ADVERTISEMENT

ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಕುಮಾರ್ ಪುಷ್ಕರ್

ಕುವೆಂಪು ವಿ.ವಿ: ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿಯ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:25 IST
Last Updated 14 ಜೂನ್ 2024, 16:25 IST
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಂಗಣದಲ್ಲಿ ಶುಕ್ರವಾರ ಹಕ್ಕಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದಿ್ದ ಅತಿಥಿಗಳೊಂದಿಗೆ ವಿದ್ಯಾರ್ಥಿಗಳು
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾಂಗಣದಲ್ಲಿ ಶುಕ್ರವಾರ ಹಕ್ಕಿ ಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದಿ್ದ ಅತಿಥಿಗಳೊಂದಿಗೆ ವಿದ್ಯಾರ್ಥಿಗಳು   

ಶಿವಮೊಗ್ಗ: ವನ್ಯಜೀವಿಗಳು ಮತ್ತು ಪ್ರಾಣಿಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮ ಅತ್ಯವಶ್ಯಕ. ಇದನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅಭಿಪ್ರಾಯಪಟ್ಟರು.

ಭದ್ರಾ ಹುಲಿ ಸಂರಕ್ಷಿತ ಅರಣ್ಯ 25ನೇ ವರ್ಷದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಪರಿಸರ ಪ್ರವಾಸೋದ್ಯಮ ಮಂಡಳಿ, ಭದ್ರಾ ಹುಲಿ ಸಂರಕ್ಷಿತ ಅರಣ್ಯ ಮಂಡಳಿ ಹಾಗು ಕುವೆಂಪು ವಿಶ್ವವಿದ್ಯಾಲಯ  ಜಂಟಿಯಾಗಿ ಹಮ್ಮಿಕೊಂಡ 11ನೇ ಹಕ್ಕಿ ಹಬ್ಬವನ್ನು ಶುಕ್ರವಾರ ಶಂಕರಘಟ್ಟದ ಬಸವ ಸಭಾ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮ ನೀತಿ ರೂಪಿಸಿದೆ. ಸದ್ಯದಲ್ಲೇ ಅನುಮೋದನೆ ಪಡೆಯಲಾಗುವುದು. ಜೊತೆಗೆ ಪರಿಸರ ಪ್ರವಾಸೋದ್ಯಮದ ಕುರಿತು ಸಂಶೋಧನೆಗಳ ನಡೆಸಲಾಗುತ್ತಿದೆ. ಪ್ರಕೃತಿ ಪ್ರಿಯರಿಗೆ ಟ್ರಕ್ಕಿಂಗ್ ಸೇರಿದಂತೆ ವಿವಿಧ ಪರಿಸರ ಚಟುವಟಿಕೆಗಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಬೇರೆಲ್ಲ ರೀತಿಯ ಪ್ರಾಣಿಗಳಿಗಿಂತಲ್ಲೂ ಹೆಚ್ಚಿನ ಪಕ್ಷಿಗಳ ಪ್ರಭೇದಗಳು ಕರ್ನಾಟಕದಲ್ಲಿ ಇವೆ. ಕರ್ನಾಟಕವು 1359 ಪಕ್ಷಿಪಭೇದಗಳ ಬೀಡಾಗಿದೆ. ಜಾಗತಿಕವಾಗಿ ಇರುವ ಪಕ್ಷಿಗಳ ಸಂಕುಲದ ಶೇ 10 ರಷ್ಟು ಭಾರತದಲ್ಲಿವೆ. ಅನೇಕ ಅಳಿವಿನಂಚಿನಲ್ಲಿರುವ ಪಕ್ಷಿಗಳು ಕರ್ನಾಟಕದಲ್ಲಿ ಸಂರಕ್ಷಣೆಗೆ ಒಳಪಟ್ಟಿವೆ ಎಂದು ಅವರು ತಿಳಿಸಿದರು.

ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ಸಫಾರಿ ಇಂದು ಜನಪ್ರಿಯ ಚಟುವಟಿಕೆ ಆಗಿದೆ. ಸಫಾರಿ ಹೋದಾಗ ಪ್ರಾಣಿ ಪಕ್ಷಿಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಕೆಲವೇ ಘಂಟೆಯಲ್ಲಿ ಎಲ್ಲವನ್ನೂ ನೋಡುವ ಹಂಬಲ ಜನರಿಗೆ ಇರುತ್ತದೆ. ಆದರೆ ಇದೊಂದು ಧ್ಯಾನ. ಮಾನವ-ಪ್ರಕೃತಿ-ಪ್ರಾಣಿ ಸಂಕುಲದ ನಂಟು-ಸೂಕ್ಷ್ಮತೆಗಳನ್ನು ಅರಿತು ನಂತರ ನೋಡಲು ತೆರಳಬೇಕು. ಸಾಕಷ್ಟು ತಾಳ್ಮೆ ಬೇಕು, ನಿರಂತರ ಅಲೋಚನೆಗೆ ಅಲ್ಲಿಂದ ಪ್ರಕ್ರಿಯೆ ಆರಂಭ ಆಗಬೇಕು. ಕೇವಲ ಮನರಂಜನೆ ಅಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಹನುಮಂತಪ್ಪ, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಯಶ್ಪಾಲ್  ಕ್ಷೀರಸಾಗರ್, ಕಾರ್ಯಯೋಜನೆ ಅಧಿಕಾರಿ ಸೋನಾಲ್ ವ್ರುಷ್ಟಿ, ಶಿವಮೊಗ್ಗ ವಲಯದ ಉಪ ಅರಣ್ಯಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್, ನಂದೀಶ್ ಎಲ್, ಆನಂದ್ ಕೆಸಿ, ರಮೇಶ್ ಬಾಬು, ಕುಲಸಚಿವ ಎ.ಎಲ್. ಮಂಜುನಾಥ್ , ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್‌.ಎಂ.ಗೋಪಿನಾಥ್, ವನ್ಯಜೀವಿ ವಿಭಾಗದ ಅಧ್ಯಕ್ಷ ಪ್ರೊ ವಿಜಯ್ ಕುಮಾರ್ ಉಪಸ್ಥಿತರಿದ್ದರು. 
 

ಕಪ್ಪುತಲೆ ಹೊನ್ನಕ್ಕಿ ಈ ಬಾರಿಯ ರಾಯಭಾರಿ..

ಕರ್ನಾಟಕದ ಪಕ್ಷಿ ಪ್ರಭೇದಗಳನ್ನು ನೆನೆಯಲು ಸಂರಕ್ಷಿಸಲು 2015ರಿಂದ ಪ್ರತಿವರ್ಷ ಪಕ್ಷಿ ಹಬ್ಬ ಆಚರಿಸಲಾಗುತ್ತಿದೆ. ಈ ಬಾರಿ ಹಕ್ಕಿ ಹಬ್ಬದ ರಾಯಭಾರಿಯಾಗಿ 'ಕಪ್ಪು ತಲೆಯ ಹೊನ್ನಕ್ಕಿ' ಎಂದು ಅರಣ್ಯ ಇಲಾಖೆ ಘೋಷಿಸಿದೆ. ಈ ಹಕ್ಕಿಯ ಕುರಿತು ಅರಿವು ಮೂಡಿಸಲು ಪುಸ್ತಕವೊಂದನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಪ್ರಕಟಿಸಿದ್ದು ಅದನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.