ಕೋಣಂದೂರು: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಿರ್ಮಿಸಿರುವ ಬಾಲ್ಯದ ತೊಡಕು ಕಿರುಚಿತ್ರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಿರು ಚಲನಚಿತ್ರ ನಿರ್ಮಾಣ ಸ್ಪರ್ಧೆಯಲ್ಲಿ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಿರ್ಮಿಸಿ, ಪ್ರಸ್ತುತ ಪಡಿಸಿದ ‘ಬಾಲ್ಯದ ತೊಡಕು’ ಕಿರು ಚಲನಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.
ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಬಾಲ್ಯದ ತೊಡಕು ಕಿರುಚಿತ್ರದಲ್ಲಿ ಕಡ್ಡಾಯ ಮತ್ತು ಉಚಿತ ಶಿಕ್ಷಣ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ಪೋಕ್ಸೊ ಕಾಯ್ದೆ, ಕುಡಿತದ ದುಷ್ಪರಿಣಾಮಗಳನ್ನು ಬಿಂಬಿಸಿ ಸಮಾಜಕ್ಕೆ ಉತ್ತಮ ಸಂದೇಶ ಚಿತ್ರದ ವಸ್ತು ವಿಷಯವಾಗಿದೆ. ರಂಗ ಶಿಕ್ಷಕ ಶ್ರೀಕಾಂತ್ ಕುಮಟಾ ಹಾಗೂ ಸಹ ಶಿಕ್ಷಕ ಮಲ್ಲಿಕಾರ್ಜುನ ಚಲನಚಿತ್ರ ನಿರ್ದೇಶಿಸಿದ್ದರು. ವಿದ್ಯಾರ್ಥಿಗಳಾದ ಆರ್. ಶಮಂತ್, ಅನ್ನಪೂರ್ಣ, ನಿಶ್ಚಿತಾ, ಕೆ.ಎಚ್. ಸುಜಿತ್ , ಡಿ.ಎಲ್. ಶಶಾಂಕ, ಮಹಮದ್ ಸಾಹಿಲ್, ಎಚ್.ಆರ್. ಮನವಿ, ಕೆ.ಎಂ. ನಾಗಶ್ರೀ ಕೆ.ಎಲ್. ರಮ್ಯಾ, ಆರ್.ಟಿ. ಸಿಂಧು, ಆರ್.ಟಿ. ವಿವೇಕ್ ಅಭಿನಯಿಸಿದ್ದಾರೆ.
ಕುವೆಂಪು ರಂಗಮಂದಿರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಾದ ಎಮ್.ಎಲ್. ವೈಶಾಲಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎನ್. ಸರಸ್ವತಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಸ್.ಎ. ಮುಸ್ತಫಾ ಹುಸೇನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.