ಶಿವಮೊಗ್ಗ: ಕಾಲೇಜು ಆರಂಭವಾಗಿ ವಾರ ಕಳೆದರೂ ಇನ್ನೂ ಅತಿಥಿ ಉಪನ್ಯಾಸಕ ನೇಮಕ ಆಗಿಲ್ಲ. ಹೀಗಾಗಿ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಆರಂಭದಲ್ಲೇ ಪಾಠಭಾಗ್ಯ ಇಲ್ಲದಂತಾಗಿದೆ.
ಎಂದಿನಂತೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಕಾಣದೇ ಕಾರಿಡಾರು, ಲೈಬ್ರರಿ, ಅಂಗಳದಲ್ಲಿಯೇ ಕಾಲಕಳೆದು ವಾಪಸ್ ಮನೆಗೆ ಮರಳುತ್ತಿದ್ದಾರೆ. ಕೆಲವರು ಸಿನಿಮಾ, ಪಾರ್ಕ್ ಕಡೆಯೂ ಮುಖ ಮಾಡುತ್ತಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನಾಲ್ಕು ಘಟಕ (ಪದವಿ) ಕಾಲೇಜುಗಳಲ್ಲಿ 220 ಹಾಗೂ ಸ್ನಾತಕೋತ್ತರ ವಿಭಾಗಗಳಲ್ಲಿ 90 ಸೇರಿದಂತೆ ಒಟ್ಟು 310 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಈ ಕಾಲೇಜುಗಳಿಗೆ ವಿಶ್ವವಿದ್ಯಾಲಯದ ಆಡಳಿತವೇ ಅತಿಥಿ ಉಪನ್ಯಾಸಕರ ನೇಮಕ ಮಾಡುತ್ತದೆ. ಪ್ರತೀ ವರ್ಷ ಕಾಲೇಜು ಆರಂಭವಾಗುವ ವೇಳೆಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಕನಿಷ್ಠ ಸಂದರ್ಶನ ಪ್ರಕ್ರಿಯೆ ಮುಗಿದಿರುತ್ತಿತ್ತು. ಆದರೆ ಈ ಬಾರಿ ನೇಮಕಾತಿ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಇದರಿಂದ ಬಹುತೇಕ ‘ಅತಿಥಿ’ಗಳ ಸೇವೆಯನ್ನೇ ನಂಬಿರುವ ಅಕಾಡೆಮಿಕ್ ವಲಯ ಮಂಕಾಗಿದೆ.
ಮೌಲ್ಯಮಾಪನಕ್ಕೆ ತೆರಳಿದ್ದಾರೆ: ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಬೆರಳೆಣಿಕೆಯಷ್ಟು ಕಾಯಂ ಉಪನ್ಯಾಸಕರು ಇದ್ದು, ಅವರೂ ಮೌಲ್ಯಮಾಪನಕ್ಕೆ ತೆರಳಿದ್ದಾರೆ. ಹೀಗಾಗಿ ಕಾಲೇಜುಗಳಲ್ಲಿ ಪ್ರಾಂಶುಪಾಲರನ್ನೂ ಬಿಟ್ಟು ಬೇರೆ ಯಾರೂ ಪಾಠ ಮಾಡುವವರು ಇಲ್ಲವಾಗಿದೆ.
ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜಿಗಳಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗಳು ಎಷ್ಟು ಇವೆ ಎಂಬುದರ ಪರಿಶೀಲನೆಗೆ ಸೂಚಿಸಿದ್ದೇನೆ. ವರದಿ ಪಡೆದು ಶೀಘ್ರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಿದ್ದೇವೆ.ಸ್ನೇಹಲ್ ಸುಧಾಕರ್ ಲೋಖಂಡೆ, ಪ್ರಭಾರಿ ರಿಜಿಸ್ಟ್ರಾರ್, ಕುವೆಂಪು ವಿಶ್ವವಿದ್ಯಾಲಯ
ಸಹ್ಯಾದ್ರಿ ಕ್ಯಾಂಪಸ್, ಅತಿಥಿಗಳದ್ದೇ ಪಾರಮ್ಯ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕಲಾ ವಿಭಾಗದ ಪದವಿ ಕಾಲೇಜಿನಲ್ಲಿ 33 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಏಳು ಸೇರಿದಂತೆ 40 ಮಂದಿ, ವಿಜ್ಞಾನ ಕಾಲೇಜಿನಲ್ಲಿ 100ಕ್ಕೂ ಹೆಚ್ಚು ಜನ ಅತಿಥಿಗಳು, ಇನ್ನು ವಾಣಿಜ್ಯ ಹಾಗೂ ನಿರ್ವಹಣಾ ಶಾಸ್ತ್ರ ವಿಭಾಗದಲ್ಲಿ ನಾಲ್ವರು ಕಾಯಂ ಉಪನ್ಯಾಸಕರು ಸೇರಿ 40 ಮಂದಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಆದರೆ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಒಟ್ಟು 8,000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಉಪನ್ಯಾಸಕರು ಬಾರದೇ ಈಗ ಇವರೆಲ್ಲರಿಗೂ ಪಾಠ ಇಲ್ಲವಾಗಿದೆ. ವಿದ್ಯಾರ್ಥಿಗಳು ಬಹುತೇಕರು ಕ್ಯಾಂಪಸ್‌ನಲ್ಲಿ ಕಾಲ ಕಳೆದರೆ ಕೆಲವರು ಸಿನಿಮಾ ಥಿಯೇಟರ್, ಉದ್ಯಾನಗಳ ಕಡೆಯೂ ಮುಖ ಮಾಡುತ್ತಿದ್ದಾರೆ.
ಜೀವನ ನಡೆಸುವುದು ಕಷ್ಟ
‘15ರಿಂದ 20 ವರ್ಷ ಕೆಲಸ ಮಾಡಿದ ಅತಿಥಿ ಶಿಕ್ಷಕರು ಈಗ ಕಾಲೇಜಿನಿಂದ ಹೊರಗೆ ಉಳಿದಿದ್ದೇವೆ. ಪ್ರತೀ ವರ್ಷ ಇಷ್ಟರೊಳಗೆ ನೇಮಕಾತಿ ಆಗುತ್ತಿತ್ತು. ಈಗ 15ರಿಂದ 20 ದಿನ ತಡವಾದರೂ ನಮ್ಮ ಮನೆ ನಿರ್ವಹಣೆ ಕಷ್ಟವಾಗಲಿದೆ. ಅಷ್ಟು ದಿನದ ವೇತನ ಇರುವುದಿಲ್ಲ’ ಎಂದು ಸಹ್ಯಾದ್ರಿ ಕಾಲೇಜಿನ ಅತಿಥಿ ಶಿಕ್ಷಕರೊಬ್ಬರು ಅಳಲು ತೋಡಿಕೊಳ್ಳುತ್ತಾರೆ.
‘ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಪ್ರಕ್ರಿಯೆ ಆರಂಭವಾದರೂ ವಿ.ವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಇನ್ನೂ ಆರಂಭವಾಗಿಲ್ಲ. ಹಿಂದಿನ ವರ್ಷದ ಮೂರ್ನಾಲ್ಕು ತಿಂಗಳ ಸಂಬಳವೂ ಆಗಿಲ್ಲ. ನಮ್ಮನ್ನು ಸೆಪ್ಟೆಂಬರ್ 23ರಿಂದ ರಿಲೀವ್ ಮಾಡಿದ್ದಾರೆ. ಹೊಸ ಆದೇಶ ಬರುವವರೆಗೂ ಸುಮ್ಮನೆ ಬಂದು ಕೆಲಸ ಮಾಡಿ. ವೇತನ ಕೊಡಲು ಆಗೊಲ್ಲ ಎನ್ನುತ್ತಾರೆ. ಅದು ಹೇಗೆ ಸಾಧ್ಯವಾಗುತ್ತದೆ. ಕಳೆದ ವರ್ಷವೂ ಹೀಗೆಯೇ ಸಂಬಳ ಕೊಡದೇ 19 ದಿನ ಕೆಲಸ ಮಾಡಿಸಿಕೊಂಡಿದ್ದರು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಅನುದಾನ ಬಳಕೆ; ಪರಿಶೀಲನೆಗೆ ಸಮಿತಿ
ಕುವೆಂಪು ವಿಶ್ವವಿದ್ಯಾಲಯಕ್ಕೆ ಸ್ಮಾರ್ಟ್‌ಕ್ಲಾಸ್ ರೂಂ ಸೌಲಭ್ಯ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಆಗಿದ್ದ ₹ 5 ಕೋಟಿ ಅನುದಾನ ಸದ್ಬಳಕೆ ಆಗಿದೆಯೇ ಎಂಬುದರ ಪರಿಶೀಲನೆಗೆ ಸಮಿತಿ ನೇಮಕ ಮಾಡಲಾಗಿದೆ. ಪರಿಶೀಲನೆ ನಡೆಸಿ 10 ದಿನಗಳ ಒಳಗಾಗಿ ಕುಲಪತಿಗೆ ವರದಿ ನೀಡುವಂತೆ ಸಮಿತಿಗೆ ಸೂಚನೆ ನೀಡಲಾಗಿದೆ. ಈ ಹಿಂದೆ ಪ್ರೊ.ವೀರಭದ್ರಪ್ಪ ಕುಲಪತಿ ಆಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ಹಣದಲ್ಲಿ ₹ 4.25 ಕೋಟಿ ಬಳಕೆ ಮಾಡಲಾಗಿದೆ. ಆದರೆ ಆ ಹಣ ಸದ್ಬಳಕೆ ಆಗಿಲ್ಲ ಎಂದು ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ನೀಡಿದ್ದ ದೂರು ಆಧರಿಸಿ ವಿಶ್ವವಿದ್ಯಾಲಯದ ಅಡಳಿತ ಈ ಕ್ರಮ ಕೈಗೊಂಡಿದೆ. ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಡೀನ್ ಎಸ್.ವಿ.ಕೃಷ್ಣಮೂತಿ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚಿಸಲಾಗಿದ್ದು ಕನ್ನಡ ಭಾರತಿ ವಿಭಾಗದ ನಿರ್ದೇಶಕ ಜೆ.ಪ್ರಶಾಂತ ನಾಯಕ ದಾವಣಗೆರೆ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ.ಎಸ್.ಶ್ರೀಧರ್ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ಎಸ್. ಸಂತೋಷಕುಮಾರ್ ಹಾಗೂ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಉದ್ದಗಟ್ಟಿ ವೆಂಕಟೇಶ ಸಮಿತಿಯ ಉಳಿದ ಸದಸ್ಯರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.