ADVERTISEMENT

ನಿರ್ವಹಣೆ ಕೊರತೆ: ನೀರು ಶುದ್ಧೀಕರಣ ಘಟಕ ಸ್ಥಗಿತ

ಕುಮಾರ್ ಅಗಸನಹಳ್ಳಿ
Published 3 ಅಕ್ಟೋಬರ್ 2024, 5:44 IST
Last Updated 3 ಅಕ್ಟೋಬರ್ 2024, 5:44 IST
<div class="paragraphs"><p>ಹೊಳೆಹೊನ್ನೂರು ಪಟ್ಟಣದಲ್ಲಿ ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿರುವ ನೀರು ಶುದ್ಧೀಕರಣ ಘಟಕ</p></div>

ಹೊಳೆಹೊನ್ನೂರು ಪಟ್ಟಣದಲ್ಲಿ ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿರುವ ನೀರು ಶುದ್ಧೀಕರಣ ಘಟಕ

   

ಹೊಳೆಹೊನ್ನೂರು: ಪಟ್ಟಣದಲ್ಲಿ ಅಳವಡಿಸಿರುವ ನೀರು ಶುದ್ಧೀಕರಣ ಘಟಕ ವರ್ಷದ ಹಿಂದೆಯೇ ಸ್ಥಗಿತಗೊಂಡಿದ್ದು, ಸ್ಥಳೀಯರಿಗೆ ಶುದ್ಧ ನೀರು ದೊರೆಯದಂತಾಗಿದೆ.

ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಪಟ್ಟಣ ಪಂಚಾಯಿತಿ, ತುಂಗಾ ನದಿಯ ನೀರನ್ನು ಶುದ್ಧೀಕರಿಸಿ ಪೂರೈಸುತ್ತಿದೆ. ಆದರೆ, ಆ ನೀರು ಕುಡಿಯಲು ಯೋಗ್ಯವಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ. ಅಂತೆಯೇ ಸಾರ್ವಜನಿಕರು ಅನ್ಯ ಮಾರ್ಗವಿಲ್ಲದೆ ಈ ನೀರನ್ನೇ ಬಳಸುತ್ತಿದ್ದಾರೆ.

ADVERTISEMENT

ಶುದ್ಧೀಕರಣ ಘಟಕದ ನಿರ್ವಹಣೆ ಜವಾಬ್ದಾರಿ ನೀಡಲಾಗಿದ್ದರೂ, ಅಧಿಕಾರಿಗಳು ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಘೋಷಣೆಯಾಗಿ 3 ವರ್ಷ ಕಳೆದರೂ ಚುನಾವಣೆ ನಡೆಯದೇ ಜನಪ್ರತಿನಿಧಿಗಳಿಲ್ಲ. ಅಧಿಕಾರಿಗಳು ಇದ್ದರೂ ಇಲ್ಲದಂತೆ ಆಗಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಪಟ್ಟಣದ ಜನರು ದೂರುತ್ತಿದ್ದಾರೆ.

ಸುತ್ತಮುತ್ತಲಿನ ಗ್ರಾಮಗಳ ಜನರು ಪಟ್ಟಣಕ್ಕೆ ಬಂದರೂ ನೀರು ಕುಡಿಯಲು ಇಷ್ಟಪಡುವುದಿಲ್ಲ. ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿದ್ದರಿಂದ ಕೆಲವು ಅಂಗಡಿ ಹಾಗೂ ಹೋಟೆಲ್‌ಗಳಲ್ಲಿ ತುಂಗಾ ನದಿ ನೀರನ್ನೇ ನೀಡಲಾಗುತ್ತದೆ. ಆದರೆ, ಗ್ರಾಹಕರು ಆ ನೀರು ಕುಡಿಯುವುದಕ್ಕೆ ಹಿಂದೇಟು ಹಾಕುತ್ತಾರೆ ಎಂದು ಸ್ಥಳೀಯರಾದ ಎಂ. ಶ್ರೀನಿವಾಸ್ ಹೇಳುತ್ತಾರೆ.

ತುಂಗಾ ನದಿ ನೀರನ್ನು ಬಳಸಲು ಪ್ರಾರಂಭಿಸಿದ್ದರಿಂದ ಚರ್ಮರೋಗ ಕಾಣಿಸಿಕೊಂಡಿದೆ. ಪ್ರತಿನಿತ್ಯ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಚಾರವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮೇಲಧಿಕಾರಿಗಳ ಗಮನಕ್ಕೆ ತರುವ ಕಾರ್ಯ ಮಾಡಿಲ್ಲ ಎಂದು ಸಾರ್ವಜನಿಕರು ದೂರಿದರು.

ಹಳ್ಳಿಗಳಲ್ಲೂ ಘಟಕ ಸ್ಥಗಿತ: ಹೊಳೆಹೊನ್ನೂರು ಸುತ್ತಮುತ್ತಲ ಗ್ರಾಮಗಳಾದ ಅಗಸನಹಳ್ಳಿ, ಅರಹತೊಳಲು, ಅರಕೆರೆ, ಅರಬಿಳಚಿ, ಮಂಗೋಟೆ, ಮೈದೊಳಲು, ಆನವೇರಿ, ಹನುಮಂತಾಪುರ, ಅರದೋಟ್ಲು, ಕಲ್ಲಿಹಾಳ್, ಕನಸಿನಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಿರ್ಮಿಸಲಾಗಿದ್ದ ನೀರು ಶುದ್ಧೀಕರಣ ಘಟಕಗಳು ಕೆಟ್ಟು ನಿಂತಿವೆ. ಶುದ್ಧ ನೀರಿಗಾಗಿ ಜನ ಬೇರೆ ಬೇರೆ ಗ್ರಾಮಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಘಟಕಗಳು ನಿರ್ವಹಣೆ ಇಲ್ಲದೇ ಕೆಟ್ಟು ನಿಂತಿದ್ದರೂ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.