ಶಿವಮೊಗ್ಗ: ಯಾರೇ ನಿಧನರಾದರೂ ಅವರ ಪಾರ್ಥಿವ ಶರೀರಕ್ಕೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸುವುದು ಎಲ್ಲ ಧರ್ಮಗಳಲ್ಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯ.
ಜಿಲ್ಲೆಯಲ್ಲಿ ಸಾಕಷ್ಟು ಸ್ಮಶಾನ ಭೂಮಿಗಳಿದ್ದರೂ ಮೂಲಸೌಕರ್ಯಗಳ ಕೊರತೆ ಇದೆ. ಜಾಗದ ವಿವಾದಗಳಿವೆ. ಒತ್ತುವರಿ ಆರೋಪಗಳಿವೆ. ಜಾತಿ, ಧರ್ಮಗಳ ಜನರಿಗೆ ಪ್ರತ್ಯೇಕ ಭೂಮಿ ಇದ್ದರೂ ಅವು ಸಮಪರ್ಕವಾಗಿಲ್ಲ. ಕೆಲವು ಜಾತಿಗಳ ಜನರು ಜಾಗಕ್ಕಾಗಿ ಇಂದಿಗೂ ಹೋರಾಟ ನಡೆಸುತ್ತಿದ್ದಾರೆ. ಶಿವಮೊಗ್ಗ ನಗರ ಸೇರಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸ್ಮಾಶನಕ್ಕೆ ಜಾಗವೇ ಇಲ್ಲ. ರಸ್ತೆ ಬದಿ, ಕೆರೆ, ಕಟ್ಟೆಗಳ ಅಂಗಳಗಳಲ್ಲಿ ಶವಸಂಸ್ಕಾರ ನಡೆಸುತ್ತಿದ್ದಾರೆ.
ಸ್ಮಶಾನಕ್ಕೆ ಪ್ರತ್ಯೇಕ ಭೂಮಿ ಇಲ್ಲದ ಕಾರಣ 483 ಗ್ರಾಮಗಳಲ್ಲಿ ಕಾನು, ಸೊಪ್ಪಿನ ಬೆಟ್ಟ, ಅರಣ್ಯ ಭೂಮಿಗಳಲ್ಲೇ ಶವಸಂಸ್ಕಾರ ನಡೆಸಲಾಗುತ್ತಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 22 ಸ್ಮಶಾನಗಳಿವೆ. ರಾಗಿಗುಡ್ಡದಲ್ಲೇ ಮೂರು ರುದ್ರಭೂಮಿಗಳಿವೆ. ಹಲವು ರುದ್ರಭೂಮಿಗಳು ವಿವಾದಕ್ಕೀಡಾಗಿವೆ. ನಗರದ ನೇತಾಜಿ ವೃತ್ತದಲ್ಲಿರುವ ಕ್ರೈಸ್ತ ಸಮುದಾಯಕ್ಕೆ ಸೇರಿದ ಸ್ಮಶಾನ ಜಾಗದಲ್ಲಿ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಯವರು ನೀರಿನ ಟ್ಯಾಂಕ್ ಕಟ್ಟಿದ್ದನ್ನು ಖಂಡಿಸಿ ನ್ಯಾಯಾಲಯದ ಮೊರೆಹೋಗಿದ್ದರು. ನಗರದ ಗುಡ್ಡೆಕಲ್ ಸಮೀಪ ಇರುವ ಸ್ಮಶಾನ ಜಾಗ ಅತಿಕ್ರಮಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುಡ್ಡೆಕಲ್ ಸ್ಮಶಾನ ಹಿತರಕ್ಷಣಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅಲ್ಲಿ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಲಾಗಿತ್ತು.
ಕೆರೆ ಹಾಗೂ ಸ್ಮಶಾನ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೇವಾಲಾಲ್ ನಗರ, ತ್ರಿಮೂರ್ತಿ ನಗರದ ನಿವಾಸಿಗಳು ಆಗ್ರಹಿಸಿದ್ದಾರೆ. ನಗರ ಪಾಲಿಕೆ 3ನೇ ವಾರ್ಡ್ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರೇ ಹೆಚ್ಚಾಗಿ ಇದ್ದಾರೆ. ಸರ್ವೆ ನಂಬರ್ 110ರಲ್ಲಿ 6 ಎಕರೆ ಸರ್ಕಾರಿ ಜಾಗದಲ್ಲಿ ಕೆರೆ ಹಾಗೂ ಸ್ಮಶಾನ ಇದೆ. ಸುಮಾರು ವರ್ಷಗಳಿಂದ ಶವಸಂಸ್ಕಾರ ಮಾಡಲಾಗುತ್ತಿದೆ. ಅದನ್ನೂ ಈಗ ಒತ್ತುವರಿ ಮಾಡಲಾಗುತ್ತಿದೆ ಎನ್ನುವುದು ಅಲ್ಲಿನ ನಿವಾಸಿಗಳ ಆರೋಪ.
ಶವ ಹೂಳಲೂ ಅಸ್ಪೃಶ್ಯತೆ: ಶಿವಮೊಗ್ಗ ತಾಲ್ಲೂಕಿನ ಸೂಗೂರಿನ ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ದಲಿತರ ಶವ ಹೂಳಲೂ ಅವಕಾಶ ಇರಲಿಲ್ಲ. ತುಂಗಭದ್ರಾ ನದಿಯ ತಟದಲ್ಲಿ ಹೂಳುವ ಅನಿವಾರ್ಯ ಇತ್ತು. ದಲಿತರು ಮೃತಪಟ್ಟಾಗ ರಸ್ತೆಯ ಮೇಲೆ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಂದಾಯ ಇಲಾಖೆ ದಲಿತರಿಗಾಗಿಯೇ ಒಂದು ಎಕರೆ ಸ್ಮಶಾನ ಭೂಮಿ ಮಂಜೂರು ಮಾಡಿದ ನಂತರ ದಶಕಗಳ ಸಮಸ್ಯೆ ಬಗೆಹರಿದಿದೆ. ಹಲವು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನಕ್ಕೆ ಜಾಗವಿಲ್ಲದೆ ರಸ್ತೆ ಬದಿಗಳಲ್ಲೇ ಶವ ಸಂಸ್ಕಾರ ಮಾಡುತ್ತಿದ್ದಾರೆ.
ಅನುದಾನದ ಕೊರತೆ: ಸ್ಮಶಾನ ಭೂಮಿಗಳ ನಿರ್ವಹಣೆಗೆ ಪಾಲಿಕೆ ಪ್ರತಿ ವರ್ಷ ಬಜೆಟ್‌ನಲ್ಲಿ ₹ 50 ಲಕ್ಷದವರೆಗೂ ಪ್ರತ್ಯೇಕ ಅನುದಾನ ಮೀಸಲಿಡುತ್ತದೆ. ಆದರೆ, ಖರ್ಚು ಮಾಡುವುದು ಅಲ್ಪ ಪ್ರಮಾಣ. ಉಳಿದ ಹಣವನ್ನು ಇತರೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ. ಜತೆಗೆ 14 ಮತ್ತು 15ನೇ ಹಣಕಾಸು ನಿಧಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಲ್ಲೂ ₹ 5 ಲಕ್ಷದಿಂದ ₹ 10 ಲಕ್ಷ ಅನುದಾನ ಬಳಸಿಕೊಳ್ಳಲಾಗುತ್ತಿದೆ.
***
4 ಸಾವಿರ ಅರ್ಜಿಗಳು ಬಾಕಿ
ಅಂತ್ಯಸಂಸ್ಕಾರ ಯೋಜನೆಗೂ ಅನುದಾನ ಕೊರತೆ ಇದೆ. ಸರ್ಕಾರದ ನಿಯಮದ ಪ್ರಕಾರ ವ್ಯಕ್ತಿಯೊಬ್ಬರು ಮೃತಪಟ್ಟರೆ ಅವರ ಅಂತ್ಯಸಂಸ್ಕಾರಕ್ಕಾಗಿ ₹ 5 ಸಾವಿರ ನೆರವು ನೀಡಬೇಕು. ಆದರೆ, ಮೃತರ ಕುಟುಂಬಗಳಿಗೆ ಸಕಾಲದಲ್ಲಿ ಸೌಲಭ್ಯ ಸಿಗುತ್ತಿಲ್ಲ. ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇವೆ.
***
ಪರಿಶಿಷ್ಟರ ಶವಸಂಸ್ಕಾರಕ್ಕೆ ಸಂಕಟ
ಶಿವಾನಂದ ಕರ್ಕಿ
ತೀರ್ಥಹಳ್ಳಿ: ಗ್ರಾಮೀಣ ಭಾಗದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಸ್ಮಶಾನ ಕಾಯ್ದಿರಿಸುವ ಸರ್ಕಾರದ ಉದ್ದೇಶಕ್ಕೆ 4 ವರ್ಷ ಕಳೆದರೂ ನಿರೀಕ್ಷಿತ ಚಾಲನೆ ಸಿಕ್ಕಿಲ್ಲ. ಸರ್ಕಾರಿ, ಖಾಸಗಿ ಭೂಮಿ ಖರೀದಿ ಇಲ್ಲವೇ, ಭೂಸ್ವಾಧೀನ ಅನ್ವಯ ರುದ್ರಭೂಮಿ ನಿರ್ಮಿಸಬೇಕೆಂಬ ಸರ್ಕಾರದ ಆದೇಶ ಪಾಲನೆಯಾಗಿಲ್ಲ.
ರುದ್ರಭೂಮಿ ನಿರ್ಮಾಣ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 6 ತಿಂಗಳ ಹಿಂದೆ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳ ಸಮಿತಿ ರಚನೆಯಾಗಿತ್ತು. ರುದ್ರಭೂಮಿ ನಿರ್ಮಾಣ ಯೋಜನೆಗೆ ಹಿನ್ನೆಡೆಯಾದ ಕಾರಣ ಹಲವು ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಶವಸಂಸ್ಕಾರ ಸಮಸ್ಯೆ ತಂದೊಡ್ಡಿದೆ.
ರುದ್ರಭೂಮಿ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರದೆ ಆಡಳಿತ ಮೌನವಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿ, ಸಂಬಂಧಪಟ್ಟ ಉಪ ವಿಭಾಗಾಧಿಕಾರಿ ಸದಸ್ಯರಾಗಿದ್ದು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಪರಿಶಿಷ್ಟ ಕುಟುಂಬಕ್ಕೆ ಸ್ಮಶಾನ ಲಭ್ಯವಿಲ್ಲದ ಗ್ರಾಮಗಳನ್ನು ಗುರುತಿಸಿ ಜನಸಂಖ್ಯೆಗೆ ಅನುಗುಣವಾಗಿ ಜಮೀನು ಕಾಯ್ದಿರಿಸುವ ಅಧಿಕಾರ ಸಮಿತಿಗೆ ನೀಡಿದೆ.
2015 ಮೇ 5ರಂದು ನಡೆದ ರಾಜ್ಯ ಎಸ್ಸಿ, ಎಸ್ಟಿ ಪರಿಷತ್ ಸಭೆಯಲ್ಲಿ ಜನಸಂಖ್ಯೆ ಆಧರಿಸಿ 30 ಜಿಲ್ಲೆಗಳ ವ್ಯಾಪ್ತಿಗೆ ₹ 40 ಕೋಟಿ ಅನುದಾನ ಕಾಯ್ದಿರಿಸಲಾಗಿದೆ. ಖಾಸಗಿ ಪ್ರದೇಶವನ್ನು ಗುರುತಿಸಲು ಸಾಧ್ಯವಾಗದಿದ್ದರೆ ಭೂಸ್ವಾಧೀನ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿ 2015ರ ಅ. 19ರಂದು ಆದೇಶ ಹೊರಡಿಸಿದ್ದರು. ಮಾರುಕಟ್ಟೆ ದರ ಗಮನಿಸಿ ಖಾಸಗಿ ಜಮೀನು ಖರೀದಿಸುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಪ್ರಾದೇಶಿಕ ಆಯುಕ್ತರಿಂದ ಅನುಮೋದನೆ ಪಡೆದು ಸಮಾಜ ಕಲ್ಯಾಣ ಇಲಾಖೆ ಹೆಸರಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ರುದ್ರಭೂಮಿಗೆ 2 ಎಕರೆ ಭೂಮಿ ಗುರುತಿ ಸುವ ಜವಾಬ್ದಾರಿ ಕಂದಾಯ ಇಲಾಖೆಗೆ ನೀಡಿ ಸರ್ಕಾರ 2014 ಸೆ. 9ರಂದು ಆದೇಶ ಹೊರಡಿಸಿದೆ. ನೀರಿನ ಸೌಕರ್ಯ ಒದಗಿಸಲು ಕೊಳವೆಬಾವಿ, ಪೈಪ್ ಅಳವಡಿಕೆ, ಅಂತ್ಯಕ್ರಿಯೆ ನಡೆಸಲು ಅನುಕೂಲ ವಾಗುವಂತೆ ಮಂಟಪ ನಿರ್ಮಾಣ, ಸಂರಕ್ಷಣೆಗೆ ತಂತಿ ಬೇಲಿ ನಿರ್ಮಾಣ, ಸ್ಮಶಾನದ ಅಂಚಿನಲ್ಲಿ ಗಿಡಗಳನ್ನು ಬೆಳೆಸಿ ನಾಮಫಲಕ ಅಳವಡಿಸಲು ಅವಕಾಶ ನೀಡಿದೆ. ಸ್ಮಶಾನ ನಿರ್ಮಾಣಕ್ಕೆ ಅಗತ್ಯ ಹಣಕಾಸಿನ ನೆರವು ಬೇಕಾದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಲಾಗಿದ್ದರೂ ತಾಲ್ಲೂಕಿನ 247 ಗ್ರಾಮಗಳಲ್ಲಿ ಎಲ್ಲಿಯೂ ರುದ್ರಭೂಮಿ ನಿರ್ಮಾಣಗೊಳ್ಳದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ.
***
ಎಲ್ಲ ಇದ್ದೂ ಉಪಯೋಗಕ್ಕೆ ಬಾರದ ಸ್ಮಶಾನ!
ಹೊಸಕೊಪ್ಪ ಶಿವು
ಕೋಣಂದೂರು: ರಸ್ತೆ ಇಲ್ಲ, ವಿದ್ಯುತ್ ಇಲ್ಲ, ನೀರು ಇಲ್ಲ, ಗೇಟು ಇಲ್ಲ, ಬಾಗಿಲು ಇಲ್ಲ, ಗೋಡೆ ಇಲ್ಲ, ಚಾವಣಿ ಇಲ್ಲ. ಈ ಎಲ್ಲ ‘ಇಲ್ಲ’ಗಳ ಆಗರ ಇಲ್ಲಿನ ಅಗ್ರಹಾರ ರಸ್ತೆಯ ಕಂಪದಗದ್ದೆಯಲ್ಲಿರುವ ಸ್ಮಶಾನ.
ಇಲ್ಲಿನ ಮುಖ್ಯರಸ್ತೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಸ್ಮಶಾನ ತಲುಪಲು ಸರಿಯಾದ ರಸ್ತೆಯಿಲ್ಲ. ಸರ್ವೆ ನಂ. 182ರಲ್ಲಿರುವ ಸ್ಮಶಾನ ಜಾಗದಲ್ಲಿ ಚಿತಾಗಾರ, ಕಟ್ಟಿಗೆ ಸಂಗ್ರಹಣೆಯ ಕೊಠಡಿ, ವಿಧಿ–ವಿಧಾನಗಳಿಗಾಗಿ ಎರಡು ಹಾಲ್‌ಗಳಿವೆ. ಆದರೆ, ಅವುಗಳು ಉಪಯೋಗಕ್ಕೆ ಬರುವಂತಿಲ್ಲ. ಸ್ಮಶಾನದಲ್ಲಿರುವ ಈ ಮೂರು ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ರಾತ್ರಿ ವೇಳೆ ಸ್ಮಶಾನ ಪ್ರವೇಶ ದುಸ್ತರ. ನೀರಿಗಾಗಿ ಸ್ಮಶಾನದ ಇಕ್ಕೆಲಗಳಲ್ಲಿ ತೆರೆದ ಬಾವಿ ಇದೆ. ಆದರೆ, ಅದರಲ್ಲಿ ಮರದ ದಿಮ್ಮಿ ಬಿದ್ದು ವರ್ಷ ಕಳೆದಿದೆ. ಬಾವಿಯ ಮೇಲ್ಭಾಗ ಕುಸಿದಿದೆ. ಸ್ಮಶಾನಕ್ಕೆ ಕಬ್ಬಿಣದ ಗೇಟಿದೆ. ಆದರೆ ಅದನ್ನು ಹಾಕುವುದು, ತೆಗೆಯುವುದು ಗೊತ್ತೇ ಇಲ್ಲ. ಕಟ್ಟಿಗೆ ಸಂಗ್ರಹಿಸಿಡಲು ಕೊಠಡಿ ಇದೆ. ಅದರಲ್ಲಿ ಕಟ್ಟಿಗೆಗಿಂತ ಮದ್ಯದ ಖಾಲಿ ಕವರ್‌ಗಳೇ ಹೆಚ್ಚಿವೆ.
ಪ್ರಮುಖ ಹೋಬಳಿ ಕೇಂದ್ರವಾದ ಇಲ್ಲಿ ಶವಗಳನ್ನು ಸಾಗಿಸಲು ‘ಮುಕ್ತಿ ವಾಹನ’ ಓದಗಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಎಚ್.ಎ.ಉಮೇಶ್.
***
ಶವ ಸಂಸ್ಕಾರಕ್ಕೆ ಕಟ್ಟಿಗೆಯ ಕೊರತೆ
ಎಚ್.ಎಸ್. ರಘು
ಶಿಕಾರಿಪುರ: ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಪಟ್ಟಣದ ರುದ್ರಭೂಮಿಗಳಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಪಟ್ಟಣದ ಕುಮದ್ವತಿ ನದಿ ಸಮೀಪ ಹಾಗೂ ಹೊನ್ನಾಳಿ ರಸ್ತೆ ಹುಚ್ಚರಾಯನ ಕೆರೆ ಸಮೀಪದಲ್ಲಿ ರುದ್ರಭೂಮಿಗಳಿವೆ.
ನಾಗರಿಕರು ಮೃತ ವ್ಯಕ್ತಿ ಉಪಯೋಗಿಸಿದ ಚಾಪೆ, ಹಾಸಿಗೆ, ದಿಂಬು ಸೇರಿ ವಿವಿಧ ವಸ್ತುಗಳನ್ನು ರುದ್ರಭೂಮಿ ಸುತ್ತಲಿರುವ ಪ್ರದೇಶದಲ್ಲಿ ಹಾಕುತ್ತಿರುವುದರಿಂದ ಸ್ವಚ್ಛತೆ ಕೊರತೆ ಇದೆ.
ಅಂತ್ಯಸಂಸ್ಕಾರಕ್ಕೆ ಕಟ್ಟಿಗೆ ಕೊರತೆ: ಪಟ್ಟಣದಲ್ಲಿ ನಾಗರಿಕರು ಮೃತ ದೇಹ ಸುಡುವ ಮೂಲಕ ಅಂತ್ಯಸಂಸ್ಕಾರ ನಡೆಸುತ್ತಾರೆ. ಮೃತ ದೇಹ ಸುಡಲು ಅಗತ್ಯವಾದ ಕಟ್ಟಿಗೆಗೆ ಪರದಾಡಬೇಕಿದೆ. ಖಾಸಗಿ ವ್ಯಕ್ತಿಗಳ ಬಳಿ ಸಾವಿರಾರು ರೂಪಾಯಿ ಕೊಟ್ಟು ಅಂತ್ಯಸಂಸ್ಕಾರಕ್ಕೆ ಖರೀದಿಸುತ್ತಿದ್ದಾರೆ.
ಕೆಲ ಬಡವರಿಗೆ ಅಂತ್ಯಸಂಸ್ಕಾರ ನಡೆಸಲು ಅಗತ್ಯವಾದ ಕಟ್ಟಿಗೆ ಖರೀದಿಸಲು ಹಣ ಇರುವುದಿಲ್ಲ. ಇಂತಹ ಬಡ ಜನರ ಅಂತ್ಯಸಂಸ್ಕಾರಕ್ಕೆ ಅಗತ್ಯ ಕಟ್ಟಿಗೆ ಒದಗಿಸಲು ಅರಣ್ಯ ಇಲಾಖೆ ಮುಂದಾಗಬೇಕಾಗಿದೆ. ರುದ್ರಭೂಮಿಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಗಮನಹರಿಸಬೇಕಿದೆ.
ಸ್ವಚ್ಛತೆಗೆ ಮುಂದಾದ ಸಂಘಟನೆ: ಪಟ್ಟಣದಲ್ಲಿ ‘ಪರೋಪಕಾರಂ’ ಸಂಘಟನೆಯ ಪದಾಧಿಕಾರಿಗಳು ಈಚೆಗೆ ಹೊನ್ನಾಳಿ ರಸ್ತೆ ಪಕ್ಕದಲ್ಲಿರುವ ರುದ್ರಭೂಮಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ. ರುದ್ರಭೂಮಿ ಪ್ರದೇಶದಲ್ಲಿ ಗಿಡ ನೆಟ್ಟು ನೀರು ಹಾಕುವ ಕಾರ್ಯವನ್ನು ಮಾಡುವ ಮೂಲಕ ರುದ್ರಭೂಮಿ ಚಿತ್ರಣ ಬದಲಿಸಲು ಮುಂದಾಗಿದ್ದಾರೆ.
***
ಬ್ರಾಹ್ಮಣ, ಒಕ್ಕಲಿಗರಿಗಿಲ್ಲ ಸ್ಮಶಾನ ಭೂಮಿ
ರಿ.ರಾ. ರವಿಶಂಕರ
ರಿಪ್ಪನ್‌ಪೇಟೆ: ಪಟ್ಟಣದ ವ್ಯಾಪ್ತಿಯಲ್ಲಿ 10 ಸಾವಿರ ಜನಸಂಖ್ಯೆ ಇದೆ. ಇಲ್ಲಿ ಹಿಂದೂ, ಕ್ರೈಸ್ತ , ಮುಸ್ಲಿಂ ಪಂಗಡಗಳು ಪ್ರತ್ಯೇಕ ಸ್ಮಶಾನ ಭೂಮಿ ಹೊಂದಿವೆ. ಅಲ್ಲದೆ ವೀರಶೈವ ಲಿಂಗಾಯತರಿಗೆ 1 ಏಕರೆ, ಪರಿಶಿಷ್ಟ ಜಾತಿ, ಪಂಗಡಕ್ಕೆ 1 ಎಕರೆ ಪ್ರತ್ಯೇಕವಾಗಿ ನೀಡಲಾಗಿದೆ.
ಕೆರೆಹಳ್ಳಿಯಲ್ಲಿ ವಾಸವಿರುವ ಮರಾಠರಿಗೆ 2 ಎಕರೆ ಜಾಗ ಮಂಜೂರಾತಿ ಹಂತದಲ್ಲಿದೆ. ಮೇಲಿನ ಕೆರೆಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಒಕ್ಕಲಿಗ ಸಮುದಾಯಕ್ಕೆ 2 ಎಕರೆ ಸ್ಮಶಾನಭೂಮಿ ಮಂಜೂರಾತಿಗೆ 20 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಇಂದಿಗೂ ಗ್ರಾಮ ಪಂಚಾಯಿತಿಯ ಗ್ರಾಮ ಠಾಣಾ ಜಾಗದಲ್ಲೇ ಶವ ಸುಡುತ್ತಿದ್ದಾರೆ.
ಬ್ರಾಹ್ಮಣ ಸಮುದಾಯವೂ 2 ಎಕರೆ ಜಾಗ ಗುರುತಿಸಿಕೊಂಡು ಸುಮಾರು 15 ವರ್ಷಗಳಿಂದ ಪತ್ರ ವ್ಯವಹಾರ ನಡೆಸಿದೆ. ಇಂದಿಗೂ ಜಾಗ ಮಂಜೂರಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.