ತೀರ್ಥಹಳ್ಳಿ: ಭಾರತದ ಸಮಗ್ರತೆ, ಏಕತೆ, ಒಕ್ಕೂಟ ವ್ಯವಸ್ಥೆ ಅಪಾಯದಲ್ಲಿದೆ. ಬಡವರು, ದುರ್ಬಲರು, ಪರಿಶಿಷ್ಟರ ಮೀಸಲಾತಿ ದುರ್ಬಲಗೊಳಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗೀಕರಣದ ಹಾದಿ ಹಿಡಿದಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಗಂಭೀರವಾಗಿ ಆರೋಪಿಸಿದರು.
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿ ಮೀಸಲಾತಿ ನೀಡದಿರುವುದರ ಲಾಭವನ್ನು ಸಂಘ ಪರಿವಾರ ಪಡೆಯಲು ವ್ಯವಸ್ಥಿತ ಷಡ್ಯಂತ್ರ ರೂಪಿಸಿದೆ ಎಂದು ಶುಕ್ರವಾರ ಪಟ್ಟಣದ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಅವರು ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಉದ್ಯೋಗ ಸೃಷ್ಟಿಯಾಗಿದೆ ಎನ್ನುವುದು ಹ್ಯಾಸ್ಯಾಸ್ಪದವಾಗಿದೆ. ಸ್ಟಾರ್ಟ್ ಅಪ್ ಯೋಜನೆ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ. ಎಷ್ಟು ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ ಮಾಹಿತಿ ಬಹಿರಂಗಪಡಿಸಲಿ ಎಂದು ಅವರು ಸವಾಲು ಹಾಕಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣ ರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಮುಖಂಡರಾದ ಕಡ್ತೂರು ದಿನೇಶ್, ವಿಶ್ವನಾಥ ಶೆಟ್ಟಿ, ವಿಲಿಯಂ ಮಾರ್ಟೀಸ್ ಇದ್ದರು.
Cut-off box - ಅಂಬೇಡ್ಕರ್ ವಿರುದ್ಧ ಮಾತನಾಡದ ಬಿಜೆಪಿ ಆರ್‌ಎಸ್‌ಎಸ್ ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿ ಸಾಯುವುದಿಲ್ಲ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದರು. ಹಿಂದೂ ಧರ್ಮದಲ್ಲಿನ ಅಸಮಾನತೆ ತೊಲಗಿಸಲು ಮಹಾತ್ಮ ಗಾಂಧಿ ಪ್ರಯತ್ನಿಸಿದ್ದರು. ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯದವರಾದ ಗಾಂಧಿ ಅವರನ್ನು ಬಿಜೆಪಿ ಆರ್‌ಎಸ್‌ಎಸ್ ಕಠೋರವಾಗಿ ವಿರೋಧಿಸುತ್ತದೆ. ಆದರೆ ಅಂಬೇಡ್ಕರ್ ಅವರ ವಿರುದ್ಧ ಮಾತನಾಡುವುದಿಲ್ಲ. ಮಾತನಾಡಿದರೆ ಪರಿಶಿಷ್ಟ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯ ಬಿಜೆಪಿ ಸಂಘ ಪರಿವಾರಕ್ಕೆ ಇದೆ ಎಂದು ಕಿಮ್ಮನೆ ರತ್ನಾಕರ ಛೇಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.