ಶಿವಮೊಗ್ಗ: ಭದ್ರಾವತಿಯ ರಾಜಕೀಯ ಇತಿಹಾಸದಲ್ಲಿ ಒಂದೂ ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗದ ಬಿಜೆಪಿ ಈಗ ನೆಲೆ ಕಂಡುಕೊಳ್ಳಲು ಕೋಮು ಭಾವನೆಗಳನ್ನು ಪ್ರಚೋದಿಸುತ್ತಿದೆ ಎಂದುಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.
ಜೆಡಿಎಸ್, ಕಾಂಗ್ರೆಸ್, ಪಕ್ಷೇತರರ ಮಧ್ಯೆ ಮೊದಲಿನಿಂದಲೂ ಸ್ಪರ್ಧೆ ಇದೆ. ಅಲ್ಲಿ ಬಿಜೆಪಿ ಹೆಸರೇ ಇಲ್ಲ. ಭದ್ರಾವತಿಯ ಚುನಾವಣೆಯ ಇತಿಹಾಸದಲ್ಲಿ ಬಿಜೆಪಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಶಾಸಕ ಸ್ಥಾನ ಗೆದ್ದಿಲ್ಲ.ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯದ ವೇಳೆ ಬಿಜೆಪಿಯ ಕಾರ್ಯಕರ್ತರೇ ಗಲಾಟೆಗೆ ಪ್ರಚೋದನೆ ನೀಡಿದ್ದಾರೆ. ಕ್ಷುಲ್ಲಕ ಕಾರಣವನ್ನೇ ಬಂಡವಾಳ ಮಾಡಿಕೊಂಡು ಗಲಭೆ ಸೃಷ್ಟಿಸಿದ್ದಾರೆ. ಆಟಕ್ಕೂ ಧಾರ್ಮಿಕ ಭಾವನೆ ಸೇರಿಸುವ ಮೂಲಕ ಮತಗಳಿಕೆಗಾಗಿ ಭದ್ರಾವತಿಯನ್ನೇ ಅಶಾಂತಿಗೆ ದೂಡುವ ಪ್ರಯತ್ನ ಮಾಡುತ್ತಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಬಿಜೆಪಿಯ ಕಾರ್ಯಕರ್ತರಂತೆ ವರ್ತಿಸುತ್ತಿರುವ ಭದ್ರಾವತಿ ಪೊಲೀಸರ ದೌರ್ಜನ್ಯ ಖಂಡಿಸಿ ಮಾರ್ಚ್ 9ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಜೆಪಿ ಮುಖಂಡರ ಕುಮ್ಮಕ್ಕಿನಿಂದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ಕಾರ್ಯಕರ್ತರ ಮನೆಗಳಿಗೆ ಹೋಗಿ ಮಹಿಳೆಯರು, ಮಕ್ಕಳನ್ನೂ ಬೆದರಿಸುತ್ತಿದ್ದಾರೆ. ಮನೆಯಲ್ಲಿದ್ದ ಪುರುಷರನ್ನು ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಬಿಜೆಪಿ ನೀಡಿದ ಪಟ್ಟಿ ಆಧಾರದ ಮೇಲೆ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಇದು ತಕ್ಷಣವೇ ನಿಲ್ಲಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಭದ್ರಾವತಿ ಶಾಸಕ ಸಂಗಮೇಶ್ವರ, ಅವರ ಕುಟುಂಬದವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಇದು ಖಂಡನೀಯ. ಸದನದಿಂದ ಒಂದು ವಾರ ಅಮಾನತು ಮಾಡಿರುವುದನ್ನೂ ಪಕ್ಷ ಖಂಡಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮುಖಂಡರಾದ ಕಲಗೋಡು ರತ್ನಾಕರ್, ವೇದ ವಿಜಯ್‌ಕುಮಾರ್, ಎಚ್.ಸಿ.ಯೋಗೀಶ್, ವಿಜಯ್‌ಕುಮಾರ್, ಚಂದ್ರೇಗೌಡ, ಎಚ್.ಎಲ್.ಷಡಾಕ್ಷರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.