ಶಿವಮೊಗ್ಗ: ಎಲ್ಲ ವರ್ಗದವರ ಬಟ್ಟೆಗಳನ್ನು ಸ್ವಚ್ಛ ಮಾಡುವ ಮೂಲಕ ಇಡೀ ಸಮಾಜಕ್ಕೆ ಗೌರವ ತಂದುಕೊಟ್ಟ ಮಾಚಿದೇವ ಅವರು ನಿಜ ಕಾಯಕಯೋಗಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಸರಳ ಹಾಗೂ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಮಾತು, ಉಪನ್ಯಾಸ ನೀಡದೇ ಬೆವರು ಸುರಿಸುವ ವರ್ಗದ ನೇತಾರ ಮಡಿವಾಳ ಮಾಚಿದೇವ. ರಕ್ತವನ್ನು ಬೆವರಿನ ರೂಪದಲ್ಲಿ ಸುರಿಸಿ ಬಟ್ಟೆ ಮಡಿ ಮಾಡಿರದಿದ್ದರೆ ಸಮಾಜದ ಗೌರವ ಉಳಿಯುತ್ತಿರಲಿಲ್ಲ. ಹೀಗೆ ಸಮಾಜಕ್ಕೆ ಗೌರವ ತಂದ ಮಡಿವಾಳ ಮಾಚಿದೇವರ ಹೋರಾಟ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
‘ನನಗೆ ಎನ್ನುವುದಕ್ಕಿಂತ ನಮ್ಮ ಸಮಾಜಕ್ಕಾಗಿ ಎಂದು ಬದುಕಿದವರು ಮಾಚಿದೇವ. ಸೋಮಾರಿತನ ಬಿಟ್ಟು ನಿತ್ಯ ಕಾಯಕದಲ್ಲಿ ತೊಡಗುವಂತೆ ಸಂದೇಶ ನೀಡಿದ ಅವರು ನಮ್ಮೆಲ್ಲರ ಹೆಮ್ಮೆ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಅಧ್ಯಕ್ಷ ಎಂ.ಎಸ್. ಸುರೇಶ್ ಮಾತನಾಡಿ, ‘ಸರ್ಕಾರದಿಂದ ಮಡಿವಾಳ ಮಾಚಿದೇವ ಜಯಂತಿ ಆಚರಿಸುತ್ತಿರುವುದಕ್ಕೆ ಸಮಾಜದ ಪರವಾಗಿ ಅಭಿನಂದಿಸುತ್ತೇನೆ. ಮಡಿವಾಳ ಮಾಚಿದೇವರ ಕುರಿತು ಮಕ್ಕಳಿಗೂ ಪಾಠ ಪ್ರವಚನದ ಮೂಲಕ ತಿಳಿಸುವ ಕೆಲಸವಾಗಬೇಕು’ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಮಡಿವಾಳ ಮಾಚಿದೇವ ಸಮಾಜದ ಪ್ರಧಾನ ಕಾರ್ಯದರ್ಶಿ ದಯಾನಂದ್, ಉಪಾಧ್ಯಕ್ಷರಾದ ವೈ. ಮುನಿಯಪ್ಪ, ಮಂಜಪ್ಪ, ಕಾರ್ಯದರ್ಶಿ ಎಚ್.ಆರ್. ಬಸವರಾಜ್, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಎಸ್. ಅರುಣ್‍ಕುಮಾರ್, ಮುಖಂಡರಾದ ಎನ್. ಮಂಜುನಾಥ್, ಸಿದ್ದಲಿಂಗಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಉಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.