ADVERTISEMENT

ಅಡಿಕೆ ತೋಟದಲ್ಲಿ ಅಂತರ ಬೆಳೆಯ ಮಾದರಿ ಕೃಷಿ

ವಕೀಲ ಎಂ.ಆರ್. ಪಾಟೀಲ ಸಾಧನೆ

ರವಿ ಆರ್.ತಿಮ್ಮಾಪುರ
Published 16 ನವೆಂಬರ್ 2022, 3:53 IST
Last Updated 16 ನವೆಂಬರ್ 2022, 3:53 IST
ಅಡಿಕೆ ಮಧ್ಯೆ ಕೃಷಿ ಮಾಡಿರುವ ಮೂರು ತಿಂಗಳ ಏಲಕ್ಕಿ ಸಸಿ.
ಅಡಿಕೆ ಮಧ್ಯೆ ಕೃಷಿ ಮಾಡಿರುವ ಮೂರು ತಿಂಗಳ ಏಲಕ್ಕಿ ಸಸಿ.   

ಆನವಟ್ಟಿ: ಮೂರು ವರ್ಷಗಳ ಹಿಂದೆ ಅಡಿಕೆ ತೋಟದ ಸ್ವಲ್ಪ ಭಾಗದಲ್ಲಿ ಅಂತರ ಬೆಳೆಯಾಗಿ ಏಲಕ್ಕಿ ಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾದ ವಕೀಲ ಎಂ.ಆರ್. ಪಾಟೀಲ, ಪ್ರಸಕ್ತ ವರ್ಷ ಜಾಯಿಕಾಯಿ, ಕಾಳು ಮೆಣಸು ಸೇರಿದಂತೆ ವಿವಿಧ ಸಸಿಗಳನ್ನು ತಂದು 6 ಎಕರೆ ಭೂಮಿಯಲ್ಲಿ ನಾಟಿ ಮಾಡಿದ್ದಾರೆ.

ಧರ್ಮಶ್ರೀ ಫಾರಂ ಹೊಂದಿರುವ ಎಂ.ಆರ್.ಪಾಟೀಲ, ಪರಿಸರ ಪ್ರೇಮಿಯೂ ಹೌದು. ಹಲವು ವರ್ಷಗಳಿಂದ ಪರಿಸರ ವೇದಿಕೆ ಕಟ್ಟಿಕೊಂಡು ತಾಲ್ಲೂಕಿನಾದಂತ್ಯ ಕಾಡು ಗಿಡಗಳನ್ನು ನೆಟ್ಟು, ಕಾಡು ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ. ಜೊತೆಗೆ ತಮ್ಮ ತೋಟದಲ್ಲಿ ಪ್ರಯೋಗದ ಮೂಲಕ ಮಾದರಿ ಕೃಷಿಕರಾಗಿದ್ದಾರೆ.

ಅಡಿಕೆ ನಡುವೆ ಅಂತರ ಬೆಳೆಯಾಗಿ 350 ಜಾಯಿಕಾಯಿ, 1,000 ಏಲಕ್ಕಿ ಸಸಿ, 1,000 ಕಾಳು ಮೆಣಸು, ಬಾಳೆ, ಬಟರ್ ಫ್ರೂಟ್, ಬಿಳಿ ನೇರಳೆ, ಮೋಸಂಬಿ, ಕಿತ್ತಲೆ, ದೀವಿ ಹಲಸು, ಪಪ್ಪಾಯ, ಮಿಡಿ ಮಾವಿನಕಾಯಿ ಮತ್ತಿತರ ಸಸಿಗಳನ್ನು ನೆಟ್ಟಿದ್ದಾರೆ.

ADVERTISEMENT

‘ಜಾಯಿಕಾಯಿ 5 ವರ್ಷಕ್ಕೆ ಫಸಲು ಕೊಡುತ್ತದೆ. ಜಾಯಿಕಾಯಿಯಲ್ಲಿ ಗಂಡು– ಹೆಣ್ಣು ಎಂಬ ಎರಡು ವಿಧವಿದೆ. ಫಸಲು ಬರುವವರೆಗೂ ಗೊತ್ತಾಗುವುದಿಲ್ಲ. ಗಂಡು ಜಾಯಿಕಾಯಿ ಫಸಲು ನೀಡುವುದಿಲ್ಲ. ಹೆಣ್ಣು ಜಾಯಿಕಾಯಿ ಗಿಡ ಮಾತ್ರ ಫಸಲು ನೀಡುತ್ತದೆ. 5 ವರ್ಷಗಳ ನಂತರ ಗಂಡು ಜಾಯಿಕಾಯಿ ಗೀಡವನ್ನು ಕತ್ತರಿಸಿ ತೆಗೆಯಬೇಕು. 9X9 ಅಳತೆಯಲ್ಲಿ ಹಚ್ಚಿರುವ ಅಡಿಕೆ ಮರಗಳ ಮಧ್ಯೆ ಗಾಳಿ ಆಡಲು ಜಾಗವಿರುವಂತೆ 50 ಅಡಿಗೆ ಬಂದು ಗಿಡವನ್ನು ಹಚ್ಚಬೇಕು. ಜಾಯಿಕಾಯಿ ಗಿಡ ನೂರು ವರ್ಷಕ್ಕೂ ಅಧಿಕ ಬಾಳುತ್ತದೆ. ನಿರಂತರ ಫಸಲು ನೀಡುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಏಲಕ್ಕಿ ಫಸಲು 2 ವರ್ಷ 6 ತಿಂಗಳಿಗೆ ಆರಂಭವಾಗುತ್ತದೆ. ಬಿಸಿಲು ಮತ್ತು ನೆರಳು ಇರುವ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುವುದರಿಂದ ಅರೆ ಮಲೆನಾಡಿನ ವಾತಾವರಣವಿರುವ ಪ್ರದೇಶದಲ್ಲಿ ಏಲಕ್ಕಿ ಹೆಚ್ಚು ಇಳುವರಿ ನೀಡುತ್ತದೆ. 5ರಿಂದ 6 ವರ್ಷ ಉತ್ತಮ ಇಳುವರಿ ಪಡೆಯಬಹುದು. ಅಡಿಕೆ ಬೆಲೆ ಮಾರುಕಟ್ಟೆಯಲ್ಲಿ ಕುಸಿಯುತ್ತಿದೆ. ಅದನ್ನು ಸರಿದೂಗಿಸಲು ಅಡಿಕೆ ಬೆಳೆ ಜೊತೆಗೆ ವಾಣಿಜ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ನಷ್ಟ ಅನುಭವಿಸುವುದನ್ನು ತಪ್ಪಿಸಿಕೊಳ್ಳಬಹುದು’ ಎಂದು ಅವರು ಹೇಳಿದರು.

***

ಹಸಿರೆಲೆ ಗೊಬ್ಬರಕ್ಕಾಗಿ ‘ಮುಖೇನ’ ಬಳ್ಳಿ

ಸಾವಯವ ಗೊಬ್ಬರ ಹಾಗೂ ರಸಗೊಬ್ಬರ ಎರಡನ್ನೂ ಬಳಕೆ ಮಾಡ
ಲಾಗುತ್ತಿದೆ. ತೋಟಕ್ಕೆ ಯಾವುದೇ ಕಾರಣಕ್ಕೂ ಕಳೆನಾಶಕ ಔಷಧ ಬಳಸುವುದಿಲ್ಲ. ಬದಲಿಗೆ, ಕಾರ್ಮಿಕರಿಂದಲೇ ಕಳೆ ತೆಗೆಸುತ್ತೇವೆ. ಶೇ 80ರಷ್ಟು ಕೆಲಸವನ್ನು ಕಾರ್ಮಿಕರಿಂದಲೇ ಮಾಡಿಸುತ್ತೇವೆ. ಇದರಿಂದ ಉದ್ಯೋಗ ಕೊಟ್ಟಂತಾಗುತ್ತದೆ ಮತ್ತು ತೋಟದ ಕೆಲಸ ಚೆನ್ನಾಗಿ ಆಗುತ್ತದೆ. ಹಸಿರೆಲೆ ಗೊಬ್ಬರಕ್ಕಾಗಿ ‘ಮುಖೇನ’ ಬಳ್ಳಿಯನ್ನು ಬೆಳೆಸುತ್ತೇವೆ. ಬಳ್ಳಿ ಚೆನ್ನಾಗಿ ಹಬ್ಬಿದ ನಂತರ ಬೇರು ಸಮೇತ ಕಿತ್ತು ಅಲ್ಲೇ ಬಿಡಬೇಕು. ಜೊತೆಗೆ ತೋಟದ ಸುತ್ತ ಬೆಳೆದಿರುವ ಹಣ್ಣಿನ ಮರಗಳ ಎಲೆ ಉದುರುವುದರಿಂದ ಅಡಿಕೆ ಗಿಡಗಳಿಗೆ ಉತ್ತಮ ಗೊಬ್ಬರ ಲಭ್ಯವಾಗುತ್ತದೆ.

ತೋಟಗಳಲ್ಲಿ ಹಣ್ಣಿನ ಗಿಡ ಬೆಳೆಸುವುದರಿಂದ ಪಕ್ಷಿ ಸಂಕುಲಕ್ಕೆ ಆಹಾರ ದೊರೆಯುತ್ತದೆ. ಅವು ಹಿಕ್ಕೆ ಹಾಕುವುದರಿಂದ ತೋಟದಲ್ಲಿ ಕಸುವಾದ ಗೊಬ್ಬರ ಸಿಗುತ್ತದೆ ಎಂದು ಎಂ.ಆರ್.ಪಾಟೀಲ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.