಿಗೆ ಈ ಮಳೆಯು ಮತ್ತೊಂದು ಜನ್ಮ ನೀಡಿದೆ’ ಎಂದು ಹಿರೇಜಂಬೂರಿನ ರೈತ ಯಶವಂತ್‌ ಕುಮಾರ್ ಸಂತಸ ಹಂಚಿಕೊಂಡರು.

‘ಎಡೆಬಿಡದೆ ಸುರಿಯುತ್ತಿದ್ದ ಮಳೆ ಕಡಿಮೆ ಆಗಿರುವ ಹಿನ್ನಲೆಯಲ್ಲಿ ರೈತರು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅಡಿಕೆಗೆ ಕೊಳೆರೋಗದ ಲಕ್ಷಣಗಳು ಕಾಣುತ್ತಿದ್ದು, ಔಷಧ ಸಿಂಪಡಿಸಲಾಗುತ್ತಿದೆ’ ಎಂದು ಕೃಷಿಕ ಮಳೂರು ಸುರೇಶ್‌ ಗೌಡ್ರು ಹೇಳಿದರು.

‘ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ಆದರೂ ರೈತರು ಬೆಳೆವಿಮೆ ಮಾಡಿಸಬೇಕು. ಅತಿವೃಷ್ಟಿಯಿಂದ ಹಾನಿಯಾದರೆ ವಿಮೆ ಪರಿಹಾರ ಸಿಗಲಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್‌ ಕುಮಾರ್‌ ಹರ್ತಿ ಸಲಹೆ ನೀಡಿದರು.

ಶಿರಾಳಕೊಪ್ಪದ ಜಮೀನಿನಲ್ಲಿ ನಾಟಿ ಮಾಡುತ್ತಿರುವ ರೈತ ಮಹಿಳೆಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.