ADVERTISEMENT

ಬೈದಿರುವ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಷಡಾಕ್ಷರಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 11:13 IST
Last Updated 28 ಜನವರಿ 2023, 11:13 IST
 ಷಡಾಕ್ಷರಿ
ಷಡಾಕ್ಷರಿ   

ಶಿವಮೊಗ್ಗ: ’ಸೊರಬ ಶಾಸಕ ಕುಮಾರ್‌ ಬಂಗಾರಪ್ಪ ನನ್ನ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವ ಹೇಳಿಕೆ ಸ್ವಾಗತಿಸುತ್ತೇನೆ. ನಾನು ಏನಾದರೂ ಅವರಿಗೆ ಕೆಟ್ಟದಾಗಿ ಬೈದಿರುವ ದಾಖಲೆ ಇದ್ದರೆ ಬಿಡುಗಡೆ ಮಾಡಲಿ‘ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹಕ್ಕುಚ್ಯುತಿ ಮಂಡನೆ ಮಾಡುವಂತಹ ತಪ್ಪು ನಾನೇನು ಮಾಡಿದ್ದೇನೆ. ಶಾಸಕರ ಹೆಸರನ್ನೇ ಪ್ರಸ್ತಾಪಿಸಿಲ್ಲ. ಅವರ ವಿರುದ್ಧ ಹೇಳಿಕೆಯನ್ನೂ ಕೊಟ್ಟಿಲ್ಲ ಎಂದರು.

’ಕುಮಾರ್ ಬಂಗಾರಪ್ಪ ಮಾಜಿ ಮುಖ್ಯಮಂತ್ರಿಗಳ ಮಗ. ಮಾಜಿ ಸಚಿವರು ಕೂಡ. ಅವರ ಬಗ್ಗೆ ತುಂಬಾ ಗೌರವ ಇದೆ. ತಪ್ಪು ಕಲ್ಪನೆ ಇಟ್ಟುಕೊಂಡು ಏನೋ ಮಾತಾಡುತ್ತಿದ್ದಾರೆ. ಒಂದು ಬಾರಿಯೂ ನಾನು ಅವರ ಹೆಸರು ಹೇಳಿಲ್ಲ. ಅವರೇ ನನ್ನ ಹೆಸರು ನಾಲ್ಕು ಬಾರಿ ಹೇಳಿದ್ದಾರೆ. ಶಾಸಕರ ಬಗ್ಗೆ ವೈಯಕ್ತಿಕ ವಿರೋಧ, ದ್ವೇಷ ಏನೂ ಇಲ್ಲ. ನೀವು ಮಾಧ್ಯಮದವರು ನಮ್ಮ ಮಧ್ಯೆ ಬೆಂಕಿ ಹಚ್ಚುವುದು ಬೇಡ. ನಾವು ನೌಕರರು ಸರ್ಕಾರದ ಮಕ್ಕಳು. ರಾಜಕೀಯ ತೆಗೆದುಕೊಂಡು ನಮಗೇನು ಆಗಬೇಕು. ನಾವು ಯಾವುದೇ ಪಕ್ಷಕ್ಕೆ ಸೀಮಿತವಲ್ಲ‘ ಎಂದು ಸ್ಪಷ್ಟಪಡಿಸಿದರು.

ADVERTISEMENT

ಶಿವಮೊಗ್ಗದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ನಡೆದ ಪ್ರತಿಭಟನೆಗೆ ನನ್ನ ಕುಮ್ಮಕ್ಕು ಇದೆ ಎಂಬುದು ತಪ್ಪು ಭಾವನೆ. ಕಂದಾಯ ಇಲಾಖೆ ನೌಕರರ ಸಂಘಕ್ಕೆ ಪ್ರತ್ಯೇಕ ಅಸ್ತಿತ್ವ ಇದೆ. ಶಾಸಕರ ಆರೋಪಕ್ಕೆ ಅವರೇ ಉತ್ತರ ಕೊಡುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.