ಆನಂದಪುರ: ಯಾವುದೇ ಸಭೆ– ಸಮಾರಂಭಗಳು ನಡೆದರೆ ಅಲ್ಲೆಲ್ಲ ನೃತ್ಯ, ಸಂಗೀತಕ್ಕೆ ಸಿಗುವಂತೆಯೇ ಡೊಳ್ಳಿಗೂ ಆದ್ಯತೆ ದೊರೆಯುವಂತೆ ಮಾಡುವಲ್ಲಿ ಶ್ರಮಿಸಿದ ಜಾನಪದ ಪ್ರತಿಭೆಯನ್ನು ಪ್ರಶಸ್ತಿ ಅರಸಿ ಬಂದಿದೆ.
ಹಳ್ಳಿಯ ಡೊಳ್ಳು ಕಲೆಯ ಕಂಪನ್ನು ದೇಶ– ವಿದೇಶಗಳಿಗೆ ಇವರು ಪಸರಿಸಿದ ಫಲವಾಗಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕಣ್ಣೂರು ಗ್ರಾಮದ ಅಂತರಾಷ್ಟ್ರೀಯ ಕಲಾವಿದ ಟೀಕಪ್ಪ ಕಣ್ಣೂರು ಅವರಿಗೆ 2023ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಕಣ್ಣೂರು ಗ್ರಾಮದ ನಿಂಗಪ್ಪ ಹಾಗೂ ಹುಚ್ಚಮ್ಮ ದಂಪತಿ ಪುತ್ರ ಟೀಕಪ್ಪ ಕಣ್ಣೂರು 7 ನೇ ತರಗತಿಯವರೆಗೆ ಓದಿದರೂ ದೇಶ ವಿದೇಶಗಳನ್ನು ಸುತ್ತಿ ಹಳ್ಳಿಯ ಸೊಗಡನ್ನು ವಿಸ್ತರಿಸಿದ್ದಾರೆ. ಕೃಷಿಯನ್ನು ಅವಲಂಬಿಸಿರುವ ಇವರು ಚಿಕ್ಕ ವಯಸ್ಸಿನಲ್ಲಿಯೇ ಡೊಳ್ಳು ಕುಣಿತಕ್ಕೆ ಮಾರು ಹೋಗಿದ್ದರು. ಡೊಳ್ಳಿನ ಗುರುಗಳಾದ ವಡ್ಡರ ರಂಗಪ್ಪ ಅವರಿಂದ ತರಬೇತಿ ಪಡೆದು 17ನೇ ವಯಸ್ಸಿನಲ್ಲಿಯೇ ಜಾನಪದ ಕಲಾವಿದರ ತಂಡ ಕಟ್ಟಿ ದೇಶ– ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ತಮ್ಮ ಗ್ರಾಮದಿಂದ ಹಿಡಿದು ತಾಲ್ಲೂಕು, ಜಿಲ್ಲೆ ದೇಶದಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಡೊಳ್ಳಿನ ಪ್ರದರ್ಶನ ನೀಡಿದ್ದಾರೆ. 1987ರಲ್ಲಿ ರಷ್ಯಾದಲ್ಲಿ ನಡೆದ ಭಾರತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೊದಲ ಬಾರಿಗೆ ಮನೆ ಬಿಟ್ಟು 3 ತಿಂಗಳ ಕಾಲ ರಷ್ಯಾದ 7 ಮಹಾನಗರಗಳಲ್ಲಿ ನೂರಾರು ಪ್ರದರ್ಶನಗಳನ್ನು ನೀಡಿದ ಹೆಗ್ಗಳಿಕೆ ಇವರದ್ದಾಗಿದೆ.
ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ 2000ರಲ್ಲಿ ಕನ್ನಡ ಸಮ್ಮೇಳನ, ನಂತರ ಅಮೆರಿಕದಲ್ಲಿ 2000ರಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ, 2016ರಲ್ಲಿ ಅಂಡಮಾನ್ ನಿಕೋಬಾರ್ ದ್ವೀಪ ಉತ್ಸವದಲ್ಲಿ ಹಲವು ಪ್ರದರ್ಶನ ನೀಡಿದ್ದಾರೆ. 2017ರಲ್ಲಿ ಭಾರತ ಸರ್ಕಾರದಿಂದ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಜಾಸ್ಕೋ ಮೇಳದಲ್ಲಿ ಪ್ರದರ್ಶನ ಸೇರಿದಂತೆ ಅನೇಕ ದೇಶಗಳಲ್ಲಿ ಡೊಳ್ಳಿನ ಕಲೆ ಪಸರಿಸಿದ್ದಾರೆ.
ಇದಲ್ಲದೆ ಶಿರಸಿಯಲ್ಲಿ ನಡೆದ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ, ದೆಹಲಿಯ ರಾಷ್ಟ್ರೀಯ ಕ್ರೀಡಾ ಪ್ರಾರಂಭೋತ್ಸವ, ಕರ್ನಾಟಕ ಉತ್ಸವ, ರಾಷ್ಟ್ರೀಯ ಪ್ರವಾಸೋದ್ಯಮ ಉತ್ಸವ, ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸಮ್ಮೇಳನ, ಕರ್ನಾಟಕ ಜಾನಪದ ಉತ್ಸವ, ರಾಷ್ಟ್ರೀಯ ಗಿರಿಜನ ಉತ್ಸವ, ರಾಷ್ಟ್ರೀಯ ಭಾವೈಕತೆ ಸಮ್ಮೇಳನ, ರಾಷ್ಟ್ರೀಯ ಬೇಸಿಗೆ ಉತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ಸೇರಿದಂತೆ ದೇಶದಲ್ಲಿ 100ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ.
ತರಬೇತುದಾರರಾಗಿ ಟೀಕಪ್ಪ:
ಡೊಳ್ಳಿನ ಕಲೆ ಮುಂದಿನ ಪೀಳಿಗೆಗ ತಲುಪಬೇಕು ಎಂಬ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಪರಿಷತ್‌ಗಳ ಸಹಯೋಗದೊಂದಿಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತರಬೇತಿ ನೀಡುವ ಮೂಲಕ ಕಲೆ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಟೀಕಪ್ಪ. ಅಲ್ಲದೆ, ತಮ್ಮ ಗ್ರಾಮದಲ್ಲಿ ಕಣ್ಣೇಶ್ವರ ಜಾನಪದ ಕಲಾ ಸಂಘದ ಮೂಲಕ ಅನೇಕ ಪ್ರತಿಭೆಗಳನ್ನು ಪೋಷಿಸುತ್ತಿದ್ದಾರೆ.
‘ಪ್ರಶಸ್ತಿ ಲಭಿಸಿರುವುದು ಸಂತಸದ ವಿಷಯ. ಡೊಳ್ಳಿನ ಕಲೆಯನ್ನು ಯುವ ಪೀಳಿಗೆಯು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದಲೇ ತರಬೇತಿ ನೀಡುತ್ತಿದ್ದೇನೆ’ ಎಂದು ಟೀಕಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.