ADVERTISEMENT

ಮಲೆನಾಡಿನಲ್ಲಿ ಮಳೆಯ ಆರ್ಭಟ, ನದಿಗಳ ಭೋರ್ಗರೆತ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 4:11 IST
Last Updated 16 ಜುಲೈ 2024, 4:11 IST
<div class="paragraphs"><p>ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆ ಬಳಿ ಮಂಟಪ ಮುಳುಗಡೆ ಆಗಿದೆ</p></div>

ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸೇತುವೆ ಬಳಿ ಮಂಟಪ ಮುಳುಗಡೆ ಆಗಿದೆ

   

ಶಿವಮೊಗ್ಗ: ರಾತ್ರಿಯಿಡೀ ಸುರಿದ ಕುಂಭದ್ರೋಣ ಮಳೆಗೆ ಮಲೆನಾಡಿನಲ್ಲಿ ತುಂಗಾ, ಭದ್ರಾ, ಶರಾವತಿ, ವರದಾ ಹಾಗೂ ಕುಮದ್ವತಿ ನದಿಗಳು ಉಕ್ಕಿ ಹರಿಯುತ್ತಿವೆ. ಜಲಾಶಯಗಳಿಗೆ ಈ ಮುಂಗಾರು ಹಂಗಾಮಿನಲ್ಲಿ ದಾಖಲೆ ಪ್ರಮಾಣದ ನೀರು ಹರಿದುಬರುತ್ತಿದೆ.

ತುಂಗಾ, ಪ್ರವಾಹ ಭೀತಿ: ಗಾಜನೂರಿನ ತುಂಗಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಆದರೆ ಮಂಗಳವಾರ ಜಲಾಶಯಕ್ಕೆ 61,757 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶಿವಮೊಗ್ಗ ನಗರದಲ್ಲಿನ ನದಿ ದಂಡೆಯ ಮಂಟಪ ಸಂಪೂರ್ಣ ಮುಳುಗಡೆ ಆಗಿದೆ. ತುಂಗಾ ಜಲಾಶಯದ ಆಡಳಿತ ಕೂಡ ನದಿ ದಂಡೆಯ‌ ನಿವಾಸಿಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ. ತುಂಗಾ ನದಿಯಲ್ಲಿ ಕ್ಷಣ ಕ್ಷಣಕ್ಕೂ ಏರುತ್ತಿರುವ ನೀರಿನ ಪ್ರಮಾಣ ಹಾಗೂ ಆರ್ಭಟ ವೀಕ್ಷಿಸಲು ಶಿವಮೊಗ್ಗದ ಜನರು ನದಿ ದಂಡೆಯಲ್ಲಿ ಜಮಾಯಿಸುತ್ತಿದ್ದಾರೆ.

ADVERTISEMENT

ಶರಾವತಿ ನದಿಯೂ ಮೈದುಂಬಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ದಾಖಲೆಯ 77,911 ಕ್ಯುಸೆಕ್ ಒಳಹರಿವು ಇದ್ದು, 24 ಗಂಟೆಗಳಲ್ಲಿ 35 ಸಾವಿರ ಕ್ಯುಸೆಕ್‌ನಷ್ಟು ನೀರಿನ ಪ್ರಮಾಣ ಏರಿಕೆಯಾಗಿದೆ.

ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಶರಾವತಿ ಜಲಾನಯನ ಪ್ರದೇಶದ ವ್ಯಾಪ್ತಿಯ ಹೊಸನಗರ ತಾಲ್ಲೂಕಿನ ಮಾಸ್ತಿ ಕಟ್ಟೆಯಲ್ಲಿ 24.70 ಸೆಂ.ಮೀ ಹಾಗೂ ಹುಲಿಕಲ್‌ನಲ್ಲಿ 24.50 ಸೆಂ.ಮೀ ಮಳೆ ದಾಖಲಾಗಿದೆ.

ಭದ್ರಾ, ಒಂದೇ ದಿನ 3.4 ಅಡಿ ನೀರು ಹೆಚ್ಚಳ: ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ 27,839 ಕ್ಯುಸೆಕ್ ನೀರು ಹರಿದುಬರುತ್ತಿದೆ. ಇದರಿಂದ ಜಲಾಶಯದಲ್ಲಿ ನೀರಿನ‌ಮಟ್ಟ 144.7 ಅಡಿಗೆ ಏರಿಕೆ ಆಗಿದೆ. ಸೋಮವಾರ ಜಲಾಶಯದಲ್ಲಿ 141.3 ಅಡಿ ನೀರು ಇತ್ತು.

ಸಾಗರ ತಾಲ್ಲೂಕಿನಲ್ಲಿ ವರದಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.