ADVERTISEMENT

ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿದ ಸಾಂಸ್ಕೃತಿಕ ನಾಯಕ: ಎಂ.ಎಸ್‌.ಆಶಾದೇವಿ

ಕುವೆಂಪು ವಿ.ವಿ: ಬಸವಣ್ಣ ಸಾಂಸ್ಕತಿಕ ನಾಯಕ, ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 15:32 IST
Last Updated 20 ಸೆಪ್ಟೆಂಬರ್ 2024, 15:32 IST
ಶಿವಮೊಗ್ಗದಲ್ಲಿ ಶುಕ್ರವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ನಾಯಕ ಬಸವಣ್ಣನವರು‘ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣದ ಉದ್ಘಾಟಿನೆಯ ನೋಟ
ಶಿವಮೊಗ್ಗದಲ್ಲಿ ಶುಕ್ರವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ನಾಯಕ ಬಸವಣ್ಣನವರು‘ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣದ ಉದ್ಘಾಟಿನೆಯ ನೋಟ   

ಶಿವಮೊಗ್ಗ: ಬಸವಣ್ಣನವರು ಸಾಮಾಜಿಕ ಸಮಸ್ಯೆಗಳ ಗುರುತಿಸಿ ಜನರ ನಡುವಿನಿಂದ ಸ್ಥಳೀಯವಾಗಿ ಪರಿಹಾರಗಳನ್ನು ಹುಡುಕಿಕೊಟ್ಟ ಕಾರಣಕ್ಕೆ ಅವರು ಸಾಂಸ್ಕೃತಿಕ ನಾಯಕ ಆದರು ಎಂದು ಮಹಾರಾಣಿ ಕ್ಲಸ್ಟರ್ ವಿ.ವಿಯ ಪ್ರಾಧ್ಯಾಪಕಿ ಪ್ರೊ.ಎಂ.ಎಸ್. ಆಶಾದೇವಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಬಸವೇಶ್ವರ ಅಧ್ಯಯನ ಪೀಠದಿಂದ ಶುಕ್ರವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ನಾಯಕ ಬಸವಣ್ಣನವರು‘ ವಿಷಯ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಆಶಯ ನುಡಿಗಳನ್ನಾಡಿದರು.

ಅಸಮಾನತೆ, ಅಸ್ಪೃಷ್ಯತೆ, ವರ್ಗ-ವರ್ಣ-ಲಿಂಗ ತಾರತಮ್ಯಗಳನ್ನು ಬಸವಣ್ಣನವರು ಗುರುತಿಸಿ ಕಾರ್ಯಸಾಧುವಾದ ಪರಿಹಾರೋಪಾಯಗಳ ತಿಳಿಸಿಕೊಟ್ಟರು ಹಾಗೂ ನಡೆಯಲ್ಲಿ ಅವನ್ನು ಸಾಧಿಸಿ ತೋರಿದರು ಈ ಕಾರಣವಾಗಿ ಅವರು ಸಾಂಸ್ಕೃತಿಕ ನಾಯಕರಾದರು ಎಂದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿ.ವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಪ್ರತೀ ಭಾಷೆಯು ಒಂದು ಅಸ್ಮಿತೆ, ಜ್ಞಾನಭಂಡಾರ ಹೊಂದಿರುತ್ತದೆ. ಕನ್ನಡ ಭಾಷೆಯಲ್ಲಿ ಜ್ಞಾನಲೋಕವೊಂದು ನಿರ್ಮಾಣವಾಗಲು ಕಾರಣವಾದದ್ದು 12ನೇ ಶತನಮಾನದ ಲಿಂಗಾಯತ ಚಳವಳಿ. ಅದರ ಮೂಲಕ ಕನ್ನಡದಲ್ಲಿ ವಿಶ್ವಜ್ಞಾನ, ಆಲೋಚನೆಗಳು, ತತ್ವ, ಸಾಮುದಾಯಿಕ ಬದುಕು, ಸಾಹಿತ್ಯಗಳು ಸೃಷ್ಟಿಯಾಗಿವೆ ಎಂದು ನುಡಿದರು.

ಈ ಸಂದರ್ಭದಲ್ಲಿ ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಎಂ. ಗೋಪಿನಾಥ್, ವಿಭಾಗದ ಅಧ್ಯಕ್ಷ ಪ್ರೊ. ಎಂ ಗುರುಲಿಂಗಯ್ಯ, ಪ್ರೊ. ಎಸ್.ಚಂದ್ರಶೇಖರ್ , ಪ್ರೊ. ಬಿ.ಎಚ್.ಅಂಜನಪ್ಪ ಮಾತನಾಡಿದರು.

ವಿಚಾರ ಸಂಕಿರಣದಲ್ಲಿ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಕೋಶಾಧ್ಯಕ್ಷ ಸಂಗಮನಾಥ ಎಂ. ಲೋಕಾಪುರ, ತಳಸಮುದಾಯಗಳ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಆರ್.ವಿ.ಚಂದ್ರಶೇಖರ್ ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.