ADVERTISEMENT

ಶಿವಮೊಗ್ಗ | ಅನುದಾನ ಕೊರತೆ: ಆರು ವರ್ಷವಾದರೂ ಮುಗಿಯದ ಅರಸು ಭವನ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 7:02 IST
Last Updated 18 ನವೆಂಬರ್ 2024, 7:02 IST
<div class="paragraphs"><p>ಶಿವಮೊಗ್ಗದ ಸರ್ವಜ್ಞ ವೃತ್ತದ ಪಕ್ಕದಲ್ಲಿ ನಿರ್ಮಿಸುತ್ತಿರುವ ದೇವರಾಜ ಅರಸು ಭವನ ಕಾಮಗಾರಿ ಅಪೂರ್ಣಗೊಂಡಿರುವುದು</p></div>

ಶಿವಮೊಗ್ಗದ ಸರ್ವಜ್ಞ ವೃತ್ತದ ಪಕ್ಕದಲ್ಲಿ ನಿರ್ಮಿಸುತ್ತಿರುವ ದೇವರಾಜ ಅರಸು ಭವನ ಕಾಮಗಾರಿ ಅಪೂರ್ಣಗೊಂಡಿರುವುದು

   

ಶಿವಮೊಗ್ಗ: ಇಲ್ಲಿ ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ದೇವರಾಜ ಅರಸು ಭವನ ಕಾಮಗಾರಿ  ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.

ಇಲ್ಲಿನ ಸರ್ವಜ್ಞ ವೃತ್ತದ ಪಕ್ಕದಲ್ಲಿ ಭವನವನ್ನು ₹ 4.50 ಕೋಟಿ ಅನುದಾನದ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಸರ್ಕಾರ ಇಲ್ಲಿಯವರೆಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ₹ 3 ಕೋಟಿ ಅನುದಾನ ನೀಡಿದೆ. ಇನ್ನೂ ₹1.50 ಕೋಟಿ ಅನುದಾನ ನೀಡುವುದು ಬಾಕಿಯಿದೆ. ಸರ್ಕಾರ ಅನುದಾನ ನೀಡಲು ನಿರಾಸಕ್ತಿ ಧೋರಣೆ ಅನುಸರಿಸುತ್ತಿರುವ ಪರಿಣಾಮ ಕಾಮಗಾರಿ ನನೆಗುದಿಗೆ ಬಿದ್ದಿದೆ. 

ADVERTISEMENT

ಭವನದ ನೆಲಮಹಡಿಯಲ್ಲಿ ವಾಹನಗಳನ್ನು ನಿಲ್ಲಿಸಲು ಅವಕಾಶ ಇದೆ. ಮೊದಲ ಮಹಡಿಯಲ್ಲಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಎರಡನೇ ಮಹಡಿಯಲ್ಲಿ ದೊಡ್ಡ ಸಭಾಂಗಣ ಇರಲಿದೆ. ಇನ್ನೂ ಕೆಲವು ಕಾಮಗಾರಿಗಳು ಬಾಕಿ ಉಳಿದುಕೊಂಡಿದೆ. ಇಲ್ಲಿ ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಏರ್ಪಡಿಸಬಹುದಾಗಿದೆ. ಆದರೆ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಬಳಕೆಗೆ ಮುಕ್ತವಾಙಗುತ್ತಿಲ್ಲ.

2017–18ನೇ ಸಾಲಿನಲ್ಲಿ ದೇವರಾಜ ಅರಸು ಭವನ ಮಂಜೂರಾತಿ ಆಗಿದೆ. ಅದೇ ವರ್ಷ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. 6 ವರ್ಷ ಕಳೆಯುತ್ತ ಬಂದರೂ ಕಾಮಗಾರಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಈ ಅವಧಿಯಲ್ಲಿ ಹಲವಾರು ಸರ್ಕಾರಗಳು ಬದಲಾಗಿ ಇದೀಗ ಮತ್ತೆ ಕಾಂಗ್ರೆಸ್‌ ಆಡಳಿತಕ್ಕೆ ಬಂದಿದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅನುದಾನದ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ. 

ಭವನದ ಸುತ್ತಲಿನ ಪ್ರದೇಶದಲ್ಲಿ ಗಿಡಗಳು ಬೆಳೆದಿವೆ. ಹೀಗೇ ಬಿಟ್ಟರೆ ಈ ಜಾಗವು ಮುಂದಿನ ದಿನಗಳಲ್ಲಿ ವಿಷ ಜಂತುಗಳ ತಾಣ ಆಗುವುದರಲ್ಲಿ ಯಾವುದೇ ರೀತಿಯ ಅನುಮಾನ ಇಲ್ಲ. ಸರ್ಕಾರ ಮುತುವರ್ಜಿ ವಹಿಸುವ ಮೂಲಕ ಅನುದಾನ ಮಂಜೂರಾತಿ ಮಾಡಲು ಮುಂದಾದರೆ ಕಾಮಗಾರಿ ಪೂರ್ತಿಗೊಳಿಸಲು ಅನುಕೂಲವಾಗಲಿದೆ.

ದೇವರಾಜ ಅರಸು ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಇನ್ನೂ ₹ 1.50 ಕೋಟಿ ಅನುದಾನ ನೀಡುವಂತೆ ಸಾಕಷ್ಟು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ಅಧ್ಯಕ್ಷ ವಿ. ರಾಜು ಆರೋಪಿಸಿದರು.

ದೇವರಾಜ ಅರಸು ಭವನ ನಿರ್ಮಾಣ ಕಾಮಗಾರಿಗೆ ರಾಜ್ಯ ಸರ್ಕಾರ ₹ 1ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಸರ್ಕಾರದಿಂದ ಅನುದಾನ ಬಂದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು
ಶೋಭಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ
ರಾಜ್ಯ ಸರ್ಕಾರ ಕೂಡಲೇ ₹ 1.50 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ದೇವರಾಜ ಅರಸು ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ವಿಳಂಬ ಮಾಡಿದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು
ವಿ. ರಾಜು ಜಿಲ್ಲಾಧ್ಯಕ್ಷ ಜಿಲ್ಲಾ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟ
- ಅಪೂರ್ಣವಾಗಿರುವ ದೇವರಾಜ ಅರಸು ಭವನ ಕಾಮಗಾರಿ ಪೂರ್ಣಗೊಳ್ಳಲು ಬಾಕಿ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಬಿಡುಗಡೆ ಮಾಡಬೇಕು. ವಿಳಂಬ ಧೋರಣೆ ಅನುಸರಿಸಬಾರದು
ಎಂ.ಆರ್‌. ಬಸವರಾಜ ಶಿವಮೊಗ್ಗ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.