ADVERTISEMENT

ಕೋಣಂದೂರು: ವ್ಯಾಪಾರದೊಂದಿಗೆ ಪ್ರಯೋಗಶೀಲ ಕೃಷಿಯಲ್ಲಿ ಯಶಸ್ಸು

ಸಾವಯವ ಕೃಷಿ ಪದ್ಧತಿ, ಜೀವಾಣು ಗೊಬ್ಬರ ಬಳಸುವ ಅನಂತ ಪದ್ಮನಾಭ

ಹೊಸಕೊಪ್ಪ ಶಿವು
Published 14 ಸೆಪ್ಟೆಂಬರ್ 2022, 5:29 IST
Last Updated 14 ಸೆಪ್ಟೆಂಬರ್ 2022, 5:29 IST
ತಮ್ಮ ತೋಟದಲ್ಲಿ ಅನಂತ ಪದ್ಮನಾಭ್
ತಮ್ಮ ತೋಟದಲ್ಲಿ ಅನಂತ ಪದ್ಮನಾಭ್   

ಕೋಣಂದೂರು: ಗೃಹೋಪಯೋಗಿ ವಸ್ತುಗಳ ವ್ಯಾಪಾರಿಯಾಗಿ, ಕೃಷಿಯ ಮೇಲಿನ ಪ್ರೀತಿಯೊಂದಿಗೆ ಸಂಪೂರ್ಣ ಸಾವಯವ ಪದ್ಧತಿ ಅಳವಡಿಸಿಕೊಂಡು ಯಶಸ್ಸನ್ನು ಗಳಿಸಿದ್ದಾರೆ ಸಮೀಪದ ಚಿಟ್ಟೆಬೈಲಿನ ವಿ.ಎಂ. ಅನಂತ ಪದ್ಮನಾಭ.

14 ವರ್ಷ ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದ್ದ ಅವರು, 8 ವರ್ಷಗಳ ಹಿಂದೆ ತೀರ್ಥಹಳ್ಳಿಗೆ ಬಂದು ವಿಷ್ಣು ಎಂಟರ್‌ಪ್ರೈಸಸ್ ಹೆಸರಿನ ಗೃಹೋಪಯೋಗಿ ವಸ್ತುಗಳ ಮಾರಾಟ ಮತ್ತು ವಿತರಣೆಯಲ್ಲಿ ತೊಡಗಿದ್ದಾರೆ.

ಚಿಟ್ಟೆಬೈಲು– ಹಲಸಿನಹಳ್ಳಿಯಲ್ಲಿ ಪಿತ್ರಾರ್ಜಿತವಾಗಿ ಬಂದ ಒಂದೂವರೆ ಎಕರೆ ಜಮೀನನ್ನು ಅಕ್ಷರಶಃ ಪ್ರಯೋಗಶಾಲೆ ಆಗಿಸಿಕೊಂಡಿರುವ ಇವರು ಸಂಪೂರ್ಣ ಸಾವಯವ ಪದ್ಧತಿಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿರುವುದು ವಿಶೇಷ.

ADVERTISEMENT

ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಜೊತೆಜೊತೆಗೆ ಉಪಬೆಳೆಗಳನ್ನಾಗಿ ಕಾಳು ಮೆಣಸು, ನಿಂಬೆ, ಜಾಯಿಕಾಯಿ, ಲವಂಗ ಬೆಳೆಯುತ್ತಿದ್ದಾರೆ. ನೀರಿಗಾಗಿ
ಒಂದು ಕೊಳವೆ ಬಾವಿ ಆಶ್ರಯಿಸಿದ್ದಾರೆ.

ಇಳುವರಿಯ ಬಗ್ಗೆ ಚಿಂತಿಸದ ಇವರಿಗೆ ನಿರೀಕ್ಷೆಗೂ ಮೀರಿದ ಫಲಿತಾಂಶ ದೊರೆತಿದೆ. ಕೊಟ್ಟಿಗೆ ಗೊಬ್ಬರದೊಂದಿಗೆ ಜೀವಾಣು ಗೊಬ್ಬರದ ದ್ರಾವಣವನ್ನು ಬಳಸುತ್ತಿದ್ದಾರೆ. ಒಂದು ಲೀಟರ್ ದ್ರಾವಣವನ್ನು ನೀರಿನೊಂದಿಗೆ ಮಿಶ್ರ ಮಾಡಿ 200 ಗಿಡಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸಿಂಪಡಿಸುತ್ತಾರೆ. ಇದರಿಂದಾಗಿ ತೋಟದಲ್ಲಿ ಎರೆಹುಳುಗಳು ಉತ್ಪತ್ತಿಯಾಗಿ ಭೂಮಿಯ ಫಲವತ್ತತೆ ಹೆಚ್ಚಿ ಉತ್ತಮ ಫಸಲು ಬರುತ್ತಿದೆ. ಅಡಿಕೆ ಗಿಡಗಳಿಗೆ ಫಲವತ್ತಾದ ಕಾಡು ಮಣ್ಣನ್ನು ಎರಡು ವರ್ಷಕ್ಕೊಮ್ಮೆ ಹಾಕಿಸುತ್ತಾರೆ. ತೋಟಕ್ಕೆ ತುಂತುರು ನೀರಾವರಿಯನ್ನು ಅಳವಡಿಸಿದ್ದಾರೆ.

‘ನಮ್ಮ ತೋಟವನ್ನು ನೋಡಿ ಅಕ್ಕಪಕ್ಕದವರು ಸಾವಯವ ಕೃಷಿ ಜೊತೆ ಜೀವಾಣು ಗೊಬ್ಬರ ಬಳಸಲು ಪ್ರಾರಂಭಿಸಿದ್ದಾರೆ. ತೋಟದಲ್ಲಿ
ಕಳೆಯ ಸಮಸ್ಯೆಯೂ ಕಡಿಮೆಯಾಗಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅನಂತ ಪದ್ಮನಾಭ.

‘ಬಿ.ಸಿ.ಎ. ವ್ಯಾಸಂಗ
ಮಾಡಿರುವ ಪತ್ನಿ ಸುಮಾ, ತಾಯಿ ಮತ್ತು ಇಬ್ಬರು ಮಕ್ಕಳ ಸಂಸಾರದ ಅಗತ್ಯವನ್ನು ಒಂದೂವರೆ ಎಕರೆ ತೋಟ ಪೂರೈಸುತ್ತಿದೆ. ಕೃಷಿಯು ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಿದೆ’ ಎಂದು ಅವರು ಆತ್ಮ‌ವಿಶ್ವಾಸದಿಂದ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.