ಸಾಗರ: ಸಾಂಸ್ಕೃತಿಕ ಗುಲಾಮಗಿರಿಯನ್ನು ನಿರಾಕರಿಸಿ ಸ್ವಂತಿಕೆಯ ಮನೋಧರ್ಮವನ್ನು ಆಳವಾಗಿ ಬಿತ್ತಿರುವುದು ಕನ್ನಡ ಭಾಷೆ, ಸಂಸ್ಕೃತಿಯ ಹೆಗ್ಗಳಿಕೆಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಬಿ.ಸಿ.ದಾದಾಪೀರ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ಭಾಷೆ: ವರ್ತಮಾನದ ಸವಾಲುಗಳು’ ಕುರಿತು ಉಪನ್ಯಾಸ ನೀಡಿದರು.
‘ಯಾವುದೇ ಒಂದು ಭಾಷೆ ವಿಚಾರದ ಅರಿವಿನ ಭಾಷೆಯಾಗಿ ಕಲಿಯುವ ಮನಸ್ಥಿತಿ ಇದ್ದಾಗ ಮಾತ್ರ ಆ ಭಾಷೆಯ ಭವಿಷ್ಯ ಉಜ್ವಲವಾಗಿರುತ್ತದೆ. ಕೇವಲ ಅಭಿಮಾನದ ನೆಲೆಯಿಂದ ಭಾಷೆ ಉಳಿಯಲಾರದು. ಅಭಿಮಾನಕ್ಕೆ ತಿಳಿವಳಿಕೆಯ ನೆಲೆಗಟ್ಟು ಪ್ರಧಾನವಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
‘ಇನ್ನೊಂದು ಭಾಷೆ, ಧರ್ಮ, ಪರಿಸರ, ಸಂಸ್ಕೃತಿಯನ್ನು ನಮ್ಮ ಮಾತೃಭಾಷೆಯ ಮೂಲಕ ಅರ್ಥೈಸುವ, ವಿಶ್ಲೇಷಿಸುವ, ಪರಿಭಾವಿಸುವ ಪರಿಪಾಠವಿದ್ದಾಗ ಮಾತ್ರ ಭಾಷೆ ಬೆಳಕಿನಂತೆ ಪ್ರಜ್ವಲಿಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಭಾಷೆ ಕೇವಲ ಸಂವಹನಕ್ಕಾಗಿ ಎಂಬ ಮನೋಧರ್ಮ ರೂಢಿಗತವಾಗುತ್ತಿದ್ದು ಅದರ ಇತಿಹಾಸ, ಸೌಂದರ್ಯ, ಸತ್ವ, ಧ್ವನಿಪೂರ್ಣತೆ ನಗಣ್ಯವಾಗುತ್ತಿರುವುದು ಭಾಷೆಯ ಬೆಳವಣಿಗೆ ಕುಂಠಿತವಾಗಲು ಕಾರಣವಾಗಿದೆ’ ಎಂದರು.
‘ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕು ಎಂಬುದನ್ನು ಅವರ ಪೋಷಕರೇ ನಿರ್ಧರಿಸಬೇಕೇ ಹೊರತು ಸರ್ಕಾರವಲ್ಲ’ ಎಂದು ನ್ಯಾಯಾಲಯ ನೀಡಿರುವ ತೀರ್ಪು ಕನ್ನಡ ಭಾಷೆಯ ಬೆಳವಣಿಗೆಗೆ ಹಿನ್ನಡೆಯಾಗಿದೆ. ಕನ್ನಡದಲ್ಲಿ ಓದಿದರೆ ಜಗತ್ತಿಗೆ ಸಲ್ಲುವುದಿಲ್ಲ ಎಂಬ ತಪ್ಪು ಸಂದೇಶವನ್ನು ವ್ಯಾಪಕವಾಗಿ ಹರಡುತ್ತಿರುವುದು ಕೂಡ ಕನ್ನಡ ಭಾಷೆಗೆ ಮಾರಕವಾಗುತ್ತಿದೆ’ ಎಂದು ತಿಳಿಸಿದರು.
‘ಪ್ರಸ್ತುತ ಸಂದರ್ಭದ ಸಾಮಾಜಿಕ ಸ್ಥಿತಿಗತಿ’ ಕುರಿತು ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಎ.ಬಿ.ರಾಮಚಂದ್ರಪ್ಪ, ಸನಾತನವನ್ನು ನಿರಾಕರಿಸಿ ಸಮಾನತೆಯ ಪರಿಕಲ್ಪನೆಯನ್ನು ಸಮಾಜದಲ್ಲಿ ಬಿತ್ತಿರುವುದು ನಮ್ಮ ಸಂವಿಧಾನದ ಹೆಚ್ಚುಗಾರಿಕೆಯಾಗಿದೆ. ಆದರೆ, ಸಾಂವಿಧಾನಿಕವಾಗಿ ನಮಗೆ ಲಭ್ಯವಿರುವ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕೇಳುವುದೇ ಅಪರಾಧ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ’ ಎಂದರು.
‘ಜಾತಿ, ಧರ್ಮ, ಬಣ್ಣ, ಲಿಂಗ, ಉದ್ಯೋಗದ ಆಧಾರದ ಮೇಲೆ ಪ್ರತಿನಿತ್ಯ ಅಪಮಾನ, ನಿಂದನೆಗಳು ನಡೆಯುತ್ತಲೇ ಇವೆ. ಇಂತಹ ಅಪಮಾನಗಳನ್ನು ದ್ವೇಷಕ್ಕೆ ಬಳಸದೆ ಸವಾಲಾಗಿ ಸ್ವೀಕರಿಸಿ. ಅಂಬೇಡ್ಕರ್ ಮಾದರಿಯಲ್ಲಿ ಸಾಧನೆಗೆ ಸ್ಫೂರ್ತಿಯಾಗಿ ಬಳಸಿಕೊಳ್ಳಬೇಕು’ ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಜಿ.ಸಣ್ಣಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸಂತೋಷ್ ಸದ್ಗುರು, ಮಮತಾ ವಿ.ಹೆಗಡೆ, ಗಿರೀಶ್ ಪಟೇಲ್, ಪ್ರೇರಣಾ ಇದ್ದರು. ಹೇಮಾವತಿ ಪ್ರಾರ್ಥಿಸಿದರು. ಕುಂಸಿ ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.