ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿಗೆ ಎನ್.ಯು ಆಸ್ಪತ್ರೆಯಲ್ಲಿ ಅಪರೂಪದ ಕಿಡ್ನಿ ಕಸಿ ಚಿಕಿತ್ಸೆಯ ಯಶಸ್ವಿ ಪ್ರಯೋಗವಾಗಿದೆ ಎಂದು ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರದೀಪ್ ಹೇಳಿದರು.
‘ಇದುವರೆಗೂ ಮೂತ್ರಪಿಂಡ ಕಸಿ ಒಂದೇ ರಕ್ತದ ಗುಂಪುಗಳಲ್ಲಿ ಮಾತ್ರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ರಕ್ತದ ಗುಂಪುಗಳು ಹೊಂದಾಣಿಕೆಯಾಗದಿದ್ದರೂ ವಿಶೇಷ ಚಿಕಿತ್ಸೆ ಮೂಲಕ ಮೂತ್ರಪಿಂಡ ಕಸಿ ಪ್ರಯೋಗ ಮಾಡಲಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೀರೂರಿನ ಗಿರೀಶ್ ಅವರಿಗೆ ಮೂತ್ರಪಿಂಡ ಕಸಿ ಆಗಬೇಕಿತ್ತು. ಆದರೆ, ದಾನಿಗಳು ಸಿಕ್ಕಿರಲಿಲ್ಲ. ಅವರ ಪತ್ನಿಯೇ ಕಿಡ್ನಿ ದಾನ ಮಾಡಲು ಸಿದ್ಧರಾಗಿದ್ದರು. ರೋಗಿಯ ರಕ್ತ ‘ಬಿ’ ಪಾಸಿಟಿವ್ ಇತ್ತು. ಪತ್ನಿಯ ರಕ್ತದ ಗುಂಪು ‘ಎ’ ಪಾಸಿಟಿವ್ ಇತ್ತು. ಹಾಗಾಗಿ ಕಸಿ ಮಾಡುವುದು ಕಷ್ಟವಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಅವರು ದಾಖಲಾದಾಗ ಮೂತ್ರಪಿಂಡ ರಕ್ಷಿಸುವ ಔಷಧಗಳ ಮೂಲಕ (ಪ್ಲಾಸ್ಮಾಫೆರೆಸಿಸ್ ವಿಧಾನ) ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಅವರ ಪತ್ನಿ ಹರ್ಷಿತಾ ಕೂಡ ಕಿಡ್ನಿ ದಾನ ಮಾಡಿದ್ದರೂ ಆರೋಗ್ಯವಾಗಿದ್ದಾರೆ ಎಂದರು.
ಡಾ.ಪ್ರವೀಣ್ ಮಾಳವಧೆ, ಡಾ.ಕಾರ್ತಿಕ್, ಪಿಆರ್‌ಒ ಶ್ರುತಿ ರಾವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.