ತೀರ್ಥಹಳ್ಳಿ: ಜೀವವೈವಿಧ್ಯದ ತಾಣ ಪಶ್ಚಿಮ ಘಟ್ಟದ ಹಸಿರು ತೋರಣ ಆಗುಂಬೆಯಲ್ಲೀಗ ಮಳೆಯ ಹಬ್ಬ. ರಮ್ಯ ಮನೋಹರವಾಗಿ ಪ್ರಯಾಣಿಕರನ್ನು ಕೈಬೀಸಿ ಕರೆಯುವ ಮಳೆಕಾಡು ಸಾವಿರಾರು ಜೀವ ರಾಶಿಗಳನ್ನು ಸಂತೈಸುತ್ತಿದೆ. ಅಲ್ಲಿನ ಚಳಿ, ಮಳೆಯ ನಡುವೆ ಒಂದು ಕಪ್ ಕಾಫಿ ಸಿಕ್ರೆ ಅದಕ್ಕಿಂತ ಸಂತೋಷ ಬೇರೇನೂ ಇಲ್ಲ.
ತೀರ್ಥಹಳ್ಳಿಯಿಂದ 32 ಕಿಲೋ ಮೀಟರ್ ದೂರದಲ್ಲಿ ದಕ್ಷಿಣ ಭಾರತದ ಚಿರಾಪುಂಜಿ ಖ್ಯಾತಿಯ ಆಗುಂಬೆಯಲ್ಲಿ ಈಗ ಮಳೆಯದ್ದೇ ಹಾಡುಪಾಡು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸೋಮೇಶ್ವರ, ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯ 18 ಸುತ್ತಿನ ಘಾಟಿಯ 12 ಕಿ.ಮೀ ಹಾದಿಯಲ್ಲಿ ಈಗ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಜಗತ್ತಿನ 18 ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಆಗುಂಬೆಯೂ ಸ್ಥಾನ ಗಿಟ್ಟಿಸಿಕೊಂಡಿದ್ದು, ಇದೀಗ ಮಳೆಯಿಂದಾಗಿ ಇಡೀ ಆಗುಂಬೆ ಮುಸುಕಿದ ಮಂಜಿನ ನಡುವೆ ತನ್ನತ್ತ ಆಕರ್ಷಿಸುತ್ತಿದೆ.
ಒಂದೇ ಸಮನೆ ಭಾರವಾದ ಮಳೆಯ ಹನಿಗಳು ಧರೆಗಿಳಿಯುತ್ತದೆ. ಅದನ್ನು ನೋಡುವ ಕಾತುರ, ಆತುರದಿಂದ ಕೊಡೆ ತೆಗೆದುಕೊಂಡು ಹೋದರೆ ಪ್ರಯೋಜನವಿಲ್ಲ. ಎಳೆಯುವ ಗಾಳಿಯಲ್ಲಿ ಛತ್ರಿ ಮಡಚಿ ಹಾಕಿ ಅದು ಇನ್ನೆಂದೂ ಉಪಯೋಗಕ್ಕೆ ಬಾರದಂತೆ ಮಳೆ, ಗಾಳಿಯೂ ಚಿಕಿತ್ಸೆ ನೀಡುತ್ತವೆ. ಅಲ್ಲಲ್ಲಿ ಮಳೆಯಿಂದ ತೊಯ್ದು ನಡುಗುವ ಮಂಗ, ಮುಸಿಯ, ಸಿಂಗಳೀಕ ಕಾಡಿಗೆ ಸ್ವಾಗತ ಕೋರುವ ಬಗೆಯಂತು ಕಣ್ಣಿಗೆ ಹಬ್ಬ.
ಜಲಪಾತಗಳ ರಸ್ತೆ: ಬೃಹತ್ ಮರಗಳ ನಡುವೆ ಕಡಿದಾದ ಕಪ್ಪು ಡಾಂಬಾರು ದಾರಿಯಲ್ಲಿ ಸ್ಟೇರಿಂಗ್ ವ್ಹೀಲ್ ಹಿಡಿಯುವುದೇ ಖುಷಿ. ಈಗ ಸಾಮಾನ್ಯವಾಗಿ ರಸ್ತೆಗಳೆಲ್ಲ ಜಲಪಾತದಂತೆ ಗೋಚರಿಸುತ್ತಿವೆ. ಏಕಾಂಗಿ ಬೈಕ್ ರೈಡ್ ಕೂಡ ಅಹ್ಲಾದಕರ. ಘಾಟಿ ರಸ್ತೆ ಇಳಿಯುವಾಗ ಇಕ್ಕೆಲಗಳ ಬಂಡೆಗಳ ಮೇಲೆ ಸೃಷ್ಟಿಯಾದ 50ಕ್ಕೂ ಹೆಚ್ಚು ಜಲಪಾತ ಗೋಚರಿಸುತ್ತವೆ.
ಸ್ವಾಮಿ… ಬಿಸಿ ಏನಿದೆ..?: ಘಾಟಿಯ ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಹತ್ತಾರು ಹೋಟೆಲ್ ಉದ್ಯಮಕ್ಕೆ ಆಶ್ರಯ ತಾಣ. ಮಳೆಯ ಸೊಬಗು ನೋಡುತ್ತಿದ್ದಂತೆ ಮೈಮರೆಸುವ ಚಳಿ ಘಾಟಿಯಿಂದ ದೂರಾಗುತ್ತದ್ದಂತೆ ನಡುಕ ಹೆಚ್ಚಿಸುತ್ತದೆ. ತಕ್ಷಣ ವಾಹನದ ಬ್ರೇಕ್ ಹಾಕಿ ಹೋಟೆಲ್ ಹುಡುಕಾಟ ಇಲ್ಲಿ ಯಾವತ್ತೂ ವಾಡಿಕೆ. ಅದರಲ್ಲೂ ಮಳೆಗಾಲ, ಚಳಿಗಾಲಕ್ಕೆ ಖಂಡಿತವಾಗಿಯೂ ಬಿಸಿ ಸಾಲುವುದಿಲ್ಲ. ಹೋಟೆಲ್ ಮಾಣಿ ಹತ್ತಿರ “ಸ್ವಾಮಿ… ಬಹಳ ಚಳಿ. ಸ್ವಲ್ಪ ಬಿಸಿ ಏನಿದೆ?. ಬೇಗ ಕೊಡಿ” ಎಂಬ ಧ್ವನಿ ಎಲ್ಲಾ ಟೇಬಲ್‌ನಲ್ಲೂ ಮಾಮೂಲಿ.
ಘಾಟಿ ರಕ್ಷಕ ಮಹಾಗಣಪತಿ: ಆಗುಂಬೆ ಘಾಟಿ ಪ್ರಯಾಣಿಕರ ರಕ್ಷಕನಾಗಿ ಹೆಬ್ರಿ ತಾಲ್ಲೂಕಿನ ಸೋಮೇಶ್ವರ ಗ್ರಾಮದ ನಾಲ್ಪಾಡು ಮಹಾಗಣಪತಿ ದೇವಸ್ಥಾನ ಇದೆ. ಕೆಳಗಿನಿಂದ ಆಗುಂಬೆಗೆ ಬರುವ ಪ್ರತಿಯೊಬ್ಬರೂ ಗಣೇಶನ ಆಶೀರ್ವಾದ, ಪ್ರಸಾದ ಸ್ವೀಕರಿಸಿಯೇ ಘಾಟಿ ಏರುವುದು ಪ್ರತೀತಿ.
ಘಾಟಿಗೆ ಹಾನಿ: ಪರಿಸರ ಸೂಕ್ಷ್ಮ ಪ್ರದೇಶ ಆಗುಂಬೆ ಘಾಟಿ ತೀರ ಕಡಿದಾದ ರಸ್ತೆ ಹೊಂದಿದೆ. ಅತೀ ಭಾರದ ವಾಹನಗಳನ್ನು ನಿಷೇಧಿಸಿದ್ದರೂ ಐಶರ್, ಸಣ್ಣ ಪ್ರಮಾಣದ ಲಾರಿಗಳ ಸಂಚಾರಕ್ಕೆ ಅವಕಾಶ ಇದೆ. ಹೀಗಾಗಿ ಎಷ್ಟು ಸಾಧ್ಯವೇ ಭಾರ ನಿಯಂತ್ರಿಸುವ ಕ್ರಮ ನಡೆಯುತ್ತಿದೆ. ವಾಹನ ದಟ್ಟಣೆ, ಜೊತೆಗೆ ಒಂದೇ ಸಮನೆ ಸುರಿಯುವ ಮಳೆಯಿಂದಲೂ ಘಾಟಿಗೆ ತೊಂದರೆಯುಂಟಾಗುತ್ತಿದೆ.
ಕಾಲಿಗಂಟುವ ಇಂಬಳ: ಮಳೆಗಾಲ ಆರಂಭವಾಗುತ್ತಿದ್ದಂತೆ ಇಂಬಳಗಳು ಕಚ್ಚಿ ರಕ್ತ ಹೀರುವ ಬಗೆ ಮಲೆನಾಡಿಗರಿಗೆ ಸಾಮಾನ್ಯ. ಈ ಇಂಬಳಗಳ ಸಂತತಿ ಪ್ರಾಣಿಗಳ ದೇಹದ ಮೇಲೆ ಸಲೀಸಾಗಿ ಹರಿಯುತ್ತವೆ. ತಿಳಿಯದಂತೆ ಕಚ್ಚುವ ಇಂಬಳಗಳು ಅಂದಾಜು 2 ರಿಂದ 10 ಮಿ.ಗ್ರಾಂ. ವರೆಗೂ ರಕ್ತ ಹೀರುತ್ತವೆ. ಇವುಗಳು ಹೀರಿ ಬಿಟ್ಟಷ್ಟು ರಕ್ತ ದೇಹದಿಂದ ಇಳಿಯುವತನಕ ರಕ್ತದ ಗಾಯ ಮುಚ್ಚಿಕೊಳ್ಳದು. ಕಾಡಿನೊಳಗೆ ಒಮ್ಮೆ ಹೋದರೆ ಅಂದಾಜು 10 ರಿಂದ 50 ಇಂಬಳಗಳಿಂದ ಕಚ್ಚಿಸಿಕೊಳ್ಳದೆ ಹೊರಬರುವುದು ಬಹುದೊಡ್ಡ ಸವಾಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.