ADVERTISEMENT

ಕುವೆಂಪು ವಿಶ್ವವಿದ್ಯಾಲಯ | ಪದವಿ: ವಿದ್ಯಾರ್ಥಿನಿಯರೇ ಮುಂದು!

ಶಿಕ್ಷಣದ ದೊಂದಿ ಹಿಡಿದ ಮಲೆನಾಡಿನ ಹೆಣ್ಣುಮಕ್ಕಳು

ವೆಂಕಟೇಶ ಜಿ.ಎಚ್.
Published 15 ಜೂನ್ 2022, 6:05 IST
Last Updated 15 ಜೂನ್ 2022, 6:05 IST
ಶಿವಮೊಗ್ಗ ಸಮೀಪದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಭವನದ ನೋಟ
ಶಿವಮೊಗ್ಗ ಸಮೀಪದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಭವನದ ನೋಟ   

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31 ಹಾಗೂ 32ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆಯುತ್ತಿರುವವರಲ್ಲಿ ಹೆಣ್ಣುಮಕ್ಕಳು ಮುಂಚೂಣಿಯಲ್ಲಿದ್ದಾರೆ.

ಎರಡೂ ಘಟಿಕೋತ್ಸವದಲ್ಲಿ ಒಟ್ಟು 46,073 ವಿದ್ಯಾರ್ಥಿಗಳು ಪದವಿ ಗೌನ್ ಧರಿಸುತ್ತಿದ್ದಾರೆ. ಅವರಲ್ಲಿ 27,535 ಮಂದಿ ವಿದ್ಯಾರ್ಥಿನಿಯರೇ ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ 18,538 ಮಾತ್ರ.

ಇದು ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸ್ತ್ರೀ ಶಿಕ್ಷಣಕ್ಕೆ ನೀಡುತ್ತಿರುವ ಪ್ರಾಶಸ್ತ್ಯದ ದ್ಯೋತಕ ಎಂದು ಹೇಳಲಾಗುತ್ತಿದೆ. ‘ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ’ ಎಂಬ ರಾಷ್ಟ್ರಕವಿ ಕುವೆಂಪು ಅವರ ಆಶಯವನ್ನು ಮಲೆನಾಡಿನ ಕಾನನದ ಹಾದಿಯಲ್ಲಿ ಶಿಕ್ಷಣದ ದೊಂದಿ ಹಿಡಿದ ಹೆಣ್ಣುಮಕ್ಕಳು ಸಾಕಾರಗೊಳಿಸಿದ್ದಾರೆ.

ADVERTISEMENT

ಚಿನ್ನದ ನಗೆ, ನಗದು ಸೂರೆ:ಎರಡೂ ಘಟಿಕೋತ್ಸವಗಳಲ್ಲಿ ರ‍್ಯಾಂಕ್ ವಿಜೇತರಿಗೆ ಒಟ್ಟು 259 ಚಿನ್ನದ ಪದಕಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಸಿಂಹಪಾಲು ಚಿನ್ನವನ್ನು ವಿದ್ಯಾರ್ಥಿನಿಯರೇ ಮುಡಿಗೇರಿಸಿಕೊಂಡಿದ್ದಾರೆ. ಚಿನ್ನದ ನಗೆ ಬೀರಿದವರಲ್ಲಿ 103 ಮಂದಿ ವಿದ್ಯಾರ್ಥಿನಿಯರಿದ್ದರೆ, ವಿದ್ಯಾರ್ಥಿಗಳ ಸಂಖ್ಯೆ 34 ಮಾತ್ರ. ಇನ್ನು 30 ನಗದು ಬಹುಮಾನಗಳನ್ನು 26 ವಿದ್ಯಾರ್ಥಿನಿಯರು ಹಂಚಿಕೊಂಡರೆ, ನಾಲ್ಕು ಬಹುಮಾನ ಇಬ್ಬರು ವಿದ್ಯಾರ್ಥಿಗಳಿಗೆ ದೊರೆತಿವೆ.

‘ಪ್ರವೇಶ ನೀಡುವಾಗ ಹುಡುಗಿಯರಿಗೆ ಪ್ರತ್ಯೇಕ ಮೀಸಲಾತಿ ಏನೂ ಅಲ್ಲ. ಆದರೂ ಜ್ಞಾನ ಸಹ್ಯಾದ್ರಿ ಕ್ಯಾಂಪಸ್ ಸೇರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಹುಡುಗರಿಗಿಂತ ಹುಡುಗಿಯರ ದಾಖಲಾತಿ ಪ್ರಮಾಣವೇ ಹೆಚ್ಚು ಇದೆ. ಈ ಪರಿಪಾಠ ಕಳೆದ 10 ವರ್ಷ ಗಳಿಂದ ಆರಂಭವಾಗಿದೆ’ ಎಂದು ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕ ಎಂ.ಆರ್‌. ಸತ್ಯಪ್ರಕಾಶ ಹೇಳುತ್ತಾರೆ.

ಕ್ಯಾಂಪಸ್‌ ನಲ್ಲಿ ಮಾನವಿಕ ವಿಷಯಗಳು (ಕಲಾ ವಿಭಾಗ), ವಾಣಿಜ್ಯ ತರಗತಿಗಳಿಗಿಂತ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಕಾಣಸಿಗುತ್ತಾರೆ. ವಿಜ್ಞಾನ ಕಲಿಕೆಯ ಒಲವಿನ ಜೊತೆಗೆ ಉದ್ಯೋಗಾವಕಾಶಗಳ ಲಭ್ಯತೆಯೂ ಇದಕ್ಕೆ ಕಾರಣ. ಜೊತೆಗೆ ಜ್ಞಾನ ಸಹ್ಯಾದ್ರಿಯಲ್ಲಿ ಹೆಣ್ಣುಮಕ್ಕಳು ಉಳಿಯಲು ಅಗತ್ಯ ಸೌಕರ್ಯ ಇದ್ದು, ಸುರಕ್ಷತೆಯ ಭಾವವೂ ಅವರಲ್ಲಿದೆ ಎನ್ನುತ್ತಾರೆ.

ಕಲಿಸುವಷ್ಟಾದರೂ ಶಕ್ತರಾಗಲಿ: ‘ಮನೆಯಲ್ಲಿ ಮಕ್ಕಳಿಗೆ ಅಕ್ಷರ ಕಲಿಸುವಷ್ಟಾದರೂ ಹೆಣ್ಣುಮಕ್ಕಳು ಕಲಿಯಲಿ ಎಂಬ ಭಾವನೆ ಈಗ ಮಲೆನಾಡಿನ ಪೋಷಕರಲ್ಲಿ ಮನೆ ಮಾಡಿದೆ. ಈ ಮೊದಲು ಹೆಣ್ಣುಮಕ್ಕಳು ಹೆಚ್ಚಾಗಿ ಪಿಯುಸಿಗೆ ಶಿಕ್ಷಣ ಮೊಟಕುಗೊಳಿಸುತ್ತಿದ್ದೆವು. ಈಗ ಕನಿಷ್ಠ ಪದವಿವರೆಗೆ ಕಲಿಯಲು ಅವಕಾಶ ದೊರೆಯುತ್ತಿದೆ’ ಎಂದು ಜ್ಞಾನ ಸಹ್ಯಾದ್ರಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ಭದ್ರಾವತಿಯ ಎಸ್‌.ಎಂ. ಪವಿತ್ರಾ ಹೇಳುತ್ತಾರೆ.

‘ವಿದ್ಯೆಯ ಸೌಂದರ್ಯ ಸಜೀವ, ಚಿನ್ನದ ಚೆಲುವು ಹೆಣದಂತೆ’ ಎಂದು ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಅಧ್ಯಾಯದಲ್ಲಿ ಕುವೆಂಪು ಹೇಳಿದ್ದರು. ಆ ಮಾತುಹೆಣ್ಣುಮಕ್ಕಳ ಕಲಿಕೆಯ ರೂಪದಲ್ಲಿ ಈಗ ಅವರದ್ದೇ
ಹೆಸರಿನ ವಿಶ್ವವಿದ್ಯಾಲಯದಲ್ಲಿ ನಿಜ ವಾಗುತ್ತಿದೆ’ ಎಂದು ಶಿವಮೊಗ್ಗದ ವಿನೋಬ ನಗರದ ಕನ್ನಡ ಶಿಕ್ಷಕ ಎಚ್.ಎನ್. ಶ್ರೀಹರ್ಷ ಸಂತಸ ವ್ಯಕ್ತಪಡಿಸುತ್ತಾರೆ.

* ಮಲೆನಾಡಿನಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಪಾಲಕರಲ್ಲಿ ಆಗಿರುವ ಜಾಗೃತಿಯು ಪದವೀಧರರ ಗೌನ್‌ ಧರಿಸುವವರ ಸಾಲಿನಲ್ಲಿ ಅವರನ್ನೇ (ಹುಡುಗಿಯರು) ಹೆಚ್ಚಿನ ಸಂಖ್ಯೆಯಲ್ಲಿ ಕಾಣಲು ಸಾಧ್ಯವಾಗಿದೆ.

-ಎಂ.ಆರ್. ಸತ್ಯಪ್ರಕಾಶ, ಪತ್ರಿಕೋದ್ಯಮ ವಿಭಾಗದ ಸಹ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.